Snehapriya.com

March 7, 2026

ಸೀತಾ ಪಯಣ ಚಿತ್ರವಿಮರ್ಶೆ

Social Share :

ರೇಟಿಂಗ್ : 4/5

ನಿರ್ಮಾಣ ಮತ್ತು ನಿರ್ದೇಶನ :
ಅರ್ಜುನ್ ಸರ್ಜಾ

ಭಾವುಕ ಪಯಣ
ಪ್ರೇಮದ ಕುಲುಮೆ

ಕುಟುಂಬ ಪ್ರೀತಿ ಎಂಬುದು ಕಾಲಾನುಕಾಲಕ್ಕೆ ಬದಲಾಗುತ್ತದೆ. ಸ್ವಾರ್ಥದ ನೆಲೆಯಲ್ಲಿ ಕೌಟುಂಬಿಕ ಮೌಲ್ಯ ನಶಿಸುತ್ತ ಹೋಗುತ್ತದೆ..

ಕುಟುಂಬದ ಪ್ರೀತಿ ಮತ್ತು ಕೌಟುಂಬಿಕ ಮೌಲ್ಯದ ನೆಲೆಯನ್ನು ಅದೇ ಪ್ರೇಮದ ಜಾಡಿನಲ್ಲಿ ಹುಡುಕಾಡಿರುವ ಪ್ರಯತ್ನವೇ ಸೀತಾ ಪಯಣ..

ಅಪ್ಪನ ಪ್ರೀತಿಯಲ್ಲಿ ಮಿಂದೆದ್ದು ಭಯ ಮಿಶ್ರಿತ ಬದುಕಿನಲ್ಲಿಯೂ ಸಾಹಸಿ ಯಾಗಲು ಹೋಗುವ ಸೀತಾ, ಅದಮ್ಯ ಚೈತನ್ಯ ಮತ್ತು ಪ್ರೇಮ ಸಹಿತ ಭಾವನೆಯಲ್ಲಿ ಮಿಂದೇಳುವವಳು..

ಆಕೆಯ ಬದುಕಿಗೆ ಪಯಣಿಗನಾಗಿ ಬರುವ ಅಭಿಷೇಕ್ ಆತನ ಕುಟುಂಬ ಪ್ರೀತಿಯ ನೆಲೆಯಲ್ಲಿ ಕಾಣ ಸಿಗುವ ಅಕ್ಷಯ ಪಾತ್ರೆ. ಆದರೆ ಅಪ್ಪನ ಮೇಲಿನ ಅತಿಯಾದ ಪ್ರೀತಿ ಆಕೆಗೆ ಗಂಟಾಗುತ್ತದೆ..

ಆ ಗಂಟು ಕ್ಷಣ ಕ್ಷಣವೂ ಸಡಿಲವಾಗಲು ಅಥವಾ ಇನ್ನಷ್ಟು ಗಟ್ಟಿಯಾಗುವ ದಾರಿಯಲ್ಲಿ ಘಟನಾವಳಿಗಳು ನಡೆಯುತ್ತಾ ಹೋಗುತ್ತವೆ..

ಅದೊಂದು ಭಾವುಕ ಪಯಣ..!

ದಾರಿಯ ಉದ್ದಕ್ಕೂ ಪ್ರೀತಿ ಪಾತ್ರರು ಸಿಗುತ್ತಾ ಹೋಗುತ್ತಾರೆ. ಕಟುಕ ಗಿರಿ, ಹೂವು ಮಾರುವ ಹುಡುಗಿ, ಬಸವನ ಹಿಡಿದು ಬರುವ ಹುಡುಗ, ಗೂಳಿ ಬಸವಣ್ಣ, ಜೊತೆಗೆ ಅಭಿ ಹೀಗೆ ಪಯಣದಲ್ಲಿ ಸೀತಾ ಬದುಕಿನಲ್ಲಿ ವರವಾಗುತ್ತಾರೆ.

ಬಹು ದೊಡ್ಡ ಅಗ್ನಿ ಅವಘಡದಿಂದ ಪಾರಾಗುವ ಸೀತಾ, ಆನಂತರದಲ್ಲಿ‌ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುತ್ತಾ ಎಲ್ಲರಿಗೂ ಧನ್ಯವಾದ ಅರ್ಪಿಸುವ ಮತ್ತೊಂದು ಪಯಣದಲ್ಲಿ ಕುಟುಂಬದ ಮೌಲ್ಯಗಳು ವ್ಯಕ್ತವಾಗುತ್ತಾ ಹೋಗುತ್ತವೆ..

ಮದುವೆಯಾಗಲು ಅಪ್ಪನ ಮೇಲಿನ ಪ್ರೀತಿ ಅಡ್ಡಿ ಎಂಬ ಬಿಕ್ಕಟ್ಟು ಸುಮ್ಮನೆ ಎಳೆಯುತ್ತಾ ಹೋಗುತ್ತದೆ ಎಂದು ಅನಿಸುತ್ತಾ ಹೋದರೂ ಅದು ಅಚ್ಚರಿ ಅಲ್ಲ. ಆದರೆ ಭಾವುಕ ನೆಲೆಯಲ್ಲಿ ಅದು ತೆಳುವಾಗುತ್ತಾ ಕರಗಿ ಹೋಗುವುದೇ ವಿಶೇಷ.

ಕೊನೆಗೆ ಮನೆ ಅಂದ್ರೆ ಬರೀ ಗೊಡೆಗಳಲ್ಲ; ಸಂಬಂಧಗಳು ಎಂಬ ಅರಿವು ಮೂಡಿ ಸುಖಾಂತವಾಗುವಷ್ಟರಲ್ಲಿ ಪ್ರೇಕ್ಷಕನಿಗೂ ಬಿಡುಗಡೆಯ ಅನುಭವ ಸಿಗುತ್ತದೆ..

ಅರ್ಜುನ್ ಸರ್ಜಾ‌ ಮಗಳಿಗಾಗಿ, ಮಗಳಿಗೋಸ್ಕರ ಮಾಡಿರುವ ಈ ಚಿತ್ರದಲ್ಲಿ ಐಶ್ವರ್ಯ ಅರ್ಜುನ್ ಇಡೀ ಚಿತ್ರವನ್ನು ಆವರಿಸಿಕೊಂಡು ತಾನೊಬ್ಬ ಪ್ರಬುದ್ಧ ನಟಿಯಾಗಬಲ್ಲೆ ಎಂದು ಸಾಬೀತುಪಡಿಸಿದ್ದಾರೆ. ಉಪ್ಪಿ ಅಣ್ಣನ ಮಗ ನಿರಂಜನ್ ಸುಧೀಂದ್ರ ಅತ್ಯುತ್ತಮ ಅವಕಾಶ ಪಡೆದು ಮಿಂಚಿದ್ದಾರೆ.

ಪ್ರಕಾಶ್ ರಾಜ್ ವಿರುದ್ಧ ನೆಲೆಯ ಪಾತ್ರದಲ್ಲಿ ಅದ್ಭುತವಾಗಿ ಮಿಂಚಿದ್ದಾರೆ. ಸತ್ಯರಾಜ್ ಎಂದಿನ ಸಹಜ ಸೊಬಗಿನಲ್ಲಿ ಕಣ್ಣಂಚು ಒದ್ದೆಯಾಗುವಂತೆ ಕಾಣಿಸಿಕೊಂಡಿರುವುದೇ ವಿಶೇಷ.

ಕಟುಕನ ಪಾತ್ರದಲ್ಲಿ ಅರ್ಜುನ್ ಸರ್ಜಾ ಮತ್ತು ಗೂಳಿ ಬಸವಣ್ಣನ ಪಾತ್ರದಲ್ಲಿ ಧ್ರುವ ಸರ್ಜಾ ಬೆಂಬಲವೂ ಐಶ್ವರ್ಯ ಬೆಳೆಯುವ ದಿಕ್ಕಿನಲ್ಲಿ ಕಂಡು ಬರುವ ಅಚ್ಚರಿ.

ಉತ್ತರ ಕರ್ನಾಟಕದ ಜೀವನ ಮೌಲ್ಯದ ಸೊಬಗು; ದಾರಿಯಲ್ಲಿ ಕಾಣುವ ಪ್ರಕೃತಿಯ ಬೆಡಗು ಜಿ.ಬಾಲ ಮುರುಗನ್ ಕ್ಯಾಮೆರಾದಲ್ಲಿ ಅದ್ಭುತ ರೀತಿಯಲ್ಲಿ ಸೆರೆಯಾಗಿದೆ. ಭಾವುಕ ಪಯಣದಲ್ಲಿ ಹೃದಯ ತಟ್ಟುವುದು ಅನೂಪ್ ರುಬೆನ್ ಸಂಗೀತ..

Social Share :

Leave a Comment

Your email address will not be published. Required fields are marked *