
* ರೇಣುಕಾಸ್ವಾಮಿ ಕೊಲೆ ಪ್ರಕರಣ ನೆನಪಿಸುವ ಟೀಸರ್ *
* ಮಿ.ನಟವರಲಾಲ್ ಚಿತ್ರ ತಂಡದ ಮತ್ತೊಂದು ಕೊಡುಗೆ *
ಇಲ್ಲಿ ‘ಬಾಸ್’ ಎಂದರೆ ಯಾರು..
ಅದು ಖಂಡಿತಾ ಡಿ ಬಾಸ್ ಇರಬಹುದೇ ಎಂಬ ಪ್ರಶ್ನೆಗಳ ಜೊತೆ ಚಿತ್ರತಂಡವನ್ನು ಮಾಧ್ಯಮದ ಪ್ರತಿನಿಧಿಗಳು ಜರಡಿಯಾಡಿಸಿ ಕೈ ಬಿಟ್ಟರು.
ಆದರೆ ಚಿತ್ರತಂಡ ಬೇರೆಯದನ್ನೇ ಸಮರ್ಥಿಸಿಕೊಂಡಿತು. ಇದೊಂದು ಕ್ರೈಮ್ ಕಥೆಗಳ ಕಥಾಗುಚ್ಛ ಎಂದರು ನಿರ್ದೇಶಕ ಲವ..

ಒಂದು ಕಾಲದಲ್ಲಿ ಪ್ರಪಂಚದ ವಿಸ್ಮಯವಾಗಿರುವ ತಾಜ್ ಮಹಲ್ ನ್ನೇ ಮಾರಾಟಕ್ಕಿಟ್ಟಿದ್ದ ಮಿ.ನಟವರಲಾಲ್ ಎಂಬ ಅಸಾಧ್ಯ ನಟೋರಿಯಸ್ ಬಗ್ಗೆ ಹಿಂದೆ ‘ಮಿ.ನಟವರಲಾಲ್’ ಎಂಬ ಚಿತ್ರ ಮಾಡಿದ್ದ ವೃತ್ತಿಯಲ್ಲಿ ವಕೀಲರಾಗಿರುವ ಲವ ಕಲ್ಪನೆಯ ಬಾಸ್ ಟೀಸರ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮರು ಸೃಷ್ಟಿಯಂತೆ ಕಾಣುತ್ತದೆ.
ಏಕೆಂದರೆ ಪ್ರತಿ ಸನ್ನಿವೇಶ ಮತ್ತು ದೇಹ ಭಾಷೆ ಚಲನೆ ಎಲ್ಲವನ್ನೂ ಚಿತ್ರತಂಡ ಮರುಸೃಷ್ಟಿ ಮಾಡಿದೆ. ಆದರೆ ಇದರೊಳಗಿನ ಕಥೆಯೇ ಬೇರೆ ಎಂಬುದು ನಿರ್ದೇಶಕ ಲವ ಮತ್ತು ಮುಖ್ಯ ಪಾತ್ರ ಮಾಡಿರುವ ತನುಷ್ ಶಿವಣ್ಣ ಅವರ ಸಮರ್ಥನೆ.

ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ, ವಿ.ಲವ ನಿರ್ದೇಶನದಲ್ಲಿ ತನುಷ್ ಶಿವಣ್ಣ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಬಾಸ್’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡು ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ.
ಇದೊಂದು ಕ್ರೈಮ್ ಥ್ರಿಲ್ಲರ್ ಆಧಾರಿತ ಚಿತ್ರ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ತನುಷ್ ಶಿವಣ್ಣ ಅವರ ಜೊತೆ ಮೋನಿಕಾ ಗೌಡ ಹಾಗೂ ಪಾಯಲ್ ಚಂಗಪ್ಪ ಅಭಿನಯಿಸಿದ್ದಾರೆ ಎಂಬ ವಿವರಗಳನ್ನು ನೀಡಿದರು ನಿರ್ದೇಶಕರು.
ಅನಿಲ್ ಪಿ ನಿರ್ಮಾಣದ ಈ ಚಿತ್ರಕ್ಕೆ ‘ಸತ್ಯಮೇವ ಜಯತೇ’ ಎಂಬ ಅಡಿಬರಹವಿದೆ. ಡೆವಿ ಸುರೇಶ್ ಸಂಗೀತ ನಿರ್ದೇಶನ, ಶರತ್ ಎನ್ ಆರ್ ಪುರ ಛಾಯಾಗ್ರಹಣ ಹಾಗೂ ಮಹೇಶ್ ರೆಡ್ಡಿ ಸಂಕಲನ ಚಿತ್ರಕ್ಕಿದೆ.

ಕಲಾವಿದರಾದ ಡಾ.ವಿಜಯೇಶ್, ವೀರೇನ್ ಕೇಶವ್, ಭೀಷ್ಮ ರಾಮಯ್ಯ, ಲಕ್ಷ್ಮಣ್ ಪೂಜಾರಿ ಹಾಗೂ ತಂತ್ರಜ್ಞರು ಹಾಜರಿದ್ದು ತಮ್ಮ ಪಾತ್ರಗಳ ಬಗ್ಗೆ ವಿವರಣೆ ನೀಡಿದರು.
