Snehapriya.com

April 14, 2025

admin

ಈ ವಾರ ಇಂಟರ್ ವಲ್ ತುಂಟಾಟದ ಫೆಸ್ಟಿವಲ್..

Social Share :

ಚಿತ್ರಗಳನ್ನು ನೋಡಲು ಹೋದವರಿಗೆ ಮಧ್ಯಂತರ ವಿರಾಮ ಸಿಗುತ್ತದೆ ಎಂಬುದು ಸಾಮಾನ್ಯ. ಆದರೆ ಬದುಕಿನಲ್ಲಿಯೂ ಒಮ್ಮೆ ಇದು ಬರುತ್ತದೆ ಎಂಬುದನ್ನು ಚಿತ್ರತಂಡವೊಂದು ಸಾರಲು ಹೊರಟಿದೆ.

ಮೂವರು ಗ್ರಾಮೀಣ ಭಾಗದ ಹುಡುಗರ ತುಂಟಾಟ ಸಾರುವ ಚಿತ್ರವೊಂದು ಈ ವಾರ (ಮಾ.7)ಬಿಡುಗಡೆಗೆ ಸಜ್ಜಾಗಿದ್ದು, ಆ ಚಿತ್ರದ ಹೆಸರೇ ಇಂಟರ್ ವಲ್.

ಭರತವಷ್೯ ಪಿಚ್ಚರ್ಸ್ ಅಡಿ, ಸುಖೀ ಹಾಗೂ ಭರತ್ ಸೇರಿ ನಿರ್ಮಿಸಿರುವ ಹಾಗೂ ಭರತ್ ನಿರ್ದೇಶಿಸಿರುವ ಚಿತ್ರ ದಲ್ಲಿ ಯುವ ಸಮೂಹ ಆಕರ್ಷಿಸುವ ಎಲ್ಲಾ ಅಂಶಗಳಿವೆ.

ಶಶಿರಾಜ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರ ರಾವ್, ಸಹನ ಆರಾಧ್ಯ, ಸಮೀಕ್ಷ, ದಾನಂ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದಿನ ಯುವ ಹೃದಯಗಳು ಪ್ರೀತಿ ಪ್ರೇಮದ ಸುತ್ತ ಹೇಗೆಲ್ಲಾ ವರ್ತಿಸುತ್ತವೆ ಎಂಬುದರ ಸುತ್ತ ನಡೆಯುವ ಕಥೆಯಲ್ಲಿ ಪ್ರೇಕ್ಷಕರಲ್ಲಿ ನಗೆಯ ಬುಗ್ಗೆಯನ್ನೇ ಹರಿಸುವ ಅಂಶಗಳಿವೆ.

ಗಮನ ಸೆಳೆಯುವ ಕ್ಲೈಮ್ಯಾಕ್ಸ್ ಚಿತ್ರದ ಪ್ರಮುಖ ಅಂಶ ಎಂಬುದು ಚಿತ್ರತಂಡದ ಮಾತು. ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆ ಮಾಡಿರುವ ಹಾಡುಗಳಿಗೆ ವಿಜಯ್ ಪ್ರಕಾಶ್, ಚಂದನ್ ಶಟ್ಟಿ, ಆಲ್ ಓಕೆ ಅಲೋಕ್, ಸುನಿಧಿ ಗಣೇಶ್, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸುಕೇಶ್ ಬರೆದಿದ್ದು, ರಾಜ್ ಕಾಂತ್ ಛಾಯಾಗ್ರಹಣ, ಚಂದ್ರು ಬಂಡೆ ಸಾಹಸ, ಶಶಿಧರ್ ಸಂಕಲನ ಈ ಚಿತ್ರಕ್ಕಿದೆ.

ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಇದೇ ವಾರ ‘ಇಂಟಲ್ ವಲ್’ನ ಮನರಂಜನೆ ಚಿತ್ರಮಂದಿರಗಳಲ್ಲಿ ಸಿಗಲಿದೆ.

Social Share :

ಡಾರ್ಕ್ ವೆಬ್ ಕುರಿತ ಕಪಟಿ ಈ ವಾರ ಚಿತ್ರಮಂದಿರಗಳಲ್ಲಿ..

Social Share :

* ದಯಾಳ್ ಪದ್ಮನಾಬ್ ನಿರ್ಮಾಣ *

ಪ್ರಸ್ತುತ ಸನ್ನಿವೇಶಗಳಲ್ಲಿ ಭೇದಿಸಲಾಗದ ವಂಚನೆಯ ಜಾಲವಾಗಿರುವ ಡಾರ್ಕ್ ವೆಬ್ ನ ಕುರಿತ ಚಿತ್ರ ‘ಕಪಟಿ’ ಈ ವಾರ ಅಂದರೆ ಮಾರ್ಚ್ 7 ರಂದು ತೆರೆ ಕಾಣುತ್ತಿದೆ.

ಹಗ್ಗದ ಕೊನೆ, ಆ ಕರಾಳ ರಾತ್ರಿ ಸೇರಿದಂತೆ ಅನೇಕ ಸದಭಿರುಚಿಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ದಯಾಳ್ ಪದ್ಮನಾಭನ್ ಡಿ ಪಿಕ್ಚರ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ರವಿಕಿರಣ್ – ಚೇತನ್ ಎಸ್ ಪಿ ನಿರ್ದೇಶಿಸಿರುವ ಹಾಗೂ ಸುಕೃತ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖಪಾತ್ರದಲ್ಲಿ ನಟಿಸಿರುವ ಚಿತ್ರವು ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ.

ಈಚೆಗೆ ಬಿಡುಗಡೆ ಕಂಡಿದ್ದ ಚಿತ್ರದ ಟ್ರೈಲರ್ ಜನ ಮನ ಸೆಳೆದಿರುವುದು ವಿಶೇಷವಾಗದೆ. ನಿರ್ಮಾಪಕರಾದ ಕೆ.ಮಂಜು, ರಮೇಶ್ ಯಾದವ್ ಹಾಗೂ ಅವಿನಾಶ್ ಯು ಶೆಟ್ಟಿ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು.

ಮೂಲತಃ ಸಾಫ್ಟ್‌ವೇರ್ ಉದ್ಯೋಗಿಗಳಾಗಿರುವ ರವಿಕಿರಣ್ ಹಾಗೂ ಚೇತನ್ ಎಸ್ ಪಿ ಡಾರ್ಕ್ ವೆಬ್ ನ ಆಳವನ್ನು ಅರಿತು ಚಿತ್ರವನ್ನು ಮಾಡಿದ್ದಾರೆ ಎಂಬುದು ನಿರ್ಮಾಪಕ ದಯಾಳ್ ಪದ್ಮನಾಬ್ ವಿವರಣೆ.

ಈ ಚಿತ್ರದ ನಿರ್ಮಾಣದ ನಂತರ ನನಗೆ ಸಿಕ್ಕ ಇವರು ಸಂಪೂರ್ಣ ಜವಾಬ್ದಾರಿ ನೀಡಿದರು. ಚಿತ್ರ ನಿಜಕ್ಕೂ ಉತ್ತಮವಾಗಿ ಮೂಡಿ ಬಂದಿದೆ ಮತ್ತು ಇಂದಿನ ಯುವ ಸಮೂಹವನ್ನು ಸೆಳೆಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳುತ್ತಾ ಹೋದರು ದಯಾಳ್.

ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಸಾಮಾನ್ಯ ಜನರಿಗೆ ಮೊಬೈಲ್ ಮಾತ್ರ ಗೊತ್ತು. ಆದರೆ ಅದೇ ಮೊಬೈಲ್ ನಿಂದ ಮೋಸ ಹೋಗುವುದು ತಿಳಿದಿಲ್ಲ ಎಂಬ ವಿವರಣೆ ಕೊಟ್ಟರು ನಿರ್ದೇಶಕರು.

ಇಲ್ಲಿ ಕ್ಯಾಬ್ ಡ್ರೈವರ್, ಮೆಡಿಕಲ್ ವಿದ್ಯಾರ್ಥಿ ಹಾಗೂ ಫ್ಯಾಷನ್ ಡಿಸೈನರ್ ಮೂರು ಮುಖ್ಯಪಾತ್ರಗಳಿದ್ದು, ಆ ಪಾತ್ರಗಳನ್ನು ಸಾತ್ವಿಕ್ ಕೃಷ್ಣನ್, ದೇವ್ ದೇವಯ್ಯ ಹಾಗೂ ಸುಕೃತ ವಾಗ್ಲೆ ನಿಭಾಯಿಸಿದ್ದಾರೆ.

ಇದೊಂದು ಜನಸಾಮಾನ್ಯರ ಕಥೆ. ಆನ್‌ಲೈನ್ ಶೋಷಣೆಯ ಪರಿಣಾಮಗಳು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಹೇಗೆ ಮೋಸ ಮಾಡಲಾಗುತ್ತಿದೆ ಎಂಬುದನ್ನು ಸಹ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.

Social Share :

ಸಂಭ್ರಮದ ಸಿನಿಮೋತ್ಸವ : ಸ್ಟಾರ್ ಗಳು ಯಾವೊತ್ತೂ ಪಾಲ್ಗೊಂಡಿಲ್ಲ..

Social Share :

* 16ನೇ ಬೆಂಗಳೂರು ಸಿನಿಮೋತ್ಸವ ಅದ್ದೂರಿ ಉದ್ಘಾಟನೆ *

* ಮೈಸೂರಿನಲ್ಲಿ ವಿಶ್ವದರ್ಜೆಯ ಚಿತ್ರನಗರಿ ನಿರ್ಮಾಣ : ಮುಖ್ಯಮಂತ್ರಿ ಭರವಸೆ *

* ಸ್ಟಾರ್ ನಟರ, ಕಲಾವಿದರ ಬಗ್ಗೆ ಅಸಮಾಧಾನ ಹೊರಹಾಕಿದ ಡಿಕೆಶಿ *

* ಇದು ಮನೆಯ ಕಾರ್ಯಕ್ರಮ ಎಂದ ಶಿವಣ್ಣ *

* ಕುವೆಂಪು, ಬಸವಣ್ಣ ನೆನೆದು ಅದ್ಭುತ ಭಾಷಣ ಮಾಡಿದ ಕಿಶೋರ್ *

* ಸಿಹಿ ಸಿಂಚನವಾದ ‘ಸರ್ವ ಜನಾಂಗದ ಶಾಂತಿಯ ತೋಟ’ *

ಸಮಾನಾಂತರ ಸಿನಿಮಾ (ಪ್ಯಾರೆಲೆಲ್ ಸಿನಿಮಾ)ಗಳ ಹಬ್ಬವಾಗಿ ಆರಂಭಗೊಂಡ ‘ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ ದಲ್ಲಿ ಸ್ಟಾರ್ ನಟರು ಅಥವಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಇತಿಹಾಸವೇ ಇಲ್ಲ..

ಹಿಂದೆ ಅಧ್ಯಕ್ಷರಾಗಿದ್ದ ರಾಜೇಂದ್ರಸಿಂಗ್ ಬಾಬು ಅವರು ಚಿತ್ರೋತ್ಸವದಲ್ಲಿ ಸ್ಟಾರ್ ನಟರು ಪಾಲ್ಗೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನ ಹೊರ ಹಾಕಿದ್ದರು. ಅದನ್ನು ಹೊರತುಪಡಿಸಿ ಇನ್ಯಾರು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ..

ಆದರೆ ಶನಿವಾರ ನಡೆದ 16 ನೇ ಸಿನಿಮೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಎಚ್ಚರಿಕೆ ಮಾತ್ರ ಮಾಧ್ಯಮಗಳಿಗೆ ಹೆಚ್ಚಿನ ಆಹಾರ ಒದಗಿಸಿದೆ.

ನಿಜ ಹೇಳಬೇಕೆಂದರೆ ಮುಖ್ಯ ವಾಹಿನಿ ಚಿತ್ರಗಳಿಗೆ ಚಿತ್ರೋತ್ಸವದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನೇ ನೀಡಲಾಗುತ್ತಿರಲಿಲ್ಲ. ಎಲ್ಲೋ ಕೆಲವು ಜನಪ್ರಿಯ ಚಿತ್ರಗಳು ಉತ್ಸವದಲ್ಲಿ ಪ್ರದರ್ಶನ ಕಾಣುತ್ತಿದ್ದವು ಅಷ್ಟೇ.

ಬರಬರುತ್ತಾ ಕನ್ನಡದ ಕಮರ್ಷಿಯಲ್ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವಂತೆ ನೋಡಿಕೊಳ್ಳಲಾಯಿತು. ಆಗಲೂ‌ ಸ್ಟಾರ್ ನಟರು ಅಥವಾ ಹೆಚ್ಚಿನ ಕಲಾವಿದರು ಚಿತ್ರೋತ್ಸವದಲ್ಲಿ ಭಾಗವಹಿಸಲೇ ಇಲ್ಲ.

ಇದಕ್ಕೆ ಕಾರಣ ಚಿತ್ರರಂಗದಲ್ಲಿ ಇರುವವರಿಗೆ ತಿಳಿಯದ ವಿಷಯವೇನೂ ಅಲ್ಲ; ಅದು ಪೇಮೆಂಟ್ ವಿಷಯ. ಕಲಾವಿದರ ಪೇಮೆಂಟ್ ಸಂದಾಯವಾಗದಿದ್ದರೆ ಯಾವ ಕಲಾವಿದರೂ ಯಾವ ಕಾರ್ಯಕ್ರಮ (ಹೆಚ್ಚಿನ)ದಲ್ಲಿಯೂ ಭಾಗವಹಿಸುವುದಿಲ್ಲ.

ಚಿತ್ರೋತ್ಸವದಲ್ಲಿ ಭಾಗವಹಿಸುವ ಪರಭಾಷೆಯವರಿಗೆ ನೀಡುವಂತೆ ನಮಗೂ ನೀಡಲಿ ಎಂಬುದು ಬಹಳಷ್ಟು ಕಲಾವಿದರ ಆಶಯ. ಆದರೆ ಅದನ್ನು ಅವರು ಬಾಯಿ ಬಿಟ್ಟು ಹೇಳುವುದಿಲ್ಲ.

ಹಿಂದೆ ಬಾಲಿವುಡ್ ನಟಿ ಕರೀನಾ ಕಪೂರ್ ಅವರನ್ನು ಚಿತ್ರೋತ್ಸವದ ಮುಖ್ಯ ಅತಿಥಿಯಾಗಿ ಕರೆತಂದಾಗ ಅವರಿಗೆ ನೀಡಲಾದ ಸಂಭಾವನೆ ಎಷ್ಟು ದೊಡ್ಡದೆಂಬುದರ ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು‌.

ರಾಜೇಂದ್ರಸಿಂಗ್ ಬಾಬು ‌ಅವರೇ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಾಲಿವುಡ್ ನಟ ವಿಜಯ್ ಅಮೃತ್‌ರಾಜ್, ಬಾಲಿವುಡ್ ನ ಸಂಜಯ್ ಲೀಲಾ ಬನ್ಸಾಲಿ, ಜಯಾ ಬಚ್ಚನ್ ಹೀಗೆ ದೊಡ್ಡ ದೊಡ್ಡ ಸಿನಿಮಾ ದಿಗ್ಗಜರನ್ನು ಕರೆಸಿದ ಇತಿಹಾಸವೂ ಇದೆ.

ಆದರೆ ಕನ್ನಡದ ಸ್ಟಾರ್ ಗಳು ಸಿನಿಮೋತ್ಸವದಲ್ಲಿ ಪಾಲ್ಗೊಳ್ಳುವುದರಲ್ಲಿ ನಿರಾಸಕ್ತಿ ಏಕೆ ಎಂಬುದಕ್ಕೆ ಚಲಚಚಿತ್ರ ವಾಣಿಜ್ಯ ಮಂಡಳಿ ಉತ್ತರ ನೀಡಬೇಕಾಗಿದೆ.

ಚಲನಚಿತ್ರ ಅಕಾಡೆಮಿ ಕಾರ್ಯ ನಿರ್ವಹಣೆ ಬಗ್ಗೆ ಅಪಸ್ವರ ಏನೇ ಇದ್ದರೂ ಅಂತಾರಾಷ್ಟ್ರೀಯ ಮಟ್ಟದ ಸಿನಿಮೋತ್ಸವ ಸಂಘಟಿಸುತ್ತದೆ. ಅದು ಪ್ರತಿ ಬಾರಿಯೂ ಯಶಸ್ವಿಯೂ ಆಗುತ್ತದೆ.

ಮುಖ್ಯವಾಗಿ ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡದ ಚಿತ್ರಗಳು ತಯಾರಾಗುತ್ತವೆ; ಈಗಂತೂ ಕಥಾ ಸಾಮರ್ಥ್ಯ (ಕಂಟೆಂಟ್ ಸಿನಿಮಾ) ಇರುವ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತವೆ ಎಂದರೆ ಅದಕ್ಕೆ ಮೂಲ ಈ ಚಿತ್ರೋತ್ಸವ.

ಏಕೆಂದರೆ ಇಲ್ಲಿ ಭಾಗವಹಿಸುವ ಪ್ರತಿ ಸಿನಿಮಾಸಕ್ತನಲ್ಲಿಯೂ ನಾನೊಂದು ಚಿತ್ರವನ್ನು ನಿರ್ದೇಶನ ಮಾಡಬೇಕೆಂಬ ಆಸೆ ಮೊಳೆಯುತ್ತದೆ. ಅದರ ಮೂರ್ತ ರೂಪವೇ ಈ ಕಾಲದಲ್ಲಿ ಬಿಡುಗಡೆ ಕಾಣುತ್ತಿರುವ ವಾರಕ್ಕೆ 10 ಸಿನಿಮಾಗಳು.

ಇದೇ ಭಾನುವಾರದಿಂದ ಇನ್ನು ಒಂದು ವಾರಗಳ ಕಾಲ ಈ ಸಿನಿಮೋತ್ಸವ ಕಲಾಸಕ್ತರಿಗೆ ಹಬ್ಬದಂತೆ ರಸದೌತಣ ಬಡಿಸುತ್ತದೆ..

Social Share :

ಅಪಾಯವಿದೆ ಎಚ್ಚರಿಕೆ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಮಂಜುನಾಥ್ ವಿ.ಜಿ. ಹಾಗೂ ಪೂರ್ಣಿಮಾ ಗೌಡ

ನಿರ್ದೇಶನ : ಅಭಿಜಿತ್ ತೀರ್ಥಹಳ್ಳಿ

ನೆಗೆಟಿವ್ ಹುಡುಗರ ಹರ ಸಾಹಸಗಳು..

ಮೂವರು ಸೋಮಾರಿ ಹುಡುಗರು..!

ಆದರೆ ಯಾವುದೇ ರಿಸ್ಕ್ ಎದುರು ಹಾಕಿಕೊಳ್ಳುವಂತಹ ಧೈರ್ಯವಂತರು. ಬದುಕಿನಲ್ಲಿ ದುಡಿಮೆಯ ಮಾರ್ಗ ಕಂಡುಕೊಳ್ಳುವಲ್ಲಿ ವಿಫಲರಾಗಿ ಅಡ್ಡ ದಾರಿಗೆ ಹೊಂಚು ಹಾಕಿದವರು..

ಕೈಯಲ್ಲಿ ಕಾಸಿಲ್ಲದೆ ಊರೆಲ್ಲಾ ಸಾಲ ಮಾಡಿ ಮರ್ಯಾದೆ ತೆಗೆಸಿಕೊಂಡರೂ, ಮನೆ ಬಾಡಿಗೆ ಕಟ್ಟದೆ ಹೋದರೂ ದಾರಿಯಲ್ಲಿ ಅಪಘಾತವಾದ ಮಹಿಳೆಗೆ ಸಿಕ್ಕಿದ ಹಣವನ್ನು ಕೊಟ್ಟು ಔದಾರ್ಯ ಮೆರೆಯುವವರು..

ಬದುಕಿಗಾಗಿ ದುಡಿಯುವ ಮನಸ್ಸಿಲ್ಲ; ಡೀಲ್ ಗಳನ್ನು ಕುದುರಿಸಿ ಹಣ ಮಾಡುವ ದಾರಿಯಲ್ಲಿ ಸಫಲತೆ ಕಾಣದಾದಾಗ ನೆಗೆಟಿವ್ ಆಲೋಚನೆ ಮಾಡಿ ಅರಣ್ಯದ ಒಳಗೆ ಪ್ರವೇಶ ಪಡೆಯುವ ಅವರಿಗೆ ತೆರೆದುಕೊಳ್ಳುವುದು ಭಯಾನಕವಾದ ನಿಗೂಢ ಜಗತ್ತು..

ಮೊದಲರ್ಧ ಹುಡುಕಾಟದಲ್ಲಿ ಮುಗಿದು ಹೋಗುತ್ತದೆ. ಕಾಡಿನ ಭಯಾನಕತೆಗಿಂತ ಅಲ್ಲಲ್ಲಿ ಪ್ರತ್ಯಕ್ಷವಾಗುವ ಮುಖವಾಡಗಳು ಭಯ ಹುಟ್ಟಿಸುತ್ತವೆ. ಆ ಮೂವರಲ್ಲಿ ಒಬ್ಬ ಪುಕ್ಕಲ. ಆತನ ಎಲ್ಲಾ ವರಸೆಗಳು ಪ್ರೇಕ್ಷಕನಿಗೆ ನಗೆ ತರಿಸುತ್ತವೆ.

ಉತ್ತರಾರ್ಧದಲ್ಲಿ ದೆವ್ವ ಪಿಶಾಚಿ ಮಾದರಿಯಲ್ಲಿ ಭಯ ಹುಟ್ಟುತ್ತದೆ. ಕಾಡಿನೊಳಗೇ ರಾತ್ರಿಯಲ್ಲಿ ನಡೆಯುವ ಘಟನೆಗಳು ಮತ್ತು ಆ ಜಾಗಕ್ಕೆ ಇರಬಹುದಾದ ಹೆಸರು (ಕವಲೆ ದುರ್ಗ, ಅಘೋರಿ ಗುಡ್ಡ, ರಣಪ್ರೇತ) ಹೀಗೆ ಕಥೆಗಳು ಹುಟ್ಟಿಕೊಳ್ಳುತ್ತವೆ.

ಅಂತಿಮವಾಗಿ ಕಾಡು ದೋಚುವ ಸಂಚುಕೋರರ ವ್ಯವಸ್ಥಿತ ಪಿತೂರಿ‌ ಅರ್ಥವಾಗುವಷ್ಟರಲ್ಲಿ ಪ್ರೇಕ್ಷಕ ಸುಸ್ತೋ ಸುಸ್ತು..

ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ನಿರ್ವಹಿಸಿರುವ ಮೂರು ಪಾತ್ರಗಳು ಬೇರೆ ಬೇರೆ ನೆಲೆಯಲ್ಲಿ ಗಮನ ಸೆಳೆಯುತ್ತವೆ..

ಉಳಿದಂತೆ ಎರಡು ಶೆಡ್ ನಲ್ಲಿ ನಟಿಸಿರುವ ಅಶ್ವಿನ್ ಹಾಸನ್, ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಪಾತ್ರ ಟಾಲೆಂಟೆಡ್, ಅಜ್ಜನ ಪಾತ್ರದಲ್ಲಿ ಮಿಮಿಕ್ರಿ ಕುಮಾರ್, ಒಂದು ಹಾಡಿನಲ್ಲಿ ಪ್ರಾಧಾನ್ಯತೆ ಪಡೆದಿರುವ ರಾಧಾ ಭಗವತಿ, ತಾಯಿ ಪಾತ್ರದಲ್ಲಿ ಕಲ್ಪನಾ ಖುಷಿ ಪಾತ್ರಗಳು ಗಮನ ಸೆಳೆಯುತ್ತವೆ.

ಮುಖ್ಯ ಪಾತ್ರಧಾರಿ ಸೂರಿಯ ಬೈಕ್ ಮತ್ತು ಅದರ ಮೇಲೆ ವ್ಯಕ್ತವಾಗುವ ಸಾಂದರ್ಭಿಕ ಬರಹಗಳು, ಕಾಡಿನಲ್ಲಿ ಸದಾ ಗೋಚರಿಸುವ ಪಂಜಿನ ಬೆಳಕು; ಅಘೋರಿ ಗುಡ್ಡದ ರಣಪ್ರೇತದ ಕಥೆಯಲ್ಲಿ ಬರುವ ವಿವಿಧ ಪಾತ್ರಗಳು ಗಮನಾರ್ಹ.

ಆದರೆ ಬ್ಯಾಚುಲರ್ ಹುಡುಗರ ಮೇಲೆ ಅಸಹ್ಯವಾಗುವಂತಹ ಸನ್ನಿವೇಶಗಳು ಬೇಕಿರಲಿಲ್ಲ. ಕುಡಿದು ಸಂದರ್ಶನಕ್ಕೆ ಹೋಗುವ ಹಾಗೂ ತಾಯಿ ಮಗು ಕಾಪಾಡುವ ದೃಶ್ಯಗಳ ಸಂಯೋಜನೆಗಳಲ್ಲಿ ಕೊರತೆ ಕಾಣುತ್ತದೆ.

ಛಾಯಾಗ್ರಾಹಕ ಕಮ್ ಸಂಗೀತ ನಿರ್ದೇಶಕ ಸುನಾದ್ ಗೌತಮ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

Social Share :

ಪ್ಯಾರ್ ಗೆ ಕ್ರೇಜಿ ಸ್ಟಾರ್ ಸಹಕಾರ ಪ್ರೇಮಕ್ಕೆ ಸದಾ ಜೊತೆಗಿರುವೆ..’

Social Share :

ಅಪ್ರತಿಮ ಕನಸುಗಾರ; ಅದ್ಭುತ ಪ್ರೇಮಲೋಕದ ಸೃಷ್ಟಿಕರ್ತ; ಪ್ರೇಮಿಗಳ ಪಾಲಿನ ಸಾರ್ವಕಾಲಿಕ ಕ್ರೇಜಿ ಸ್ಟಾರ್ ಡಾ.ವಿ.ರವಿಚಂದ್ರನ್ ಹೊಸಬರಿಂದ ಕೂಡಿದ ಚಿತ್ರತಂಡದ ಭಾಗವಾಗಿದ್ದಾರೆ..

ಈಚೆಗೆ ನಡೆದ ಶೀರ್ಷಿಕೆ ಅನಾವರಣ ಸಂದರ್ಭದಲ್ಲಿ ಕನಸುಗಾರ ವಿ.ರವಿಚಂದ್ರನ್ ಇಡೀ ಚಿತ್ರದ ಜೀವಾಳ ಎಂದು ಹೇಳಿಕೊಂಡಿತು ಚಿತ್ರತಂಡ.

ಅದು ಪ್ಯಾರ್..!

ಎಸ್.ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್.ಎಸ್.ನಾಗಶ್ರೀ ನಿರ್ಮಾಣ ಮಾಡುತ್ತಿರುವ ನೂತನ ಚಿತ್ರವನ್ನು ಮೂಲತಃ ಸಂಕಲನಕಾರ‌ ಆಗಿರುವ ಸುಪ್ರೀತ್ ನಿರ್ದೇಶನ ಮಾಡುತ್ತಿದ್ದಾರೆ.

ಭರತ್ ಮತ್ತು ರಾಶಿಕಾ ಶೆಟ್ಟಿ ಮುಖ್ಯ ಪಾತ್ರದಲ್ಲಿರುವ ಚಿತ್ರದಲ್ಲಿ ಡಾ.ವಿ.ರವಿಚಂದ್ರನ್ ತಂದೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅದರ ಕುರಿತು ಹೆಚ್ಚಿನ ವಿವರಗಳನ್ನು ಚಿತ್ರತಂಡ ನೀಡಲಿಲ್ಲ.

‘ನಿಮಗೆ ಚಿತ್ರದಲ್ಲಿ ಜೋಡಿಯಾಗಿ ಯಾರಿದ್ದಾರೆ. ಇದರಲ್ಲಿ ರಸಿಕತೆಯ ಪ್ರಮಾಣ ಎಷ್ಟು ಎಂಬ ತಮಾಷೆಯ ಪ್ರಶ್ನೆಗೆ, ತಂದೆ ಪಾತ್ರ ಎಂದು ಹೇಳಿದ್ದಾರೆ. ಮಿಕ್ಕಿದ್ದು ತಿಳಿದಿಲ್ಲ ಎಂಬ ಉತ್ತರ ಕೊಟ್ಟರು ಕ್ರೇಜಿ ಸ್ಟಾರ್.

ಇದು ಪ್ರೇಮದ ಭಾವುಕ ಪಯಣ ಎಂಬುದನ್ನು ಚಿತ್ರತಂಡ ಹೇಳಿಕೊಂಡಿತು. ಪ್ರೇಮ ಲೋಕದ ಸೃಷ್ಟಿಕರ್ತ ರವಿಚಂದ್ರನ್ ಸರ್ ನಮ್ಮ ಜೊತೆ ಇದ್ದಾರೆ ಎಂಬುದೇ ಹೆಮ್ಮೆಯ ವಿಷಯ ಎಂದೂ ಹೇಳಿಕೊಂಡಿತು ತಂಡ.

ನಿರ್ದೇಶನದ ಆಸೆ ಹೊತ್ತು ಚಿತ್ರರಂಗಕ್ಕೆ ಬಂದ ನಾಗ ಶ್ರೀ ಅವರಿಗೆ ಇಲ್ಲಿ ನಿರ್ಮಾಣದ ಹೊಣೆ ಹೊರಬೇಕಾಯಿತಂತೆ. ನಿರ್ದೇಶಕ ಸುಪ್ರೀತ್ ಆಶಯದ ಮೇರೆಗೆ ಹುಡುಗಿಯ ತಂದೆ ಪಾತ್ರಕ್ಕೆ ಡಾ.ವಿ.ರವಿಚಂದ್ರನ್ ಅವರನ್ನೇ ಒಪ್ಪಿಸಲಾಯಿತಂತೆ..!

ಚಿತ್ರದ ಮುಕ್ಕಾಲು ಪಾಲು ಚಿತ್ರೀಕರಣ ಮುಗಿದಿದೆ. ರವಿ ಸರ್ ಪಾತ್ರದ ಜಾಗವಷ್ಟೇ ಖಾಲಿ ಇದೆ ಎಂದರು ನಿರ್ದೇಶಕ ಸುಪ್ರೀತ್.

ಕ್ಯೂಟ್ ಜೋಡಿಯ ಪ್ರೇಮದ ಜೊತೆಗೆ ತಂದೆ ಮಗಳ ಬಾಂಧವ್ಯ ಇಲ್ಲಿ ಪ್ರಾಮುಖ್ಯತೆ ವಹಿಸುತ್ತದೆ. ತಂದೆಯಾಗಿ ರವಿಚಂದ್ರನ್ ಸರ್ ಕಾಣಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜೋಡಿ ಯಾರಾಗಬೇಕು ಎಂಬುದರ ಬಗ್ಗೆ ಚಿತ್ರತಂಡ ತಲೆ ಕೆಡಿಸಿಕೊಂಡಿದೆ ಎಂದರು ನಿರ್ದೇಶಕರು.

ಚಿತ್ರಕ್ಕೆ ರಾಜಸ್ಥಾನ, ಅಂಡಮಾನ್ ದ್ವೀಪ ಅಲ್ಲದೆ ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಈಗಾಗಲೇ 70ಕ್ಕೂ ಹೆಚ್ಚು ದಿನಗಳವರೆಗೆ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರವೂ ಬಂತು ಅವರಿಂದ.

ಭರತ್ ಹಾಗೂ ರಾಶಿಕಾ ಶೆಟ್ಟಿ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.
ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಪಳನಿ ಡಿ.ಸೇನಾಪತಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಬಾಲಿವುಡ್ ಗಾಯಕರಾದ ಶ್ರೇಯಾ ಘೋಷಾಲ್, ಸೋನು ನಿಗಮ್, ಕುನಾಲ್ ಗಾಂಜಾವಾಲ, ಪಲಾಕ್ ಮುಚ್ಚಲು ಜೊತೆಗೆ ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಕೂಡ ಚಿತ್ರದಲ್ಲಿ ಹಾಡಿದ್ದಾರೆ.

ಹಿರಿಯನಟ ಶ್ರೀನಿವಾಸ ಮೂರ್ತಿ, ವಿಜಯ ಸೂರ್ಯ, ಶಂಕರ್ ಅಶ್ವಥ್ ಉಳಿದ ಪಾತ್ರವರ್ಗದಲ್ಲಿದ್ದಾರೆ ಎಂಬ ಮಾಹಿತಿಗಳು ಬಂದವು.

Social Share :

ನೈಜ ಕಥೆ ಸುಮಂತ್ ಚೇಸರ್ ಬಿಡುಗಡೆ ಕಂಡಿತು ಟೀಸರ್..

Social Share :

ಬಹಳ ಸಮಯದ ಬಳಿಕ ಸುಮಂತ್ ಶೈಲೇಂದ್ರ ಮತ್ತೆ ಸರದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದು ವಿಭಿನ್ನ ನೆಲೆಯಲ್ಲಿ..

‘ಬುದ್ಧಿವಂತ-2’ ಚಿತ್ರದ ನಿರ್ದೇಶಕ ಎಂ.ಜಯ್ಯರಾಮಃ ನಿರ್ದೇಶನದ ಚೇಸರ್ ಚಿತ್ರದಲ್ಲಿ ಸುಮಂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಆ ಚಿತ್ರದ ಟೀಸರ್ ಈಚೆಗೆ ಬಿಡುಗಡೆಗೊಂಡಿತು.

ಶಿವಮೊಗ್ಗ ಮೂಲದ ಮಾಲತಿ ಶೇಖರ್ ನಿರ್ಮಾಣದ ಚಿತ್ರದಲ್ಲಿ ಥ್ರಿಲ್ಲರ್, ಚೇಸರ್ ಸಾಹಸಕ್ಕೆ ಹೆಚ್ಚಿನ ಮಹತ್ವ. ಏಕೆಂದರೆ ಚಿತ್ರದ ಹೆಸರೇ ಚೇಸರ್.

ಈಚೆಗೆ ನಡೆದ ಚಿತ್ರದ ಟೀಸರ್ ಅದ್ದೂರಿ ಬಿಡುಗಡೆ ಕಾರ್ಯಕ್ರಮ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ಗಣ್ಯರು‌ ಹಾಗೂ ಅಭಿಮಾನಿಗಳಿಂದ ಜಿ.ಟಿ.ಮಾಲ್ ನ ಎಂಎಂಬಿ ಲೆಗಸಿ ಸಭಾಂಗಣ ತುಂಬಿ ಹೋಗಿತ್ತು.

ಚೇಸರ್ ಅಗಣಿತ ಸಾಹಸಗಳ ಮಹಾಪೂರ ಎಂಬುದಕ್ಕೆ ಬಿಡುಗಡೆಯಾದ ಟೀಸರ್ ಸಾಕ್ಷಿಯಾಗಿತ್ತು. ಬೈಕ್ ನಲ್ಲಿ ಚೇಸ್ ಮಾಡುವ ಒಂದು ಸಾಹಸ ದೃಶ್ಯವನ್ನು ತಾವೇ ಸಂಯೋಜನೆ ಮಾಡಿದ್ದಾಗಿ ಹೇಳಿಕೊಂಡರು ನಿರ್ದೇಶಕ ಎಂ.ಜಯ್ಯರಾಮಃ.

ಅಂಜನಿ ಪುತ್ರ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದೇ ಅದೇ ನನಗೆ ವರವಾಯಿತು. ಈಗ ನಿರ್ಮಾಪಕಿಯಾಗಿ ಇಲ್ಲಿ ನಿಂತಿದ್ದೇನೆ ಎಂದವರು ಮಾಲತಿ ಶೇಖರ್.

ರಾಜಕೀಯ ಕ್ಷೇತ್ರದಲ್ಲಿದ್ದರೂ ಸಿನಿಮಾ ಕ್ಷೇತ್ರ ಕೈ ಬೀಸಿ ಕರೆದಿದೆ. ಈ ಚಿತ್ರದ ನಿರ್ಮಾಣ ಖುಷಿ ಕೊಟ್ಟಿದೆ ಎಂದು ಹೇಳುತ್ತಾ ಹೋದರು ನಿರ್ಮಾಪಕಿ ಮಾಲತಿ ಶೇಖರ್ ‌.

ಅವರಿಗೆ ಸಹಕಾರ ನೀಡಿದ ಕಾರ್ಯಕಾರಿ ನಿರ್ಮಾಪಕ ಕಲ್ಮನೆ ಮಂಜಣ್ಣ ಚಿತ್ರ ಉತ್ತಮವಾಗಿ ಮೂಡಿ ಬರುವ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲಾಗಿದೆ ಎಂದರು.

ಗೆಳೆಯರ ಮದುವೆಗೆ ಸಬ್ ರಿಜಿಸ್ಟರ್ ಕಚೇರಿಗೆ ಹೋದಾಗ, ಅಲ್ಲಿ ತಿಳಿದ ಪ್ರೇಮಿಗಳ ಕಥೆ ಈ ಚಿತ್ರವಾಗಿದೆ ಎಂದರು ನಿರ್ದೇಶಕ ಜಯ್ಯರಾಮಃ.

ಚೇಸರ್ ಎಂದರೆ ಕೇವಲ ಚೇಸಿಂಗ್ ಅಲ್ಲ; ಮನರಂಜನೆಗೆ‌ ಬೇಕಾದ ಎಲ್ಲಾ ಅಂಶಗಳಿವೆ. ನನಗಂತೂ ಎಲ್ಲವೂ ಛಾಲೆಂಜಿಂಗ್ ಆಗಿತ್ತು ಎಂದರು ನಟ ಸುಮಂತ್ ಶೈಲೇಂದ್ರ.

ಚಿತ್ರದ ಟೀಸರ್ ರೋಮಾಂಚಕ ಎಂಬುದು ಎದ್ದು ಕಾಣುತ್ತದೆ. ಸುಮಂತ್ ಸಾಹಸ ಮೆರೆದಿದ್ದಾರೆ. ನಿರ್ದೇಶಕರ ಪ್ರಯತ್ನ ಜನರ ತಲುಪಲಿ, ನಿರ್ಮಾಪಕರ ಪ್ರಯತ್ನಕ್ಕೆ ಜಯವಾಗಲಿ ಎಂದರು ಧ್ರುವ ಸರ್ಜಾ.

ನಟರಾದ ಅರವಿಂದ್, ತ್ರಿವಿಕ್ರಮ್ ಹಾಗು ಕರಣ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಛಾಯಾಗ್ರಾಹಕ ಕೆ.ಎಸ್. ಚಂದ್ರಶೇಖರ್ ಹಾಗೂ ಹಿನ್ನಲೆ ಸಂಗೀತ ನೀಡಿರುವ ಹರ್ಷವರ್ಧನ್ ಮಾತನಾಡಿದರು.

ಅರ್ಜುನ್ ಜನ್ಯ‌ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್‌ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನವಿದೆ.

ಸುಮಂತ್ ಶೈಲೇಂದ್ರ ಜೋಡಿಯಾಗಿ ರಕ್ಷಾ ಮೆನನ್ ನಟಿಸಿದ್ದಾರೆ. ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡಿಪುಡಿ ಚಂದ್ರು, ಸಂಗೀತ ಚಿತ್ರದ ತಾರಾ ಬಳಗದಲ್ಲಿದ್ದಾರೆ ಎಂಬ ಮಾಹಿತಿಗಳು ಬಂದವು.

Social Share :

ಶ್ಯಾನು ಭೋಗರ ಮಗಳು ಚಿತ್ರವಿಮರ್ಶೆ

Social Share :

ರೇಟಿಂಗ್ : 3/5

ನಿರ್ಮಾಣ : ಸಿ.ನಾರಾಯಣ್

ನಿರ್ದೇಶನ : ಕೂಡ್ಲು ರಾಮಕೃಷ್ಣ

ಆದರ್ಶ ನಾರಿಯ ದಿಟ್ಟತನದ ವರ್ತನೆಗಳು..

ಅದು ಸ್ವಾತಂತ್ರ್ಯ ಪೂರ್ವದ ಕಾಲಘಟ್ಟ. ಸಂಪ್ರದಾಯಸ್ಥ ಮನೆತನದ ಹೆಣ್ಣು ಮಗಳೊಬ್ಬಳು ಬದುಕಿನ ಸವಾಲುಗಳು ಹಾಗೂ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಪರಾಕ್ರಮಿಯಂತೆ ಹೇಗೆ ಎದುರಿಸಿದಳು ಎಂಬುದು ಕಥಾ ವಸ್ತು.

ಮೈಸೂರು ಸಂಸ್ಥಾನದ ವ್ಯಾಪ್ತಿಗೆ ಬರುವ ಗ್ರಾಮವೊಂದರ ಶ್ಯಾನು ಭೋಗರ ಮಗಳು ಶರಾವತಿ ಅನುಪಮ ಚಲುವೆ ಮತ್ತು ಆದರ್ಶ ನಾರಿ.

ಪತಿಯ ಪ್ರೀತಿಯ ಆರೈಕೆ. ಅತ್ತೆ ಮಾವನ ಸುಂದರ ಪ್ರೀತಿ ಎಲ್ಲವೂ ಇದ್ದರೂ ಶರಾವತಿಗೆ ಜೀವನದ ಸವಾಲುಗಳು ಹೆಚ್ಚಾಗಿ ಕಾಡುತ್ತವೆ. ಏಕೆಂದರೆ ಆಕೆ ಆದರ್ಶ ಸತಿ ಮತ್ತು ಎಂಥಹ ಸನ್ನಿವೇಶವನ್ನೂ ಮೆಟ್ಟಿ ನಿಲ್ಲುವ ಛಲಗಾರ್ತಿ.

ಬ್ರಿಟಿಷರ ಆಳ್ವಿಕೆಯ ಆ ಕಾಲದಲ್ಲಿ ಪ್ರತಿ ಊರಿನ ದೇವಾಲಯಗಳ ಆಸ್ತಿ ದೋಚುವ ಸಂಚು ಅವರಿಂದ ನಡೆಯುತ್ತದೆ. ಅದನ್ನು ವಿಫಲಗೊಳಿಸಲು ರೂಪುಗೊಂಡಿರುವ ಸ್ವಾತಂತ್ರ್ಯ ಹೋರಾಟದ ಕೆಚ್ಚಿನ ಯುವಕರ ಗುಂಪಿನಲ್ಲಿ ಶರಾವತಿಯ ಸಹೋದರ ಹಾಗೂ ಮೈದುನ ಸೇರಿಕೊಂಡಿರುತ್ತಾರೆ.

ಇದರಿಂದ ಶರಾವತಿಯ ತವರು ಮತ್ತು ಮಾವನ ಮನೆಯ ಎರಡೂ ಕುಟುಂಬಗಳನ್ನು ಅನೇಕ ರೀತಿಯ ಪರೀಕ್ಷೆಗೆ ಒಳಪಡಿಸುತ್ತವೆ ಬ್ರಿಟಿಷ್‌ ವ್ಯವಸ್ಥೆ. ಆಗ ಗಟ್ಟಿಗ ಹೆಣ್ಣು ಮಗಳಾಗಿ ಶರಾವತಿ ಹೋರಾಟದ ಕಿಚ್ಚಿಗೆ ಬೆಂಬಲ ನೀಡುತ್ತಾಳೆ.

ಇದರ ಫಲವಾಗಿ ತುಂಬು ಗರ್ಭಿಣಿ ಅವಸ್ಥೆಯಲ್ಲಿ ಅನುಭವಿಸಬಾರದ ಕಷ್ಟವನ್ನು ಅನುಭವಿಸಿ ಕೊನೆಗೆ ಮನೆಗೆ ದೀಪವಾಗುತ್ತಾಳೆ.

ಪತ್ರಕರ್ತೆ ಭಾಗ್ಯ ಕೃಷ್ಣಮೂರ್ತಿ ಅವರ ಕಲ್ಪನೆಯ ಕಾದಂಬರಿ ಆಧರಿಸಿ ಮೂಡಿ ಬಂದಿರುವ ಚಿತ್ರವನ್ನು ಅತ್ಯುತ್ತಮ ರೀತಿಯಲ್ಲಿ ಜೈ ಆನಂದ್ ಸೆರೆ ಹಿಡಿದಿದ್ದಾರೆ.

ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುವಲ್ಲಿ ಹೆಸರಾಗಿರುವ ಕೂಡ್ಲು ರಾಮಕೃಷ್ಣ ಅಚ್ಚುಕಟ್ಟಾದ ನಿರೂಪಣೆ ಮಾಡಿದರೂ ಪಾತ್ರ ಪೋಷಣೆಯಲ್ಲಿ ಮತ್ತಷ್ಟು ಸೊಗಸುಗಾರಿಕೆ ತರುವುದರಿಂದ ದೂರ ಸರಿದಂತೆ ಅನಿಸುತ್ತದೆ.

ಶರಾವತಿ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಸೈ ಎನಿಸಿಕೊಳ್ಳುತ್ತಾರೆ. ಇನ್ನುಳಿದಂತೆ ಸುಲ್ತಾನ್ ಪಾತ್ರದಲ್ಲಿ ಕಿಶೋರ್, ಮಾವನಾಗಿ ರಮೇಶ್ ಭಟ್, ಪತಿಯಾಗಿ ನಿರಂಜನ್ ಶೆಟ್ಟಿ, ದೀವಾನರ ಪಾತ್ರದಲ್ಲಿ ಸುಧಾಕರ್ ಬನ್ನಂಜೆ ಮೊದಲಾದ ಪಾತ್ರಗಳು ಗಮನ ಸೆಳೆಯುತ್ತವೆ.

Social Share :

1990’s ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಮನಸು ಮಲ್ಲಿಗೆ ಕಂಬೈನ್ಸ್ ಅರುಣ್ ಕುಮಾರ್

ನಿರ್ದೇಶನ : ನಂದಕುಮಾರ್ ಸಿ.ಎಂ.

ಪ್ರೇಮದ ಪರಸೆ ಮುಗ್ಧತೆಯೇ ವರಸೆ

ಅದು 90ರ ದಶಕದ ಕಾಲಘಟ್ಟ..!

ಒಬ್ಬ ಹುಡುಗ ಒಂದು ಹುಡುಗಿಯ ಜೊತೆ ಪ್ರೇಮ ನಿವೇದನೆ ಮಾಡುವುದು ಅತ್ಯಂತ ಕಠಿಣವೆನಿಸುವ ದಿನಗಳು..

ಒಂದು ವೇಳೆ ಪ್ರೇಮ ನಿವೇದನೆ ಮಾಡಿದರೂ ಪರಿಸರ, ಜನ, ಪರಿಸ್ಥಿತಿ ಬೇರೆ ಬೇರೆ ಮಾಡುವ ಶಕ್ತಿ ಹೊಂದಿದ್ದ ಆ ದಿನಗಳಲ್ಲಿ ಸಾಮಾನ್ಯ ಹುಡುಗನೊಬ್ಬ ಸಂಪ್ರದಾಯಸ್ತ ಕುಟುಂಬದ ಹುಡುಗಿಯನ್ನೇ ಪ್ರೇಮಿಸಿ ಆ ಮೂಲಕ ಪ್ರೇಮದ ಅಗ್ನಿಕುಂಡದಲ್ಲಿ ದಹಿಸಿ ಹೋಗುವ ಕಥಾನಕ.

ಟೈಗರ್ ಹೆಸರಿನ ಹುಡುಗ ಅಸಾಧ್ಯ ಒರಟ ಮತ್ತು ತುಂಟುತನವನ್ನೇ ಮೈದಳೆದ ಸೊಗಸುಗಾರಿಕೆಯ ಹುಡುಗ. ಚಿಕ್ಕ ವಯಸ್ಸಿನಲ್ಲೇ ತನ್ನ ಎಲ್ಲಾ ವರಸೆಗಳ ಮೂಲಕ ಹೆತ್ತವರಿಗೂ ತಲೆ ನೋವಾಗಿದ್ದ ಹುಡುಗ..

ಪರೀಕ್ಷೆಯಲ್ಲಿ ಫೇಲಾದರೆ ಆಗಿನ ಕಾಲಕ್ಕೆ ವರವಾಗಿ ಪರಿಣಮಿಸುತ್ತಿದ್ದದ್ದು ಆಟೋ ಎಂಬ ದುಡಿಮೆಯ ಮಾರ್ಗ. ಟೈಗರ್ ಕೂಡ ಅನಿವಾರ್ಯ ಆಟೋ ಚಾಲಕ.

ಇತ್ತ ಚಿಕ್ಕ ವಯಸ್ಸಿನಲ್ಲೇ ಟೈಗರ್ ಕಾಟದಿಂದ ನಲುಗಿದ್ದ ಪ್ರತಿಭಾ ಪುಷ್ಪವತಿಯಾಗುವ ಹೊತ್ತಿಗೆ ಅಸಾಧಾರಣ ಸೌಂದರ್ಯವತಿ.

ಈ ಇಬ್ಬರ ನಡುವೆ ಪ್ರೇಮ ಮೊಳೆಯುವುದೊಂದು ರೋಚಕ ಘಟ್ಟ. ಅದಕ್ಕಾಗಿ 90 ರ ದಶಕದ ಹುಡುಗರ ಸವಕಲು ವರಸೆಗಳ ಪ್ರದರ್ಶನ ನಡೆದೇ ತೀರುತ್ತದೆ.

ಸದಾ ಕಾಲವೂ ಮೋಡಗಳಿಂದ ಆವೃತವಾದ ಮತ್ತು ತಿಳಿ ಗಾಳಿಯಿಂದ ಕಂಗೊಳಿಸುವ ದೇವಾಲಯದ ತಪ್ಪಲು; ಊರಿನ ಒಳನೋಟ ಎಲ್ಲವೂ ಕ್ಯಾಮೆರಾ ಕಣ್ಣಿನಲ್ಲಿ ಸುಂದರ. ಪ್ರೀತಿ ಮೈದಳೆಯುವ ಹೊತ್ತಿಗೆ ಹೃದಯಕ್ಕೆ ಲಗ್ಗೆ ಇಡುವಷ್ಟು ಕಿವಿಗೆ ಇಂಪು ಮತ್ತು ಹೃದಯಕ್ಕೆ ಡಂಗೂರವಾಗುವಂತಹ ಸಂಗೀತ..

ಎರಡೂ ಹೃದಯಗಳು ಒಂದಾಗುವ ಆಹ್ಲಾದಕ್ಕಿಂತ ಪ್ರೇಮಿಗಳಿಗೆ ಎಲ್ಲಿ‌ ಏನಾಗುವುದೋ ಎಂಬ ಆತಂಕವೇ ಮುಖ್ಯವಾಗುತ್ತದೆ. ಹುಡುಗಿಯನ್ನು ಪಾಪು ಎಂದು ಕರೆಯುವ ಹುಡುಗನ ಆರ್ದ್ರ ಹೃದಯ ಯಾರಿಗೂ ಅರ್ಥವಾಗುವುದಿಲ್ಲ.

ಹಾಗೆಯೇ ಬಚ್ಚಿಟ್ಟ ಪ್ರೇಮವನ್ನು ವ್ಯಕ್ತಪಡಿಸಲಾಗದೆ ಪರಿತಪಿಸುವ ಪ್ರತಿಭಾ ವರಸೆ ಟೈಗರ್ ಜೊತೆಗೆ ಪ್ರೇಕ್ಷಕನನ್ನೂ ಕಾಡುತ್ತದೆ. ಜೊತೆಗೆ ಇವರಿಬ್ಬರ ಅಸಹಾಯಕ ಪ್ರೇಮ ವೈರಾಗ್ಯವನ್ನೂ ಮೂಡಿಸುತ್ತದೆ.

‘ಓ ಮಳೆಯೇ ಕಾಪಾಡು..’ ಎಂಬ ಎರಡು ವರಸೆಯ ಹಾಡಿನಲ್ಲಿ ಪ್ರಕೃತಿಯ ತಂಪು ಸಂಗೀತದ ಇಂಪು ಕಣ್ಣಿಗೆ ಕಿವಿಗೆ ರಾಚುತ್ತದೆ.

ಆದರೆ

ಆರಂಭದಲ್ಲಿ ಚಿಕ್ಕ ಹುಡುಗರ ಬಿಲ್ಡಪ್
ವರಸೆಗಳು; ಇನ್ನೂ ಟೈಗರ್ ಯಾರು ಎಂಬುದು ಅರಿವಾಗುವ ಮುನ್ನವೇ ಬರುವ ರಾಜೇ ಬಹದ್ದೂರ್ ನ ದೌರ್ಜನ್ಯದ ಹಾಡು; ಘನ ಘೋರ ವಿಧಿಯಾಟ ಭೂಗರ್ಭ ನಡುಗುತ್ತಿದೆ ಎಂಬ ಸನ್ನಿವೇಶಕ್ಕೆ ಹೊಂದಾಣಿಕೆ ಆಗದ ಗೀತೆ ಬೇಕಿರಲಿಲ್ಲ ಎನಿಸುತ್ತದೆ.

ಅದೇ ರೀತಿ ಚಿತ್ರದ ಅಂತಿಮ ಘಟ್ಟದ ಅತಿಯಾದ ಎಳೆತ ಪ್ರೇಕ್ಷಕನ ಸಹನೆ ಪರೀಕ್ಷೆ ಮಾಡುತ್ತದೆ. ಅತಿಯಾದ ನಾಟಕೀಯ ಎಂಬಂತಹ ದೃಶ್ಯಗಳಿಗೆ ಕತ್ತರಿ ಹಾಕಿದ್ದರೇ ಇದು ನಿಜಕ್ಕೂ ಅತ್ಯುತ್ತಮ ಪ್ರೇಮ ಕಾವ್ಯ..!

ಯುವ ನಟ ಅರುಣ್ ಹಾಗೂ ರಾಣಿ ವರದ್ ನಾಯಕ ಇಬ್ಬರೂ ಸ್ಪರ್ಧೆಗಿಳಿದು ನಟಿಸಿದ್ದಾರೆ. ನಿರ್ಮಾಪಕ ಅರುಣ್ ಕುಮಾರ್ ನಟನೆ ಕೂಡ ಗಮನ ಸೆಳೆಯುತ್ತದೆ.

ಮಹಾರಾಜ ಸಂಗೀತ ಹಾಗೂ ಹಾಲೇಶ್ ಛಾಯಾಗ್ರಹಣ ಚಿತ್ರದ ಸೊಗಸುಗಾರಿಕೆ ಹೆಚ್ಚಿಸುವಲ್ಲಿ ನೆರವಾಗಿವೆ.

Social Share :

ಈ ವಾರ ಅಪಾಯವಿದೆ ಎಚ್ಚರಿಕೆ ಟ್ರೈಲರ್ ಬಿಡುಗಡೆಯಲ್ಲಿ ಹೇಳಿಕೆ..

Social Share :

ಅಪಾಯವಿದೆ ಎಚ್ಚರಿಕೆ..!

ಇದು ಚಿತ್ರದ ಹೆಸರು. ಭಯಾನಕ ಎಂಬುದರ ಹಿಂದೆ ಸಾಗುವ ಯುವಕರ ಕಥೆ ಇದು. ಏಕೆ ಏನು ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

ಈಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಚಿತ್ರತಂಡ ಅತ್ಯಂತ ಉತ್ಸಾಹದಿಂದಲೇ ಪಾಲ್ಗೊಂಡಿತ್ತು. ಹಿರಿಯ ಪತ್ರಕರ್ತೆ ಸರಸ್ಪತಿ ಜಾಗಿರ್ದಾರ್, ಸಿನಿಮಾ ಛಾಯಾಗ್ರಾಹಕ ಮನು ಹಾಗೂ ಇತರರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಕನ್ನಡಪರ ಹೋರಾಟಗಾರರು, ಕ್ಯಾಬ್ ಹಾಗೂ ಆಟೋ ಚಾಲಕರು, ಯುವಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಗಣ್ಯರು ಟ್ರೇಲರ್ ಬಿಡುಗಡೆಯಲ್ಲಿ ಭಾಗಿಯಾಗಿ ಚಿತ್ರ ಯಶಸ್ಸಿಗೆ ಶುಭ ಕೋರಿದರು.

ಕಿರಿತೆರೆಯಲ್ಲಿ ಹೆಸರು ಮಾಡಿರುವ ವಿಕಾಶ್ ಉತ್ತಯ್ಯ ಚಿತ್ರದ ಮುಖ್ಯ ಪಾತ್ರದಲ್ಲಿರುವ ಚಿತ್ರವನ್ನು ಅಭಿಜಿತ್ ತೀರ್ಥಹಳ್ಳಿ ನಿರ್ದೇಶನ ಮಾಡಿದ್ದಾರೆ.

ನೀರು, ಬೆಂಕಿ, ಗಾಳಿ ರೀತಿಯ ಮೂರನ್ನು ಪ್ರತಿನಿಧಿಸುವ ಮೂರು ಪ್ರಮುಖ ಪಾತ್ರಗಳು ಚಿತ್ರದಲ್ಲಿವೆ. ಆ ಪಾತ್ರಗಳನ್ನು ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ನಿರ್ವಹಿಸಿದ್ದಾರೆ ಎಂಬ ಉತ್ತರ ಕೊಟ್ಟರು ನಿರ್ದೇಶಕರು.

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದರೂ ಹಾರಾರ್ ಕೂಡ ಗಮನ ಸೆಳೆಯುತ್ತದೆ. ಈಗಾಗೇ ಟೀಸರ್ ಗೆ ಅಪಾರ ಬೆಂಬಲ ಸಿಕ್ಕಿದೆ ಎಂದು ಹೇಳಿ ಕೊಂಡರು.

ಚಿತ್ರತಂಡದ ಸದಸ್ಯರಾದ ಅಶ್ವಿನ್ ಹಾಸನ್, ರಾಧಾ ಭಗವತಿ, ಮಿಮಿಕ್ರಿ ಕುಮಾರ್, ಮಿಥುನ್ ತೀರ್ಥಹಳ್ಳಿ, ದೇವ್, ಕಲ್ಪನಾ ಹಾಗೂ ಛಾಯಾಗ್ರಾಹಕ ಕಮ್ ಸಂಗೀತ ನಿರ್ದೇಶಕ ಸುನಾದ್ ಗೌತಮ್, ಗಾಯಕ ರಜತ್ ಹೆಗ್ಡೆ ಸೇರಿದಂತೆ ಅನೇಕರು ಚಿತ್ರದ ಬಗ್ಗೆ ವಿವರ ನೀಡಿದರು.

ಚಿತ್ರವು ಇದೇ ಫೆಬ್ರವರಿ 28ರಂದು ಬಿಡುಗಡೆ ಕಾಣುತ್ತಿದ್ದು,ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದವರು ನಿರ್ಮಾಪಕ ಮಂಜುನಾಥ್.ವಿ.ಜಿ ಹಾಗೂ ಪೂರ್ಣಿಮಾ ಗೌಡ.‌

Social Share :

ವಿಷ್ಣು ಪ್ರಿಯಾ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಕೆ.ಮಂಜು

ನಿರ್ದೇಶನ : ವಿ.ಕೆ.ಪ್ರಕಾಶ್

ಅದಮ್ಯ ಪ್ರೇಮಿಯ ಅಸಹಾಯಕ ಸಾಹಸಗಳು..

ಅನಾಥ ಪ್ರಜ್ಞೆಯಲ್ಲಿ ನರಳುತ್ತಿದ್ದ ಅಪ್ರತಿಮ ಸಾಹಸ ಮನೋಭಾವದ ಹುಡುಗನಿಗೆ ಏಕಾ ಏಕಿ ಪ್ರೇಮದ ಆಸರೆ ದೊರೆತಾಗ, ಆತ ಅದಮ್ಯ ಪ್ರೇಮಿಯಾಗಿ ಕಂಗೊಳಿಸಿ ಬಿಡುತ್ತಾನೆ..

ಸದಾ ಹಸಿರು ಹೊದ್ದ ಬೆಟ್ಟ ಗುಡ್ಡಗಳ ಮತ್ತು ಜಲಧಾರೆಯಿಂದ ಕಂಗೊಳಿಸುವ ಪ್ರದೇಶ ಮತ್ತು ಮುತ್ತು ಪೋಣಿಸಿದಂತೆ ಬೀಳುವ ಆಹ್ಲಾದದ ವಾತಾವರಣದ ಮಲೆನಾಡಿನ ಸಹೃದಯಿ ಯುವಕ ವಿಷ್ಣುಗೆ ಆಕಸ್ಮಿಕವಾಗಿ ಸಿಕ್ಕ ಪ್ರಿಯಾ ಜೀವನದ ಎಲ್ಲವೂ ಆಗಿ ಹೋಗುತ್ತಾಳೆ..

ವಿಷ್ಣು ಮತ್ತು ಪ್ರಿಯಾ ಇಬ್ಬರೂ ಅಸಾಧಾರಣ ಪ್ರೇಮಿಗಳಾಗಿ ಪ್ರಕೃತಿ ಮಡಿಲಲ್ಲಿ ನಲಿಯುತ್ತಾರೆ. ಗಿರಿ ಶೃಂಗಗಳ ಮೋಹಕ ತಪ್ಪಲಲ್ಲಿ ಓಡಾಡುತ್ತಾರೆ. ನದಿಯ ನೀರು ಮತ್ತು ಅದರ ಅಲೆಗಳ ಮೋಹಕತೆ ಅವರಿಬ್ಬರ ಪ್ರೇಮಗಳಲ್ಲಿ ಬೆರೆತು ಹೋಗುತ್ತದೆ.

ಅದು 90ರ ದಶಕದಲ್ಲಿ ನಡೆಯುವ ಪ್ರೇಮ. ಹಾಗಾಗಿ ಸಾಮಾಜಿಕ ಜಾಲತಾಣಗಳು ಕಾಣುವುದೇ ಇಲ್ಲ. ಇಬ್ಬರು ಮೋಹದ ಪರವಶವಾದ ಇಬ್ಬರು ಪ್ರೇಮಿಗಳು ಉಲ್ಲಾಸದ ಸ್ಥಿತಿಯಲ್ಲಿ ಒಬ್ಬರನ್ನೊಬ್ಬರು ಭೇಟಿ ಮಾಡುತ್ತಾ ಇನ್ನೇನು ಪ್ರೇಮವೇ ಎಲ್ಲಾ ಎಂದು ಬೀಗುವಾಗ ಅನಿರೀಕ್ಷಿತವಾದ ಆ ಘಟನೆ ನಡೆದು ಹೋಗುತ್ತದೆ..

ಅದರಿಂದ ಪ್ರಿಯಾ ಮನೆಯವರು ವಿಚಲಿತಗೊಳ್ಳುತ್ತಾರೆ. ಮರ್ಯಾದೆ ಮೂರು ಪಾಲಾಯಿತು ಎಂದು ನಲುಗುತ್ತಾರೆ. ಇದರಿಂದ ಅದಮ್ಯ ಪ್ರೇಮಿ ವಿಷ್ಣು ಮನಸ್ಸೂ ಅಲ್ಲೋಲ ಕಲ್ಲೋಲವಾಗುತ್ತದೆ. ಆತನ ವರ್ತನೆಯಲ್ಲಿ ಬದಲಾವಣೆ ಕಾಣುತ್ತದೆ. ಅದು ಆತ ಉನ್ಮತ್ತ ಪ್ರೇಮಿ ಅಥವಾ ಹುಚ್ಚ ಎಂಬ ಭಾವನೆ ಇತರರಲ್ಲಿ ಮೂಡಲು ಕಾಣವಾಗುತ್ತದೆ.

ಪ್ರೇಮದ ಅಗ್ನಿ ಕುಂಡದಲ್ಲಿ ವಿಷ್ಣು ಬೇಯುವಾಗಲೇ ಅಪ್ಪನ ವರ್ಗಾವಣೆ ಕಾರಣದಿಂದ ಪ್ರಿಯಾ ಅವನಿಂದ ದೂರವಾಗಿ ಬಿಡುತ್ತಾಳೆ. ಆಗಿನ ಪರಿಸ್ಥಿತಿಯನ್ನು ಆತನನ್ನು ದ್ವೇಷಿಸುತ್ತಿದ್ದ ಗೆಳೆಯ ದುರುಪಯೋಗ ಪಡಿಸಿಕೊಳ್ಳುವುದು. ಅಮ್ಮನೇ ಸಹಕಾರ ನೀಡದೇ ಹೋಗುವುದು ಇಂತಹ ನಿಲುವುಗಳಿಂದ ವಿಷ್ಣು ದಹಿಸಿ ಹೋಗುತ್ತಾನೆ.

ಇತ್ತ ಪ್ರಿಯಾ ಮನೆಯ ಕಡೆಯ ಬೇರೆಯದರ ಪರಿಸ್ಥಿತಿ ಹಿನ್ನೆಲೆಯಲ್ಲಿ ಆಕೆಯೂ ಬದಲಾದಂತೆ ವರ್ತಿಸುತ್ತಾಳೆ. ಮತ್ತೆ ಪ್ರಿಯಾಳನ್ನು ಹುಡುಕುವ ವಿಷ್ಣುಗೆ ಎದೆ ಬಿರಿಯುವ ಘಟನೆಗಳಿಂದ ಮನಸ್ಥಿತಿ ಹುಚ್ಚು ಕೋಡಿಯಾಗುತ್ತದೆ. ಮುಂದೆ ಆತ ತೆಗೆದುಕೊಳ್ಳುವ ನಿರ್ಧಾರ ಅತ್ಯಂತ ಕಠಿಣ.

ವಿಷ್ಣು ಪಾತ್ರದಲ್ಲಿ ಶ್ರೇಯಸ್ ಕೆ.ಮಂಜು ಪರಕಾಯ ಪ್ರವೇಶ ಮಾಡಿರುವುದು ಎದ್ದು ಕಾಣುತ್ತದೆ. ಭಾವನಾತ್ಮಕ ಸನ್ನಿವೇಶಗಳು ಹಾಗೂ ಹೊಡೆದಾಟಗಳಲ್ಲಿ ಕಾಣುವ ಅವರ ಕಿಚ್ಚು ಅದಮ್ಯ ಪ್ರೇಮಿಯನ್ನೂ ಮೀರಿದ್ದು..

ಮೊದಲಿಗೆ ಮುದ್ದು ಮುದ್ದಾಗಿ ಕಾಣುವ ಪ್ರಿಯಾ ವಾರಿಯರ್ ಗೆ ಪರಿಸ್ಥಿಯ ಕೈಗೊಂಬೆಯಾದಾಗ ನಟಿಸುವುದು ಅತ್ಯಂತ ಸವಾಲಾದಂತೆ ಕಾಣುತ್ತದೆ.

ಸಾಕು ಅಪ್ಪನಾಗಿ ಅಚ್ಯುತ್ ಕುಮಾರ್ ಅವರ ನಟನೆ ಪ್ರೇಕ್ಷಕನ ಕಣ್ಣಂಚು ಒದ್ದೆ ಮಾಡುತ್ತದೆ. ಕೋಪಿಷ್ಠ ಅಪ್ಪನಾಗಿ ಸುಚ್ಚೇಂದ್ರ ಪ್ರಸಾದ್ ಅವರ ನಟನೆ ಗಮನಾರ್ಹ.

ಗೋಪಿ ಸುಂದರ್ ಅವರ ಹಿನ್ನೆಲೆ ಸಂಗೀತ ಚಿತ್ರದ ಆತ್ಮದಂತೆ ಕೆಲಸ ಮಾಡಿದೆ. ಭಾವನಾತ್ಮಕ ಸನ್ನಿವೇಶಗಳ ಅದ್ಭುತ ನಿರ್ವಹಣೆಯಲ್ಲಿ ಸಂಗೀತವೇ ಪ್ರಧಾನ ಪಾತ್ರ ವಹಿಸಿದೆ ಎಂದರೆ ತಪ್ಪಲ್ಲ. ಅಲ್ಲದೆ ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ‘ಏಳು ಗಿರಿಗಳ..’ ಹಾಡು ಚಿತ್ರ ಮುಗಿದ ನಂತರವೂ ಗುನುಗಿಸಿಕೊಳ್ಳುತ್ತದೆ.

ನಿರ್ದೇಶಕ ವಿ.ಕೆ.ಪ್ರಕಾಶ್ ಜಾಹಿರಾತು ಚಿತ್ರಗಳ ನಿರ್ವಹಣೆ ಮಾಡಿರುವುದರಿಂದ ನೀರಿನ ಪ್ರತಿ ಚಿಮ್ಮುವಿಕೆ ಕಲಾತ್ಮಕವಾಗಿ ಕಾಣುತ್ತದೆ. ವಿನೋದ್ ಭಾರತಿ ಛಾಯಾಗ್ರಹಣ ಕಾನನದ ಸೌಂದರ್ಯವನ್ನು ಬಗೆದು ಕೊಟ್ಟಿದೆ‌.

ಒಂದು ಪರಿಶುದ್ಧ ಪ್ರೇಮದ ತೀವ್ರತೆ ಇರುವ ಹುಡುಗನನ್ನು ಈ ಕಾಲದಲ್ಲಿ ಹುಡುಕುವ ಆಸೆ ನಿಮಗಿದ್ದರೆ ‘ವಿಷ್ಣು ಪ್ರಿಯಾ’ ಅದಕ್ಕೆ ಆಸರೆಯಾಗಬಹುದು..

Social Share :