Snehapriya.com

April 4, 2025

admin

ರಾಜ್ ಮೊಮ್ಮಗನ ಚಿತ್ರ ತೆರೆಗೆ ಅಶೋಕ್ ಕಡಬ ನಿರ್ದೇಶನ..

Social Share :

* ಷಣ್ಮುಖ ಗೋವಿಂದ್ ರಾಜ್ ಚಿತ್ರ ಏಪ್ರಿಲ್ 4ರಂದು ಬಿಡುಗಡೆ *

ವರನಟ ಡಾ.ರಾಜ್ ಕುಮಾರ್ ಅವರ ಮತ್ತೊಬ್ಬ ಮೊಮ್ಮಗ ಕನ್ನಡದ ಬೆಳ್ಳಿ ತೆರೆಯ ಮೇಲೆ ಮಿಂಚಲು ಸಿದ್ಧರಾಗಿದ್ದಾರೆ.

ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಅವರ ಮಗ ಷಣ್ಮುಖ ಗೋವಿಂದ್ ರಾಜ್ ಈಗ ತೆರೆಯ ಮೇಲೆ ರಾರಾಜಿಸಲು ಸಂಪೂರ್ಣ ಸಜ್ಜುಗೊಂಡಿದ್ದಾರೆ.

ಏಕೆಂದರೆ ಷಣ್ಮುಖ ಅಭಿನಯದ ‘ನಿಂಬಿಯಾ ಬನಾದ ಮ್ಯಾಗ’ ಎಂಬ ಶೀರ್ಷಿಕೆ ಇರುವ ಚಿತ್ರ ಇದೇ ವಾರ ಅಂದರೆ ಏಪ್ರಿಲ್ 4 ರಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ.

ಚಿತ್ರದ ಪುಟ 1 ಬಿಡುಗಡೆಗೆ ಸಜ್ಜಾಗಿದ್ದು, ಈಚೆಗೆ ನಡೆದ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ರಾಜ್ ಕುಟುಂಬದ ಸದಸ್ಯರು ಭಾಗವಹಿಸಿ ಸಂಭ್ರಮ ಹಂಚಿಕೊಂಡರು.

ಷಣ್ಮುಖ ಅವರ ತಂದೆ ಎಸ್.ಎ.ಗೋವಿಂದರಾಜು, ತಾಯಿ ಲಕ್ಷ್ಮಿ ಗೋವಿಂದರಾಜು, ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ರಾಜ್ ಪುತ್ರಿ ಪೂರ್ಣಿಮಾ ರಾಜ್ ಕುಮಾರ್ ಹೀಗೆ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಸಂತಸ ಹಂಚಿಕೊಂಡರು.

ಚಿತ್ರದ ನಿರ್ದೇಶಕ ಅಶೋಕ್ ಕಡಬ ಮತ್ತು ಚಿತ್ರವನ್ನು ನಿರ್ಮಾಣ ಮಾಡಿರುವ ವಿ.ಮಾದೇಶ್ ಹಾಗೂ ಇತರ ತಂತ್ರಜ್ಞರು ಈ ಸಂದರ್ಭದಲ್ಲಿ ಹಾಜರಿದ್ದರು.

‘ನಿಂಬಿಯಾ ಬನಾದ ಮ್ಯಾಗ’ ಎಂಬ ಫ್ಯಾಮಿಲಿ ಡ್ರಾಮ ಎರಡು ಭಾಗಗಳಾಗಿ ಸಿನಿ ರಸಿಕರನ್ನು ರಂಜಸಲಿದ್ದು, ಮೊದಲ ಭಾಗ ಈಗ ಬಿಡುಗಡೆಯ ಹಾದಿಯಲ್ಲಿದೆ.

ಎಂಜೀಪಿ ಎಕ್ಸ್. ಎಂಟರ್ ಪ್ರೈಸೆಸ್ ನ ಬ್ಯಾನರ್ ನಡಿ ವಿ ಮಾದೇಶ್ ಈ ಚಿತ್ರವನ್ನು ನಿರ್ಮಿಸಿದ್ದು, ಬಿಡುಗಡೆಗೆ ಮುನ್ನವೇ ಚಿತ್ರವು ತೀವ್ರ ಕುತೂಹಲವನ್ನು ಹುಟ್ಟು ಹಾಕಿದೆ.

ರಾಜ್ ಸುಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ‘ನಂಜುಂಡಿ ಕಲ್ಯಾಣ’ ಚಿತ್ರವು ಫ್ಯಾಮಿಲಿ ಡ್ರಾಮ ಕಥಾವಸ್ತು ಹೊಂದಿತ್ತು ಮಾತ್ರವಲ್ಲ ಹಲವು ದಾಖಲೆಗಳನ್ನು ನಿರ್ಮಿಸಿತ್ತು.

ಈಗ ಪ್ರೇಕ್ಷಕರನ್ನು ನಕ್ಕು ನಗಿಸಲು ಬರುತ್ತಿರುವ ಈ ಚಿತ್ರದ ಬಗ್ಗೆ ರಾಜ್ ಪುತ್ರಿ ಲಕ್ಷ್ಮಿ ಗೋವಿಂದ್ ರಾಜ್ ಹಾಗೂ ಕುಟುಂಬ ಅಪಾರ ಭರವಸೆಗಳನ್ನು ಹೊಂದಿದೆ.

ನಿಂಬಿಯಾ ಬನಾದ ಮ್ಯಾಗ.. ಎಂಬ ಶೀರ್ಷಿಕೆಗೆ ಜಾನಪದ ಗೀತೆಯ ಸೊಗಡಿದೆ. ಅದೇ ರೀತಿ ಈ ಚಿತ್ರದ ಕಥೆಯೂ ಮನುಷ್ಯ ಸಂಬಂಧಗಳ ನೆಲೆ ಬೆಲೆಯನ್ನು ಅಭಿವ್ಯಕ್ತಗೊಳಿಸುತ್ತದೆ ಎಂಬ ವಿವರ ನೀಡಿದರು ನಿರ್ದೇಶಕ ಅಶೋಕ್ ಕಡಬ.

ಮುಖ್ಯವಾಗಿ ಈ ಚಿತ್ರದಲ್ಲಿ ರಾಜ್ ಸಂಬಂಧಿ ‘ಮೇಘಮಾಲೆ’ ಖ್ಯಾತಿಯ ಸುನಾದ್ ರಾಜ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸುಮಾರ್ 25 ವರ್ಷಗಳ ಬಳಿಕ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ.

ನಿರ್ಮಾಪಕ ವಿ.ಮಾದೇಶ್ ಅವರಿಗೂ ಈ ಚಿತ್ರ ಹೆಮ್ಮೆಯ ಭಾವಗಳನ್ನು ಮೂಡಿಸಿದ್ದು, ರಾಜ್ ವಂಶದ ಕುಡಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಪ್ರತಿಕ್ರಿಯೆ ನೀಡಿದರು.

ಮಲೆನಾಡ ಭಾಗದ ಬೆಂಗಾಡಿಯಲ್ಲಿ ಮೇಲ್ ಬೈಲ್ ದೊಡ್ಡ ಮನೆಯ ನಾಲ್ಕು ವರ್ಷದ ಮಗು ಅಚ್ಚು (ಅಚ್ಚಣ್ಣ) ಕಾಣೆಯಾಗಿದೆ. ಮಗುವಿನ ತಾಯಿ ಇಂದಲ್ಲ ನಾಳೆ ಮಗು ಬಂದೆ ಬರುತ್ತೆ ಅನ್ನೋ ನಂಬಿಕೆಯಲ್ಲೇ ಕಾಯುತ್ತಿದ್ದಾಳೆ. ಕಾಲ ಉರುಳಿದಂತೆ 25 ವರ್ಷದ ನಂತರ ಮೇಲ್ ಬೈಲ್ ದೊಡ್ಡಮನೆಯಲ್ಲಿ ಸಂತೋಷದ ವಾತಾವರಣ. ಕಾರಣ ಕಳೆದು ಹೋದ ಮಗ ಅಚ್ಚಣ್ಣ ಬಂದಿದ್ದಾನೆ. ಮುಂದೆ ಏನೂ ಎಂಬುದು ‘ನಿಂಬಿಯಾ ಬನಾದ ಮ್ಯಾಗ – ಪೇಜ್ – 1’ ಚಿತ್ರದ ಕಥಾ ಸಾರಾಂಶ.

ಭಾಗ 2. ಸಹ ಬರಲಿದೆ. ಷಣ್ಮುಖ ಜೋಡಿಯಾಗಿ ತನುಶ್ರೀ ನಟಿಸಿದ್ದಾರೆ. ಆರೋನ್ ಕಾರ್ತಿಕ್ ಸಂಗೀತ ನೀಡಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಪಳನಿ ಡಿ ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ರವಿತೇಜ ಸಂಕಲನ ಹಾಗೂ ಮದನ್ ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Social Share :

ಪ್ರೇಮ್ ಧ್ರುವ ಸರ್ಜಾ ಕೆಡಿ ಎರಡನೇ ಹಾಡು ಬಿಡುಗಡೆ

Social Share :

*ಸೆಟ್ಟಾಗಲ್ಲಾ ಕಣೆ ನಂಗೂ ನಿಂಗು..*

ಹಾಡುಗಳನ್ನು ಸೂಪರ್ ಡೂಪರ್ ಹಿಟ್ ಮಾಡುವ ಜೋಗಿ ಪ್ರೇಮ್, ತಮ್ಮ ಎಂದಿನ ವರಸೆಯನ್ನು ಮುಂದುವರೆಸಿರುವ ಪರಿಣಾಮ ‘ಕೆಡಿ’ ಚಿತ್ರದ ಮತ್ತೊಂದು ಹಾಡು ಈಗ ಗಮನ ಸೆಳೆಯುತ್ತಿದೆ.

‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗು..’ ಎಂಬ ಹಾಡು ಈಚೆಗೆ ನಡೆದ ಸಮಾರಂಭದಲ್ಲಿ ಬಿಡುಗಡೆಗೊಂಡಿತು. ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಸಂಭ್ರಮಿಸಿದ್ದು ಗಮನ ಸೆಳೆಯಿತು.

ಈ ವರ್ಷದ ಎರಡು ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಕೆಡಿ’ ಕೂಡ ಒಂದು. ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಈ ಚಿತ್ರಕ್ಕೆ ಪ್ರೇಮ್ ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ಅತಿ ದೊಡ್ಡ ಬಂಡವಾಳದಲ್ಲಿ ನಿರ್ಮಾಣ ಮಾಡುತ್ತಿದೆ.

ಕೆಡಿ ಚಿತ್ರದ ವಿಶೇಷವೆಂದರೆ ಚಿತ್ರದ ಆಡಿಯೋ ಹಕ್ಕುಗಳು ಆನಂದ್ ಆಡಿಯೋ ಸಂಸ್ಥೆಗೆ ದಾಖಲೆ ಬೆಲೆಗೆ (ಸುಮಾರು 18 ಕೋಟಿ) ಮಾರಾಟವಾಗಿರುವುದು.

ಈಗಾಗಲೇ ಈ ಚಿತ್ರದ ಮೊದಲ ಹಾಡು, ‘ಶಿವ ಶಿವ..’ ಹಾಡು ಅತಿ ದೊಡ್ಡ ಹಿಟ್ ಆಗಿರುವುದಲ್ಲದೆ ವಿಶೇಷ ಟ್ರೆಂಡ್ ಸೃಷ್ಟಿ ಮಾಡಿರುವುದು ಗಮನಾರ್ಹ.

ಮತ್ತೊಂದು ಹಾಡು ‘ಸೆಟ್ಟಾಗಲ್ಲಾ ಕಣೆ ನಂಗೂ ನಿಂಗೂ..’ ದೊಡ್ಡ ದಾಖಲೆ ಬರೆಯುವ ದಾರಿಯಲ್ಲಿದೆ. ನಿರ್ದೇಶಕ ಪ್ರೇಮ್ ಅವರೇ ರಚಿಸಿರುವ ಈ ಹಾಡಿಗೆ ಬಾಲಿವುಡ್ ಹೆಸರಾಂತ ಗಾಯಕ‌ ಮಿಖಾ ಸಿಂಗ್ ದನಿಯಾಗಿದ್ದಾರೆ.

ವಿಶೇಷವೆಂದರೆ ಈ ಹಾಡಿನ ಚಿತ್ರೀಕರಣ ಇನ್ನೂ ನಡೆದಿಲ್ಲ; ಹಾಡಿಗೆ ಹುಕ್ ಸ್ಟೆಪ್ ಕಲ್ಪನೆಯನ್ನು ಪ್ರೇಕ್ಷಕರಿಗೇ ಬಿಡಲಾಗಿದೆ. ಸಾಮಾಜಿಕ ಜಾಲದಲ್ಲಿ ಜನಪ್ರಿಯವಾಗುವ ಹುಕ್ ಸ್ಟೆಪ್ ನ್ನು ಚಿತ್ರತಂಡ ಬಳಸಿಕೊಳ್ಳಲಿದೆ. ಹಾಗೆಯೇ ಆಯ್ಕೆಯಾದ ಸ್ಟೆಪ್ ಗೆ ಬಹುಮಾನ ನೀಡಲಿದೆ ಎಂಬ ವಿವರ ನೀಡಿದರು ನಿರ್ದೇಶಕ ಪ್ರೇಮ್.

ಈ ಚಿತ್ರಕ್ಕೆ ತಪ್ಪಸ್ಸಿನಂತೆ ಕೆಲಸ ಮಾಡಲಾಗಿದೆ. ಹಾಗಾಗಿ ಈ ಹಾಡು ಕೂಡ ನಮಗೆ ವರವಾಗಿದೆ ಎಂದವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ.

ಮಿಕಾ ಸಿಂಗ್ ದುಬಾರಿ ಗಾಯಕ. ಅವರಿಂದ ಹಾಡು ಹಾಡಿಸಿರುವುದು ಹೆಮ್ಮೆಯ ವಿಷಯ. ಅವರು ಕನ್ನಡ ಮತ್ತು ಹಿಂದಿ ಭಾಷೆಗೆ ಹಾಡಿದ್ದಾರೆ. ಉಳಿದ ಭಾಷೆಗಳಿಗೆ ಅಲ್ಲಿನ ಸ್ಥಳೀಯ ಗಾಯಕರು ಹಾಡಿದ್ದಾರೆ ಎಂಬ ವಿವರ ಕೊಟ್ಟರು.

ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಜೋಡಿ ವೇದಿಕೆ ಮೇಲೆ ಹಾಡಿ ಕುಣಿದಿದ್ದು ವಿಶೇಷ. ಕೆವಿಎನ್ ಸಂಸ್ಥೆಯ ಬ್ಯುಸಿನೆಸ್ ಹೆಡ್ ಸುಪ್ರೀತ್, ಚಿತ್ರಕ್ಕಾಗಿ ಪ್ರತಿಯೊಬ್ಬರೂ ತುಂಬಾ ಶ್ರಮ ಹಾಕಿದ್ದಾರೆ, ಚಿತ್ರವು ಆಗಸ್ಟ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ವಿವರ ಕೊಟ್ಟರು.


ಆನಂದ್ ಆಡಿಯೋ ಸಂಸ್ಥೆಯ ಶ್ಯಾಮ್, ಛಾಯಾಗ್ರಾಹಕ ವಿಲಿಯಂ ಡೇವಿಡ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

70ರ ದಶಕದಲ್ಲಿ ನಡೆಯುವ ಕಾಲ್ಪನಿಕ ಕಥೆಯಲ್ಲಿ ಕಾಳಿದಾಸ ಎಂಬ ಭೂಗತ ಜಗತ್ತಿನ ವ್ಯಕ್ತಿಯ ಸುತ್ತ ಹೆಣೆಲಾಗಿರುವ ಕಥೆ ಮತ್ತು ಅದೇ ಕಾಲ ಘಟ್ಟದಲ್ಲಿ ಚಿತ್ರೀಕರಣಗೊಳಿಸುವ ಸಾಹಸ ಕಾರಣದಿಂದ ಚಿತ್ರವು ಹೊಸತನದ ಹೆಜ್ಜೆಗಳನ್ನು ಬಿಟ್ಟು ಕೊಡಲಿದೆ.

ಸಂಜಯ್ ದತ್, ಶಿಲ್ಪಾ ಶೆಟ್ಟಿ ಅಲ್ಲದೆ ನೋರಾ ಫತೇಹಿ ಸೇರಿದಂತೆ ಬಾಲಿವುಡ್‌ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಮೊದಲಾದ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

ಕನ್ನಡ, ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ‘ಕೆಡಿ’ ಚಿತ್ರವು ಆಗಸ್ಟ್ ತಿಂಗಳಲ್ಲಿ ತೆರೆಕಾಣಲಿದೆ.

Social Share :

ಯುಗಾದಿ ಹಬ್ಬದ ದಿನ 45 ಟೀಸರ್ ಶಿವಣ್ಣ ಉಪ್ಪಿ ರಾಜ್ ಸೂಪರ್‌..

Social Share :

* ರಮೇಶ್ ರೆಡ್ಡಿ ಬಂಡವಾಳ; ಅರ್ಜುನ್ ಜನ್ಯ ಕ್ರಿಯಾಶೀಲತೆ *

* ಹಾಲಿವುಡ್ ತಂತ್ರಜ್ಞರ ಕೆಲಸ *

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ದುಬಾರಿ ಬಜೆಟ್ ನ ಚಿತ್ರ ’45’ ಟೀಸರ್ ಯುಗಾದಿ ಹಬ್ಬದ ದಿನ ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ನಿರ್ಮಾಪಕ ರಮೇಶ್ ರೆಡ್ಡಿ ಅದ್ದೂರಿ ನಿರ್ಮಾಣದ ಈ ಚಿತ್ರದಲ್ಲಿ ಕನ್ನಡದ ಮುಂಚೂಣಿಯ ಸ್ಟಾರ್ ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಚಿತ್ರದ ಟೀಸರ್ ನ್ನು ಹಬ್ಬದ ದಿನದಂದು ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಬಿಡುಗಡೆ ಮಾಡಿದರು.

ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ. ಜೊತೆಗೆ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಅರ್ಜುನ್ ಜನ್ಯ ಅವರಲ್ಲಿನ ವಿಶೇಷ ಪ್ರತಿಭೆ ಈ ಚಿತ್ರದ ಮೂಲಕ ಹೊರಬರಲಿದೆ. ಅವರ ಕಲ್ಪನೆಗೆ ರಮೇಶ್ ರೆಡ್ಡಿ ಅವರು ಬಂಡವಾಳ ಹೂಡಿರುವುದು ಹೆಚ್ಚುಗಾರಿಕೆ ವಿಷಯವಾಗಿದೆ ಎಂದರು ಶಿವಣ್ಣ.

ಶಿವಣ್ಣ ಅವರ ಜೊತೆ ನಟಿಸುತ್ತಿರುವ ಸಂಗತಿಯೇ ಹೆಮ್ಮೆಯ ವಿಷಯವಾಗಲಿದೆ. ಓಂ ಚಿತ್ರದ ಕ್ಷಣಗಳು ಮರುಕಳಿಸಲಿವೆ ಎಂದರು ಉಪೇಂದ್ರ.

ಇಬ್ಬರು ದಿಗ್ಗಜರ ಜೊತೆ ನಾನು ನಟಿಸುತ್ತಿರುವುದೇ ಪುಣ್ಯದ ವಿಷಯ ಎಂದವರು ರಾಜ್.ಬಿ ಶೆಟ್ಟಿ. ಟೀಸರ್ ನಲ್ಲೇ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ ಎಂದರು ನಿರ್ದೇಶಕ ಅರ್ಜುನ್ ಜನ್ಯ.

ಕೆನಡಾದ ಪರಿಣಿತರಿಂದ ಗ್ರಾಫಿಕ್ಸ್ ಕೆಲಸ ನಡೆಯುತ್ತಿರುವುದು ಕನ್ನಡದ ಮಟ್ಟಿಗೆ ವಿಶೇಷವಾಗಿದೆ. ಆಗಸ್ಟ್ 15 ರಂದು ಚಿತ್ರವು ಬಿಡುಗಡೆ ಕಾಣುತ್ತಿದೆ ಎಂದರು.

ಇಡೀ ಭಾರತೀಯ ಚಿತ್ರರಂಗವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುವ ಚಿತ್ರವಾಗಲಿದ್ದು, ಇದು ನಮ್ಮ ಚಿತ್ರ ಎಂಬುದು ಹೆಮ್ಮೆಯ ವಿಷಯವಾಗಲಿದೆ ಎಂದವರು ನಿರ್ಮಾಪಕ ರಮೇಶ್ ರೆಡ್ಡಿ.

ಛಾಯಾಗ್ರಾಹಕ ಸತ್ಯ ಹೆಗಡೆ, ನಿರ್ಮಾಪಕ ಕೆ.ಮಂಜು, ಸಂಜಯ್ ಗೌಡ, ಇಂದ್ರಜಿತ್ ಲಂಕೇಶ್, ಕೆ.ವಿ.ಎನ್ ಸುಪ್ರೀತ್, ಆನಂದ್ ಆಡಿಯೋ ಶ್ಯಾಮ್ , ಶ್ರೇಯಸ್ ಮಂಜು ಹಾಗೂ ಇತರರು ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Social Share :

ಮೇ 9ರಂದು ಬಿಡುಗಡೆಗೆ ಸಜ್ಜಾಗಿದೆ ನವರಸನ್ ನಿರ್ಮಾಣದ ಸೂತ್ರಧಾರಿ

Social Share :

* ಚಂದನ್ ಶೆಟ್ಟಿ ಪಾತ್ರಧಾರಿ *

ಈಗಲ್ ಮೀಡಿಯಾ ಕ್ರಿಯೇಷನ್ಸ್ ನ ಮುಖ್ಯಸ್ಥ ನವರಸನ್ ನಿರ್ಮಾಣ‌ದ ‘ಸೂತ್ರಧಾರಿ’ ಬಿಡುಗಡೆಗೆ ಸಜ್ಜುಗೊಂಡಿದ್ದು, ಮೇ 9ರಂದು ಪ್ರೇಕ್ಷಕರ ಮುಂದೆ ಬರಲಿದೆ.

ಕಿರಣ್ ಕುಮಾರ್ ನಿರ್ದೇಶನದ ಹಾಗೂ ರಾಕ್ ಸ್ಟಾರ್ ಚಂದನ್ ಶೆಟ್ಟಿ ಮುಖ್ಯ ಪಾತ್ರದಲ್ಲಿರುವ ಚಿತ್ರವು ಬಿಡುಗಡೆಯ ಹೊತ್ತಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಈಚೆಗೆ ನಡೆದ ಸಮಾರಂಭದಲ್ಲಿ ನಿರ್ಮಾಪಕರಾದ ಚೇತನ್ ಗೌಡ, ಮುನೇಗೌಡ ಹಾಗೂ ರಾಜೇಶ್ ‘ಸೂತ್ರಧಾರಿ’ ಚಿತ್ರದ ಬಿಡುಗಡೆ ದಿನಾಂಕ ಅನಾವರಣ ಮಾಡಿದರು.

ಮೈ ಮೂವಿ ಬಜಾರ್ ಮೂಲಕ ಚಿತ್ರರಂಗದ ಬೆಸುಗೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ನವರಸನ್ ನಿರ್ಮಾಪಕ, ನಿರ್ದೇಶಕ ಹಾಗೂ ವಿತರಕರಾಗಿಯೂ ಗಮನ ಸೆಳೆದವರು‌.

ಈಗ ‘ಸೂತ್ರಧಾರಿ’ ಅವರ ಮಹತ್ವಾಕಾಂಕ್ಷೆಯ ಚಿತ್ರ. ಅದು ಅತ್ಯುತ್ತಮ ವಾಗಿ ಮೂಡಿ ಬಂದಿದೆ ಎಂಬುದು ಹೆಮ್ಮೆಯ ವಿಷಯ ಎಂದು ಹೇಳುತ್ತಾ ಹೋದರು ನವರಸನ್.

ಚಿತ್ರದ ಹಾಡುಗಳು ಟ್ರೆಂಡಿಂಗ್ ನಲ್ಲಿವೆ. ಹಾಗಾಗಿ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇದೆ ಎಂಬುದು ನಟ ಕಮ್ ಗಾಯಕ ಚಂದನ್ ಶೆಟ್ಟಿ ಅವರ ಮಾತು.

ಚಂದನ್ ಶೆಟ್ಟಿ ಜೊತೆಗೆ ಸಂಜನಾ ಆನಂದ್ ಹಾಗೂ ಅಪೂರ್ವ ನಟಿಸಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.

ಗಣೇಶ್ ನಾರಾಯಣ್, ಪ್ರಶಾಂತ್ ನಟನ, ಮೀರಾಶ್ರೀ, ಸುಶ್ಮಿತಾ, ಪಲ್ಲವಿ ಈ ಸಂದರ್ಭದಲ್ಲಿ ಹಾಜರಿದ್ದರು.

Social Share :

ಮನದ ಕಡಲು ಟ್ರೈಲರ್ ಯಶ್ ರಾಕಿಂಗ್ ರಾಕಿಂಗ್..

Social Share :

ರಾಜಾಜಿನಗರದ ಲುಲ್ಲು ಮಾಲ್ ಆವರಣ ಭಾನುವಾರ ವರ್ಣರಂಜಿತ ವಾತಾವರಣದಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ ಉಪಸ್ಥಿತಿಯಲ್ಲಿ ನಲಿದಾಡಿತು..

ಅದು ‘ಮನದ ಕಡಲು’ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಸಭೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾಲ್ಗೊಂಡ ಸಂದರ್ಭ.

‘ಮುಂಗಾರು ಮಳೆ’ ನಿರ್ಮಾಪಕ ಈ ಕೃಷ್ಣಪ್ಪ ಬಹಳ ಸಮಯದ ಬಳಿಕ ಮತ್ತೆ ನಿರ್ಮಾಣ ಮಾಡುತ್ತಿರುವ ಚಿತ್ರ ಮನದ ಕಡಲು. ಯೋಗರಾಜ್ ಭಟ್ ಅದರ ನಿರ್ದೇಶಕರು.

ಯಶ್ ಅದೆಷ್ಟೋ ವರ್ಷಗಳ ಬಳಿಕ ಬಹಿರಂಗ ಸಭೆಯ ರೀತಿಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಅದಕ್ಕೆ ಇ.ಕೃಷ್ಣಪ್ಪ ಅವರ ಜೊತೆಗಿನ ಒಡನಾಟ ಕಾರಣ‌ ಎಂಬುದು ಪ್ರಚಾರ ಸಭೆಯಲ್ಲೇ ಬಹಿರಂಗವಾದ ವಿಷಯ.

ಇ.ಕೃಷ್ಣಪ್ಪ ನಿರ್ಮಾಣದ ‘ಮೊಗ್ಗಿನ ಮನಸ್ಸು’ ಯಶ್ ಅವರ ಮೊದಲ ಚಿತ್ರ. ಆ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದರು ರಾಕಿಂಗ್ ಸ್ಟಾರ್.

ಬೆಳವಣಿಗೆಯ ಹಾದಿಯಲ್ಲಿ ನಿರ್ದೇಶಕ ಯೋಗರಾಜ್ ಭಟ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಹ ನಿರ್ಮಾಪಕ ಗಂಗಾಧರ್ ಹೀಗೆ ಸಾಕಷ್ಟು ಜನರ ಶ್ರಮವನ್ನು ಮರೆಯಲಾರೆ ಎಂದರು.

ಇದೇ ಮಾರ್ಚ್ 28 ರಂದು ತೆರೆಗೆ ಬರಲು ಸಂಪೂರ್ಣ ಸಜ್ಜಾಗಿರುವ ಚಿತ್ರದ ಬಗ್ಗೆ ಇಡೀ ಚಿತ್ರತಂಡ ಮಾಹಿತಿ ನೀಡಿತು.

‘ಮನದ ಕಡಲು’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿರುವ ಸುಮುಖ, ನಟಿಯರಾದ ರಾಶಿಕಾ ಶೆಟ್ಟಿ, ಅಂಜಲಿ ಅನೀಶ್‌,‌ ಸಹ ನಿರ್ಮಾಪಕ ಜಿ.ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Social Share :

ನಾಯಕ ನಾನೇ ನನ್ನ ಕಥೆಗೆ ಮೆಜೆಸ್ಟಿಕ್-2 ಹೊಸ ಹಾಡು

Social Share :

ಸ್ಯಾಂಡಲ್ ವುಡ್ ನ ಹೆಸರಾಂತ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ಮುಖ್ಯ ಪಾತ್ರದಲ್ಲಿರುವ ‘ಮೆಜೆಸ್ಟಿಕ್-2’ ಚಿತ್ರದ ಹೊಸ ಹಾಡು ಬಿಡುಗಡೆಗೊಂಡಿದೆ.

‘ನಾಯಕ ನಾನೇ..’ ಎಂಬ ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಈಚೆಗೆ ಬಿಡುಗಡೆ ಮಾಡಿದರು.

ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಕೋಟೆನಾಡು ಚಿತ್ರದುರ್ಗದ ಹೆಚ್.ಆನಂದಪ್ಪ ನಿರ್ಮಿಸಿರುವ ‘ಮೆಜೆಸ್ಟಿಕ್-2’ ಚಿತ್ರವನ್ನು ರಾಮು ನಿರ್ದೇಶನ ಮಾಡಿದ್ದಾರೆ.

ಯುವನಟ ಭರತ್ ಕುಮಾರ್, ಸಂಹಿತಾ ವಿನ್ಯಾ ಮುಖ್ಯ ಪಾತ್ರದಲ್ಲಿರುವ ಚಿತ್ರವೀಗ ಬಿಡುಗಡೆಗೆ ಸಜ್ಜುಗೊಂಡಿದೆ.

ಚಿತ್ರವನ್ನು ಯಾವುದಕ್ಕೂ ಕೊರತೆಯಾಗದಂತೆ ದೊಡ್ಡ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು, ಚಿತ್ರದುರ್ಗದ ಮರುಘಾ ಮಠ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅತ್ಯುತ್ತಮ ಮೂಡಿ ಬಂದಿದೆ ಎಂಬ ವಿವರ ಕೊಟ್ಟರು ನಿರ್ಮಾಪಕ ಹೆಚ್. ಆನಂದಪ್ಪ.

ಆನಂದಪ್ಪ ಅವರ ಧೈರ್ಯ ಮತ್ತು ಸಾಹಸಗಳ ಫಲವಾಗಿ ಚಿತ್ರವು ಉತ್ತಮವಾಗಿ ಮೂಡಿ ಬಂದಿದೆ ಎಂದವರು ನಿರ್ಮಾಪಕ ಶಿಲ್ಪ ಶ್ರೀನಿವಾಸ್.

ವಿನು ಮನಸು ಸಂಗೀತ ನೀಡಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ ಎಂಬ ಮಾಹಿತಿಗಳು ಬಂದವು. ನಟಿ ಶೃತಿ ತಾಯಿ ಪಾತ್ರದಲ್ಲಿ ನಟಿಸಿದ್ದು, ಆ ಪಾತ್ರದ ಬಗ್ಗೆ ಪ್ರಶಂಸೆಗಳು ಬಂದವು.

ನಿರ್ದೇಶಕ ರಾಮು ಮತ್ತು ನಟ ಭರತ್ ಕುಮಾರ್ ಚಿತ್ರದ ಒಳಗಿನ ಮತ್ತು ಹೊರಗಿನ ಸಾಹಸಗಳ ಬಗ್ಗೆ ಹೇಳಿಕೊಂಡರು.

ಮೆಜೆಸ್ಟಿಕ್ ಪ್ರದೇಶದೊಳಗೆ ಏನೆಲ್ಲಾ ನಡೆಯುತ್ತವೆ ಎಂಬುದರ ವಿವರಣೆ ಜೊತೆಗೆ ಕುತೂಹಲ ಹುಟ್ಟಿಸುವ ಕಥೆ ಚಿತ್ರದ ಮುಖ್ಯಾಂಶವಾಗಲಿದೆ ಎಂದರು ನಿರ್ದೇಶಕ ರಾಮು.

ನನ್ನದು ಮಧ್ಯಮ ವರ್ಗದ ಹುಡುಗಿಯ ಪಾತ್ರ ಎಂಬುದು ನಟಿ ಸಂಹಿತ ವಿನ್ಯಾ ನೀಡಿದ ವಿವರಣೆ. ವೀನಸ್ ಮೂರ್ತಿ ಛಾಯಾಗ್ರಹಣ, ವಿಜಯಕುಮಾರ್ ಸಹಾಯಕ ನಿರ್ದೇಶನ, ಚಿನ್ನಯ್ಯ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಮೆಜೆಸ್ಟಿಕ್ ಅಲ್ಲದೆ ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ವಿಶೇಷವಾಗಿ ಕನಸಿನ ರಾಣಿ ಮಾಲಾಶ್ರೀ ಅಭಿನಯದ ಹಾಗೂ ಭರತ್ ಕುಮಾರ್ ಪರಿಚಯದ ಹಾಡನ್ನು ಆರ್.ಎಸ್. ಗೌಡ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ ಎಂಬ ವಿವರಣೆ ನೀಡಿತು ಚಿತ್ರತಂಡ.

Social Share :

ಪಿಂಕಿ ಎಲ್ಲಿ ? ಅತ್ಯುತ್ತಮ ಚಿತ್ರ ಪ್ರಜ್ವಲ್‍, ಅಕ್ಷತಾ ಅತ್ಯುತ್ತಮ ನಟ, ನಟಿ

Social Share :

* 2020ನೇ ಸಾಲಿನ ರಾಜ್ಯ ಪ್ರಶಸ್ತಿ ವಿಜೇತರು *

ಸಪ್ತಗಿರಿ ಕ್ರಿಯೆಷನ್ಸ್ ಬ್ಯಾನರ್ ನಡಿ ಕೃಷ್ಣೇಗೌಡ ನಿರ್ಮಿಸಿರುವ ಹಾಗೂ ಪೃಥ್ವಿ ಕೋಣನೂರು ನಿರ್ದೇಶನದ ‘ಪಿಂಕಿ ಎಲ್ಲಿ..?’ 2020ನೇ ಸಾಲಿನ ಅತ್ಯುತ್ತಮ ಚಿತ್ರವಾಗಿ ಹೊಮ್ಮಿದೆ.

‘ಜಂಟಲ್‍ಮ್ಯಾನ್‍’ ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್‍ ದೇವರಾಜ್‍ ಅತ್ಯುತ್ತಮ ನಟ ಹಾಗೂ ‘ಪಿಂಕಿ ಎಲ್ಲಿ..?’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇನ್ನುಳಿದಂತೆ ಪ್ರಶಸ್ತಿ ಪಟ್ಟಿ ಈ ಕೆಳಕಂಡಂತೆ ಇದೆ:

ದ್ವಿತೀಯ ಅತ್ಯುತ್ತಮ ಚಿತ್ರ: ವರ್ಣಪಟಲ (ನಿರ್ದೇಶನ : ಚೇತನ್ ಮುಂಡಾಡಿ)

ಮೂರನೇ ಅತ್ಯುತ್ತಮ ಚಿತ್ರ: ಹರಿವ ನದಿಗೆ ಮೈಯೆಲ್ಲಾ ಕಾಲು

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಗಿಳಿಯು ಪಂಜರದೊಳಿಲ್ಲ ಮತ್ತು ಈ ಮಣ್ಣು

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಫೋರ್‍ ವಾಲ್ಸ್

ಅತ್ಯುತ್ತಮ ಮಕ್ಕಳ ಚಿತ್ರ: ಪದಕ

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ನೀಲಿ ಹಕ್ಕಿ (ಗಣೇಶ್‍ ಹೆಗ್ಡೆ)

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಜೀಟಿಗೆ (ತುಳು ಭಾಷೆ)

ಅತ್ಯುತ್ತಮ ಪೋಷಕ ನಟ: ರಮೇಶ್‍ ಪಂಡಿತ್‍ (ತಲೆದಂಡ)

ಅತ್ಯುತ್ತಮ ಪೋಷಕ ನಟಿ: ಮಂಜುಳಮ್ಮ (ದಂತಪುರಾಣ)

ಅತ್ಯುತ್ತಮ ಕಥೆ: ಶಶಿಕಾಂತ್‍ ಗಟ್ಟಿ (ರಾಂಚಿ)

ಅತ್ಯುತ್ತಮ ಚಿತ್ರಕಥೆ: ರಾಘವೇಂದ್ರ ಕುಮಾರ್‍ (ಚಾಂದಿನಿ ಬಾರ್‍)

ಅತ್ಯುತ್ತಮ ಸಂಭಾಷಣೆ: ವೀರಪ್ಪ ಮರಳವಾಡಿ (ಹೂವಿನ ಹಾರ)

ಅತ್ಯುತ್ತಮ ಛಾಯಾಗ್ರಹಣ: ಅಶೋಕ್ ಕಶ್ಯಪ್‍ (ತಲೆದಂಡ)

ಅತ್ಯುತ್ತಮ ಸಂಗೀತ ನಿರ್ದೇಶನ: ಗಗನ್‍ ಬಡೇರಿಯಾ (ಮಾಲ್ಗುಡಿ ಡೇಸ್‍)

ಅತ್ಯುತ್ತಮ ಸಂಕಲನ: ನಾಗೇಂದ್ರ ಕೆ. ಉಜ್‍ಜರಿ (ಆ್ಯಕ್ಟ್ 1978)

ಅತ್ಯುತ್ತಮ ಬಾಲನಟ: ಅಹಿಲ್‍ ಅನ್ಸಾರಿ (ದಂತ ಪುರಾಣ)

ಅತ್ಯುತ್ತಮ ಬಾಲನಟಿ: ಬೇಬಿ ಹಿತೈಷಿ ಪೂಜಾರ್‍ (ಪಾರು)

ಅತ್ಯುತ್ತಮ ಕಲಾ ನಿರ್ದೇಶನ: ಗುಣಶೇಖರ್‍ (ಬಿಚ್ಚುಗತ್ತಿ)

ಅತ್ಯುತ್ತಮ ಗೀತ ರಚನೆ: ಗಾರ್ಗಿ ಕಾರೆಹಕ್ಲು (‘ಪರ್ಜನ್ಯ’ ಚಿತ್ರದ ‘ಮೌನವು ಮಾತಾಗಿದೆ’) ಮತ್ತು ಸಚಿನ್‍ ಶೆಟ್ಟಿ ಕುಂಬ್ಳೆ (‘ಈ ಮಣ್ಣು’ ಚಿತ್ರದ ‘ದಾರಿಯೊಂದು ಹುಡುಕುತ್ತಿದೆ’)

ಅತ್ಯುತ್ತಮ ಹಿನ್ನೆಲೆ ಗಾಯಕ: ಅನಿರುದ್ಧ್ ಶಾಸ್ತ್ರಿ (ಆಚಾರ್ಯ ಶ್ರೀ ಶಂಕರ)

ಅತ್ಯುತ್ತಮ ಹಿನ್ನೆಲೆ ಗಾಯಕಿ: ಅರುಂಧತಿ ವಸಿಷ್ಠ (ದಂತ ಪುರಾಣ)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಸಂಚಾರಿ ವಿಜಯ್‍ (ನಟನೆಗಾಗಿ – ಮರಣೋತ್ತರವಾಗಿ), ಶ್ರೀ ವಲ್ಲಿ (ವಸ್ತ್ರ ವಿನ್ಯಾಸ – ‘ಸಾರವಜ್ರ’), ರಮೇಶ್‍ ಬಾಬು (ಪ್ರಸಾಧನ – ‘ತಲೆದಂಡ’) ಮತ್ತು ವಿ.ಜಿ. ರಾಜನ್ (ಶಬ್ಧಗ್ರಹಣ – ಅಮೃತ್‍ ಅಪಾರ್ಟ್‍ಮೆಂಟ್ಸ್)

ತೀರ್ಪುಗಾರರ ವಿಶೇಷ ಪ್ರಶಸ್ತಿ (ಪ್ರಮಾಣ ಪತ್ರ): ವಿಶ್ವಾಸ್‍ ಕೆ.ಎಸ್ (ವಿಶೇಷಚೇತನ ನಟ – ಅರಬ್ಬೀ)

ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಚಂಪಕಧಾಮ ಬಾಬು (ಕನ್ನಡಿಗ)

Social Share :

ಇಂಟಲ್ ವಲ್ ಚಿತ್ರವಿಮರ್ಶೆ

Social Share :

ರೇಟಿಂಗ್ : 3/5

ನಿರ್ಮಾಣ : ಸುಖೀ ಹಾಗೂ ಭರತ್ ವರ್ಷ್

ನಿರ್ದೇಶನ : ಭರತ್ ವರ್ಷ್

ಉಡಾಫೆ ಜೀವನ ಅವನತಿಯ ಧ್ಯಾನ

ಬದುಕಿನ ಮೌಲ್ಯಗಳನ್ನು ನಿರ್ಲಕ್ಷಿಸಿ ಉಡಾಫೆಯ ಜೀವನ ನಡೆಸುವ ಮೂವರು ಯುವಕರ ಬದುಕಿನಲ್ಲಿ ಎರಡು ವಿರಾಮಗಳು ಜೀವನದ ಪಾಠ ಕಲಿಸುತ್ತವೆ.

ಒಂದು ಅಲ್ಪ ವಿರಾಮ; ಈ ವೇಳೆ ಹಳ್ಳಿ ತೊರೆದು ಪಟ್ಟಣ ಸೇರುತ್ತಾರೆ; ಮತ್ತೊಂದು ಪೂರ್ಣ ವಿರಾಮ. ಕೆಟ್ಟು ಹಳ್ಳಿ ಸೇರುತ್ತಾರೆ. ಎರಡೂ ಬದುಕಿನ ಪಾಠ ಎಂಬುದಾದರೆ ಅದರಲ್ಲಿ ಬರುವ ಚಿತ್ರ ವಿಚಿತ್ರ ನಡವಳಿಕೆ ಇತ್ಯಾದಿಗಳನ್ನು ಸಹಿಸಿಕೊಳ್ಳಲೇ ಬೇಕು.

ಗಣೇಶ್ ಟಿ, ಗಣೇಶ್ ಯು, ಗಣೇಶ್ ಎಸ್ ಹೀಗೆ ಮೂವರ ಹೆಸರೂ ಗಣೇಶ್; ಮೂವರ ನಡವಳಿಕೆಯೂ ಒಂದೇ. ಶಾಲೆಗೆ ಚಕ್ಕರ್ ಹೊಡೆದು ಮಜಾ ಮಾಡುವುದು; ಮಾರ್ಕ್ ಕಾರ್ಡ್ ಗೆ ಪೋಷಕರ ಸಹಿ ಫೋರ್ಜರಿ ಮಾಡುವುದು ಹೀಗೆ ಬಾಲ್ಯದಲ್ಲೇ ಆಗುವ ತುಂಟಾಟ ಯುವಕರಾದ ಮೇಲೂ ಮುಂದುವರಿಯುತ್ತದೆ.

ಯಾವುದನ್ನೂ ಗಂಭೀರವಾಗಿ ಪರಿಗಣಿಸದೇ ಉಡಾಫೆಯಿಂದ ವರ್ತಿಸುವುದರಿಂದ ಮೂವರಿಗೆ ಹಳ್ಳಿ ಬಿಡುವ ಪ್ರಸಂಗ ಎದುರಾಗುತ್ತದೆ. ಮುಂದೆ ಪಟ್ಟಣದಲ್ಲಿಯೂ ಇವರ ಜ್ಞಾನಕ್ಕೆ ಯಾವ ಉದ್ಯೋಗವೂ ದೊರೆಯದೇ ಆಶ್ರಯ ಕೊಟ್ಟ ಸ್ನೇಹಿತನಿಂದಲೇ ಛೀಮಾರಿ ಹಾಕಿಸಿಕೊಂಡು ಮತ್ತೆ ಹಳ್ಳಿಗೆ ವಾಪಾಸ್ಸಾಗುತ್ತಾರೆ.

ಅಲ್ಲಿ ಹೆತ್ತವರು ಅದೇ ಪ್ರೀತಿ ಕೊಡುತ್ತಾರೆ. ಇಷ್ಟು ದಿನ ಕಳೆದುಕೊಂಡಿದ್ದು ಗಳಿಸಿದಂತೆ ಖುಷಿಯಾಗಿ ಬದಲಾಗಲು ದಾರಿ ಹುಡುಕುತ್ತಾರೆ. ಉಡಾಫೆಯ ಬದುಕಿನ ದರ್ಶನ ಬೇಕಿದ್ದರೆ ಈ ಚಿತ್ರವನ್ನು ನೋಡಬಹುದು.

ಆದರೆ ಜೀವನವನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ ಏನಾಗುತ್ತದೆ ಎಂಬುದರ ವಾಸ್ತವ ಚಿತ್ರಣವಿದ್ದರೂ ಕೆಲವೆಡೆ ಬರುವ ಅನಾವಶ್ಯಕ ಬೋಧನೆ ಇರಿಸು ಮುರಿಸು ಉಂಟು ಮಾಡಿದರೆ ಅದು ಅಚ್ಚರಿ ಅಲ್ಲ.

ಚಿತ್ರಕಥೆಯನ್ನು ಬದಲಾಯಿಸಿ ಒಂದು ತಾರ್ಕಿಕ ಅಂತ್ಯ ನೀಡುವ ಅವಕಾಶವನ್ನು ನಿರ್ದೇಶಕರು ಸಂಪೂರ್ಣ ಕೈ ಚೆಲ್ಲಿರುವುದು ಎದ್ದು ಕಾಣುತ್ತದೆ.

ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ ಹಾಗೂ ಸುಕಿ ನಟನೆಯಲ್ಲಿ ಗಮನ ಸೆಳೆಯುತ್ತಾರೆ. ಜೊತೆಗೆ ಚರಿತ್ರಾ ರಾವ್, ಸಹನ ಆರಾಧ್ಯ ಪಾತ್ರಗಳು ಸಹಕಾರಿಯಾಗಿವೆ.

ರಾಜ್ ಕಾಂತ್ ಛಾಯಾಗ್ರಹಣ, ವಿಕಾಶ್ ವಸಿಷ್ಠ ಸಂಗೀತ ಚಿತ್ರಕ್ಕೆ ಪೂರಕ.

Social Share :

ಕಪಟಿ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ದಯಾಳ್ ಪದ್ಮನಾಭನ್

ನಿರ್ದೇಶನ : ರವಿಕಿರಣ್ ಹಾಗೂ ಚೇತನ್ ಎಸ್ ಪಿ.

ಡಾರ್ಕ್ ವೆಬ್ ಕರಾಳ ಮುಖ ದರ್ಶನ..

ಫ್ಯಾಷನ್ ಡಿಸೈನರ್ ಪ್ರಿಯಾ ಕುಟುಂಬದ ಒಂದು ದುರ್ಘಟನೆಯಿಂದ ಇಡೀ ಮನೆ ವಿಡಿಯೋ ಕಣ್ಗಾವಲಿನ ಚೌಕಟ್ಟಿಗೆ ಒಳಪಡುತ್ತದೆ. ಆ ಮೂಲಕ ಕಪಟಿಯ ವಂಚನೆಯ ಜಾಲದ ಕರಾಳ ಮುಖ ಗೋಚರಿಸುತ್ತಾ ಹೋಗುತ್ತದೆ..

ಈ ಮೋಸ ವಂಚನೆಯ ಜಗತ್ತು ತನ್ನ ಕಬಂಧ ಬಾಹುಗಳಿಂದ ದುರ್ಬಲ ಮನಸ್ಸುಗಳನ್ನು ಆಕ್ರಮಿಸಿ ಸಂಭ್ರಮಿಸುತ್ತದೆ..

ಅತಿಯಾದ ಆಸೆ‌ ಮತ್ತು ಮತ್ತೇರಿಸುವ ಹಿಂಸೆಯ ರೀತಿಯ ವಿಕೃತಿಗಳಿಂದ ಮಾಡಬಾರದ ಅನಾಹುತ ಮಾಡುವ ಕಪಟ ಮನಸ್ಸಿನ ಸಂಚು ಕ್ಷಣ ಕ್ಷಣವೂ ಬೆಚ್ಚಿ ಬೀಳಿಸುತ್ತದೆ..

ಸೈಬರ್ ತಾಣಗಳ ಮೂಲಕ ವಿಕೃತಿ ಮೆರೆಯುವ ಜಾಲಗಳ ಹೊಸ ಹೊಸ ಆಯಾಮಗಳ ಬಗ್ಗೆ ಸಭ್ಯ ನಾಗರಿಕ ಪ್ರಪ್ರಂಚಕ್ಕೆ ಹೆಚ್ಚಾಗಿ ಏನು ತಿಳಿಯದೇನಲ್ಲ; ಈಚೆಗೆ ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ಗಂಟೆಯನ್ನು ಮೊಬೈಲ್ ರಿಂಗ್ ಟೋನ್ ಗಳ ಮೂಲಕ ಬಿತ್ತರಿಸುತ್ತಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಈ ಕಥೆಯಲ್ಲಿ ಸುಮನ್ ಎಂಬ ಮೆಡಿಕಲ್ ವಿದ್ಯಾರ್ಥಿ ಹಾಗೂ ಚಕ್ರಿ ಎಂಬ ಕ್ಯಾಬ್ ಡ್ರೈವರ್ ಹೂಡುವ ಆಟದಲ್ಲಿ ಪ್ರಿಯಾ ಮನೆ ಕಣ್ಗಾವಲಿಗೆ ಒಳಪಡುತ್ತದೆ. ಇಬ್ಬರ ಉದ್ದೇಶವೂ ಒಂದೇ ವಂಚನೆಯ ಮೂಲಕ ಹಣ ಗಳಿಸುವುದು..

ಇವರಿಬ್ಬರಲ್ಲಿ ಚಕ್ರಿ ಅತ್ಯಂತ ದುಷ್ಟ ಮತ್ತು ಕ್ರೂರಿ. ಆತನ ವರಸೆಗಳು ಭಯಾನಕ. ಅಬ್ಬಾ ಈ ಸೈಬರ್ ವಂಚನೆಯಲ್ಲಿ ಇಷ್ಟೊಂದು ಕ್ರೌರ್ಯವಿದೆಯೇ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳುವಷ್ಟು ಭಯಾನಕ.

ಪ್ರಿಯಾ ಮನೆಯಲ್ಲಿಯೇ ಆಕೆಯನ್ನು ಹಿಂಸೆಗೆ ಒಳಪಡಿಸುವ ಸಂಚು ನಡೆಯುವುದು ಮತ್ತು ಕ್ರೂರ ಮನಸಿನ ಆ ಆಟ ಕೌತುಕ ಮತ್ತು ಭಯಾನಕ.

ಪ್ರಿಯಾ ತನ್ನ ತಮ್ಮ ಅಮಿತ್ ಬದುಕಿನ ಬಗ್ಗೆ ಕನಸುಗಳನ್ನು ಕಟ್ಟಿಕೊಂಡವಳು.. ನಂತರ ಆತನ ಸ್ಥಿತಿಗೆ ಶೋಕಿಸುತ್ತಾ ಕಾಲ ಕಳೆಯುತ್ತಿದ್ದವಳಿಗೆ ಈ ಸೈಬರ್ ವಂಚನೆಯ ಸೈಕ್ ಗಳು ಹೇಗೆ ವರವಾದರು ಎಂಬುದು ಚಿತ್ರ ನೋಡಿಯೇ ತಿಳಿಯಬೇಕು.

ಪ್ರಿಯಾ ಪಾತ್ರದಲ್ಲಿ ಸುಕೃತಾ ವಾಗ್ಲೆ ಹಾಗೂ ಸೈಬರ್ ವಂಚನೆಯ ಸೂತ್ರಧಾರ ದೇವ್ ದೇವಯ್ಯ ಹಾಗೂ ಸೈಕ್ ಆಗಿ ಕಾಣುವ ಸಾತ್ವಿಕ್ ಕೃಷ್ಣನ್ ನಟನೆ ಗಮನಾರ್ಹ.

ಆನ್‌ಲೈನ್ ಶೋಷಣೆಯ ಪರಿಣಾಮಗಳು ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಹೇಗೆ ಮೋಸ ಮಾಡಲಾಗುತ್ತಿದೆ ಎಂಬುದರ ದರ್ಶನವಾಗುವುದರಿಂದ ಇದು ಇವತ್ತಿನ ಜನ ಸಾಮಾನ್ಯರ ಕಥೆ ಎನಿಸುತ್ತದೆ.

Social Share :

ಈ ವಾರ ಇಂಟರ್ ವಲ್ ತುಂಟಾಟದ ಫೆಸ್ಟಿವಲ್..

Social Share :

ಚಿತ್ರಗಳನ್ನು ನೋಡಲು ಹೋದವರಿಗೆ ಮಧ್ಯಂತರ ವಿರಾಮ ಸಿಗುತ್ತದೆ ಎಂಬುದು ಸಾಮಾನ್ಯ. ಆದರೆ ಬದುಕಿನಲ್ಲಿಯೂ ಒಮ್ಮೆ ಇದು ಬರುತ್ತದೆ ಎಂಬುದನ್ನು ಚಿತ್ರತಂಡವೊಂದು ಸಾರಲು ಹೊರಟಿದೆ.

ಮೂವರು ಗ್ರಾಮೀಣ ಭಾಗದ ಹುಡುಗರ ತುಂಟಾಟ ಸಾರುವ ಚಿತ್ರವೊಂದು ಈ ವಾರ (ಮಾ.7)ಬಿಡುಗಡೆಗೆ ಸಜ್ಜಾಗಿದ್ದು, ಆ ಚಿತ್ರದ ಹೆಸರೇ ಇಂಟರ್ ವಲ್.

ಭರತವಷ್೯ ಪಿಚ್ಚರ್ಸ್ ಅಡಿ, ಸುಖೀ ಹಾಗೂ ಭರತ್ ಸೇರಿ ನಿರ್ಮಿಸಿರುವ ಹಾಗೂ ಭರತ್ ನಿರ್ದೇಶಿಸಿರುವ ಚಿತ್ರ ದಲ್ಲಿ ಯುವ ಸಮೂಹ ಆಕರ್ಷಿಸುವ ಎಲ್ಲಾ ಅಂಶಗಳಿವೆ.

ಶಶಿರಾಜ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರ ರಾವ್, ಸಹನ ಆರಾಧ್ಯ, ಸಮೀಕ್ಷ, ದಾನಂ ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇಂದಿನ ಯುವ ಹೃದಯಗಳು ಪ್ರೀತಿ ಪ್ರೇಮದ ಸುತ್ತ ಹೇಗೆಲ್ಲಾ ವರ್ತಿಸುತ್ತವೆ ಎಂಬುದರ ಸುತ್ತ ನಡೆಯುವ ಕಥೆಯಲ್ಲಿ ಪ್ರೇಕ್ಷಕರಲ್ಲಿ ನಗೆಯ ಬುಗ್ಗೆಯನ್ನೇ ಹರಿಸುವ ಅಂಶಗಳಿವೆ.

ಗಮನ ಸೆಳೆಯುವ ಕ್ಲೈಮ್ಯಾಕ್ಸ್ ಚಿತ್ರದ ಪ್ರಮುಖ ಅಂಶ ಎಂಬುದು ಚಿತ್ರತಂಡದ ಮಾತು. ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆ ಮಾಡಿರುವ ಹಾಡುಗಳಿಗೆ ವಿಜಯ್ ಪ್ರಕಾಶ್, ಚಂದನ್ ಶಟ್ಟಿ, ಆಲ್ ಓಕೆ ಅಲೋಕ್, ಸುನಿಧಿ ಗಣೇಶ್, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸುಕೇಶ್ ಬರೆದಿದ್ದು, ರಾಜ್ ಕಾಂತ್ ಛಾಯಾಗ್ರಹಣ, ಚಂದ್ರು ಬಂಡೆ ಸಾಹಸ, ಶಶಿಧರ್ ಸಂಕಲನ ಈ ಚಿತ್ರಕ್ಕಿದೆ.

ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಇದೇ ವಾರ ‘ಇಂಟಲ್ ವಲ್’ನ ಮನರಂಜನೆ ಚಿತ್ರಮಂದಿರಗಳಲ್ಲಿ ಸಿಗಲಿದೆ.

Social Share :