
ರೇಟಿಂಗ್ : 2.5/5
ನಿರ್ಮಾಣ : ರೆಡ್ ಅಂಡ್ ವೈಟ್ ಸೆವೆನ್ ರಾಜ್
ನಿರ್ದೇಶನ : ಅಫ್ಜಲ್ ಸಪೋರ್ಟರ್ಸ್
ರಂಗಿನಾಟದ ಮಜಲುಗಳು

ಸಾಲ ಕೊಡುವ ಶ್ರೀಮಂತ ವ್ಯಕ್ತಿಗೆ ವಯಸ್ಸಾದರೂ ಅಪಾರ ಚಪಲ; ಈ ವ್ಯಕ್ತಿ ಸಾಲ ತೆಗೆದುಕೊಂಡು ಅಸಹಾಯಕರಾದ ಯುವಕರ ಪತ್ನಿಯ ಮೇಲೆ ಕಣ್ಣು ಹಾಕುತ್ತಾನೆ. ಈ ಶ್ರೀಮಂತನಿಗೆ ಬುದ್ಧಿ ಕಲಿಸಲು ಯುವಕ ಆಡುವ ನಾಟಕ; ಡೆಲಿವರಿ ಬಾಯ್ ಗೆ ಆದ ಅನುಭವ; ಐಟಿ ಉದ್ಯೋಗಿಯ ರೆಸಾರ್ಟ್ ಅನುಭವ ಮತ್ತು ಕಳ್ಳನೊಬ್ಬನ ಅನುಭವ ಎಲ್ಲವೂ ಸೆಕ್ಸ್ ಕೇಂದ್ರೀತ..!
ಸಮಾಜದಲ್ಲಿ ಯುವ ಜನರು ಒಂದೆಡೆ ಸೇರಿದರೆ ಅವರ ಗುಪ್ತ ಅನಿಸಿಕೆ ಸಾಹಸ ರೂಪದಲ್ಲಿ ಹೊರ ಬರುತ್ತದೆ. ಇಲ್ಲಿನ ನಾಲ್ವರೂ ‘ಆ ವಿಷಯದಲ್ಲಿ ಹೆಚ್ಚಿನ ಸಾಹಸಿಗಳು’.
ಕಷ್ಟಗಳಿಂದ ನಲುಗುವ ಅಭಿ ಎಂಬ ಹುಡುಗ ಶ್ರೀಮಂತನಿಂದ ಸಾಲ ಪಡೆದು ಅದನ್ನು ತೀರಿಸುವ ಸಲುವಾಗಿ ‘ಪೂರೈಕೆದಾರ’ ಆಗಿ ಆಡುವ ಆಟ; ವಿಮಲ್ ಎಂಬ ಡೆಲಿವರಿ ಬಾಯ್ ಗೆ ಕವಿತಾ ಎಂಬ ಯುವತಿಯಿಂರ ಒಲಿಯುವ ಅದೃಷ್ಟ ಮತ್ತು ಕಂಟಕ.
ರೋಹಿತ್ ಎಂಬ ಐಟಿ ಉದ್ಯೋಗಿ ಮತ್ತು ಸಹೋದ್ಯೋಗಿ ಪೂಜಾ ನಡುವಿನ ಸ್ನೇಹ ಮತ್ತು ಆಯುಷ್ ಮತ್ತು ಟೀನಾ ಎಂಬ ಫ್ಲರ್ಟಿಗಳ ಮಿಲನ ಮಹೋತ್ಸವದ ಆಟಗಳು. ಅಲ್ಲಿ ನಡೆಯುವ ಎಕ್ಸ್ ಚೇಂಜ್ ಆಫರ್ ನಲ್ಲಿ ರೋಹಿತ್ ಮತ್ತು ಟೀನಾ ಹಾಗೂ ಆಯುಷ್ ಮತ್ತು ಪೂಜಾ ಸುಖದ ಮತ್ತಿನಲ್ಲಿ ತೇಲಾಡುವುದು.
ಅದಕ್ಕಾಗಿ ವಿಲಾಸಿ ರೆಸಾರ್ಟ್ ನಲ್ಲಿ ಚಿತ್ರೀಕರಣ ಮಾಡಿರುವುದು..
ನಂತರ ಬಚ್ಚಿಕೊಳ್ಳುವ ಮನೋಜ್ ಎಂಬ ಕಳ್ಳನ ಕಥೆ. ಆತ ದೀಪ್ತಿ ಎಂಬಾಕೆಯನ್ನು ಸುಖಿಸುವುದು. ಬಳಿಕ ಈ ನಾಲ್ವರಿಗೂ ಕುಬೇರಪ್ಪ ಹೊಂದಿಕೊಳ್ಳುವ ಕಥೆಯಲ್ಲಿ ಜಾಳುತನದ್ದೇ ಪಾರುಪಥ್ಯ.
ಕೇವಲ ಲೈಂಗಿಕ ಸಂಪರ್ಕ ಮತ್ತು ಆಲೋಚನೆಗಳಿಂದ ಆವೃತವಾದ ಇಡೀ ಚಿತ್ರದಲ್ಲಿ ಕಲಾತ್ಮಕತೆ ಮತ್ತು ಕ್ರಿಯಾಶೀಲ ಆಶಯಗಳನ್ನೇ ಕಡೆಗಣಿಸಿರುವುದು ಎದ್ದು ಕಾಣುತ್ತದೆ.
ಸಾಮಾಜಿಕ ನೆಲೆಯಲ್ಲಿ ನಡೆಯುವ ಕೆಲವು ನೈಜ ಅಂಶಗಳಿದ್ದರೂ ನಿರೂಪಣೆಯ ಬಾಲಿಶತನದಿಂದಾಗಿ ಅದು ಗೌಣವೆನಿಸುತ್ತದೆ. ಮುಖ್ಯವಾಗಿ ಸಂಭಾಷಣೆ ಮತ್ತು ದೃಶ್ಯ ಸಂಯೋಜನೆಯಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತದೆ.
ಕಾಮ ಕೇಂದ್ರೀತ ಕಥೆಗೆ ನಿರೂಪಣೆಯ ವರಸೆಯನ್ನಾದರೂ ಶ್ರೀಮಂತಗೊಳಿಸಿ ಆನಂದಿಸುವ ಅಪೂರ್ವ ಅವಕಾಶದಿಂದ ಚಿತ್ರತಂಡ ವಂಚಿತವಾಗಿದೆ. ಅದಕ್ಕೆ ಬಜೆಟ್ ಮಿತಿ ಮತ್ತು ಏಳರ ಗಂಟಿನ ರಹಸ್ಯದ ಕಾರಣವೂ ಇರಬಹುದು..

ಕುಬೇರಪ್ಪನ ಪಾತ್ರದಲ್ಲಿ ರೆಡ್ ಅಂಡ್ ವೈಟ್ ಸೆವೆನ್ ರಾಜ್ ವಿಲನ್ ಆಗುವ ಆಸೆಯನ್ನು ಈಡೇರಿಸಿಕೊಂಡಿದ್ದಾರೆ ಎಂಬುದು ಅವರ ಆಪ್ತರಿಗೆ ಎದ್ದು ಕಾಣುವ ಅಂಶ.
ಇನ್ನುಳಿದಂತೆ ಅಫ್ಜಲ್, ವಸಿಷ್ಠ ಬಂಟನೂರು, ವಿನಯ್, ರಾಜಪ್ರಭು, ಅಂಜಲಿ, ರಣವೀರ್, ಸೌಮ್ಯ, ರೇಖಾ ಮೊದಲಾದವರು ತಮಗೆ ಸಿಕ್ಕಿದ ಅವಕಾಶಗಳಲ್ಲಿ ಮಿಂದೆದ್ದಿದ್ದಾರೆ.
ರಾಜು ಮೈಸೂರು ಛಾಯಾಗ್ರಹಣ ಹಾಗೂ ರಾಜು ಹೆಮ್ಮಿಗನೂರು ಸಂಗೀತ ಚಿತ್ರಕ್ಕೆ ಪೂರಕ.
