Snehapriya.com

March 7, 2026

ಸಿನಿಮಾ-ಗಾಸಿಪ್

ಬಜೆಟ್ ನಲ್ಲಿ ಮತ್ತೆ ಸಬ್ಸಿಡಿ ಭಾಗ್ಯ ಮೂರು ವರ್ಷಕ್ಕೆ 20 ಕೋಟಿ ನೀಡಿಕೆ

Social Share :

ಗುಣಾತ್ಮಕ ಚಲನ ಚಿತ್ರಗಳಿಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ಸಹಾಯಧನವನ್ನು ಮತ್ತೆ ಮೂರು ವರ್ಷಗಳಿಗೆ ವಿಸ್ತರಿಸಿ ಅದಕ್ಕಾಗಿ 20 ಕೋಟಿ ಮೀಸಲಿರಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ನಿಂತು ಹೋಗಿದ್ದ ಸಹಾಯಧನವನ್ನು ಈಗಾಗಲೇ (2025-2026 ) ಮೂರು ವರ್ಷ ಅವಧಿಗೆ ಸರ್ಕಾರವು ನೀಡಿದ್ದು, ಮತ್ತೆ ಮೂರು ವರ್ಷದ ಚಲನ ಚಿತ್ರಗಳಿಗೆ ಸಹಾಯ ಧನ ನೀಡುವುದನ್ನು ವಿಸ್ತರಿಸಿ ಶುಕ್ರವಾರ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.

ಮುಂದಿನ ಮೂರು ವರ್ಷಗಳ ಗುಣಾತ್ಮಕ ಚಲನ ಚಿತ್ರಗಳಿಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಸಹಾಯಧನ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಸಿನಿ ಮಿತ್ರ ಯೋಜನೆ

ರಾಜ್ಯದಲ್ಲಿ ಚಲನಚಿತ್ರ ಹಾಗೂ ಇತರೇ ಚಿತ್ರೀಕರಣಗಳಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಒಂದೇ ವೇದಿಕೆಯಲ್ಲಿ ನೀಡುವ ಸಲುವಾಗಿ ‘ಸಿನಿ ಮಿತ್ರ’ ಎಂಬ ಆನ್ ಲೈನ್ ಡಿಜಿಟಲ್ ವ್ಯವಸ್ಥೆ ಜಾರಿಗೊಳಿಸಲು ಘೋಷಣೆ ಮಾಡಲಾಗಿದೆ.

ರಾಜ್ಯದ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಚಿತ್ರೀಕರಣ ಸ್ಥಳಗಳ ಮಾಹಿತಿಯನ್ನು ಒಳಗೊಂಡ ‘ಕರ್ನಾಟಕ ಫಿಲ್ಮ್ ಲೊಕೇಶನ್ ಡಿಜಿಟಲ್ ಮ್ಯಾಪ್’ ನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಲಾಗಿದೆ.

ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಹೆಸರುಘಟ್ಟದಲ್ಲಿ ನಡೆಸುತ್ತಿರುವ ಸೌಂಡ್ ರೆಕಾರ್ಡಿಂಗ್ ಮತ್ತು ಇಂಜಿನಿಯರಿಂಗ್ ಹಾಗೂ ಸಿನಿಮಾಟೋಗ್ರಫಿ ಕೋರ್ಸ್‌ಗಳಿಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು ಎಂದೂ ಕೂಡ ಬಜೆಟ್ ಘೋಷಣೆಯಲ್ಲಿ ತಿಳಿಸಲಾಗಿದೆ.

Social Share :

ಹಯಗ್ರೀವ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಪದ್ಮ ಸಮೃದ್ಧಿ ಮಂಜುನಾಥ್

ನಿರ್ದೇಶನ : ರಘುಕುಮಾರ್ ಓ.ಆರ್

ವಿಕ್ಷಿಪ್ತ ಕಲ್ಪನೆ; ವಿನಾಶದ ನಮೂನೆ

ಮನುಷ್ಯನ ತಲೆ ಕತ್ತರಿಸಿ ಅದಕ್ಕೆ ಪ್ರಾಣಿಗಳ ತಲೆಯನ್ನು ಕಸಿ ಮಾಡಿ ಹೊಂದಿಸುವ ವಿಕ್ಷಿಪ್ತ ಕಲ್ಪನೆಯಲ್ಲಿ ತೇಲಾಡುವ (ಸೀತಿಯಲ್ ಕಿಲ್ಲರ್) ವೈದ್ಯಕೀಯ ವಿದ್ಯಾರ್ಥಿಯ ಹುಚ್ಚಾಟಗಳನ್ನು ಹತ್ತಿಕ್ಕಲು ಇರುವ ಅವತಾರ ಪುರುಷನೇ ಅರ್ಜುನ್ (ಹಯಗ್ರೀವ)..

ಕಸದ ರಾಶಿಯ ನಡುವೆ ಹಂದಿ ತಲೆ ಇರುವ ಮೃತ ದೇಹವೊಂದು ಸಿಗುತ್ತದೆ. ಬಳಿಕ ಕುದುರೆ, ಎಮ್ಮೆ ತಲೆ ಮತ್ತೆ ಗಣೇಶನಂತೆ ಆನೆ ತಲೆ ಇರುವ ಮೃತ ದೇಹಗಳು ಪತ್ತೆಯಾಗುತ್ತವೆ..

ಪೊಲೀಸ್ ಇಲಾಖೆಗೆ ಸವಾಲಾಗುವ ಈ ಪ್ರಕರಣವನ್ನು ಇನ್ನೂ ಸಬ್ ಇನ್ಸ್ ಪೆಕ್ಟರ್ ಆಗಿರುವ ಅರ್ಜುನ್ ಭೇದಿಸಲು ಹೊರಡುವುದು ಮತ್ತು ಆ ಸವಾಲು ಕ್ಷಣ ಕ್ಷಣಕ್ಕೂ ಉದ್ವೇಗಗೊಳಿಸುವುದು ಮತ್ತು ಅದೇ ಕಾರಣಕ್ಕೆ ಕುತೂಹಲ ಹೆಚ್ಚಿಸುವುದು ಚಿತ್ರದ ಮುಖ್ಯಾಂಶ.

ಆದರೆ ಇದರ ಸೂತ್ರಧಾರ ಒಬ್ಬ ವಿಕೃತ ಮನಸ್ಥಿತಿ ಇರುವ ವೈದ್ಯಕೀಯ ವಿದ್ಯಾರ್ಥಿ ಮತ್ತು ಹ್ಯಾಕಿಂಗ್ ಪರಿಣಿತ. ಹಾಗಾಗಿ ಆತನ ಜಾಡನ್ನು ಹಿಡಿಯುವುದು ಸುಲಭವಲ್ಲ; ಹಾಗಾಗಿ ಇಲ್ಲಿ ಪೊಲೀಸ್ ವ್ಯವಸ್ಥೆ ಮತ್ತು ಅರ್ಜನ್ ನ ಬ್ರೇನ್ ಹೆಚ್ಚು ಕೆಲಸ ಮಾಡುತ್ತದೆ.

ಓದುವ ಕಾಲದಲ್ಲಿಯೇ ಹೃದಯದ ಕಸಿ ಮಾದರಿಯಲ್ಲಿ ತಲೆ ಮತ್ತು ದೇಹ ಹೊಂದಿಸುವ ಕಸಿ ಏಕೆ ಮಾಡಬಾರದು ಎಂದು ಪ್ರಶ್ನಿಸುವ ಖಳನಿಗೆ ಭಾರತೀಯ ಪುರಾಣದಲ್ಲಿ ವಿಷ್ಣುವಿನ ನರಸಿಂಹ, ವರಾಹ, ಹಯಗ್ರೀವ ಹಾಗೂ ಗಣೇಶನ ಬೇರೆ ತಲೆಯ ಅವತಾರಗಳು ಕೆಣಕುತ್ತವೆ. ಅದೇ ರೀತಿ ಪ್ರಯೋಗಗಳನ್ನು ಮಾಡಲು ಆತ ಹಿಡಿಯುವ ವಾಮ ಮಾರ್ಗದಿಂದ ಯಥೇಚ್ಛ ಕೊಲೆಗಳು ನಡೆಯುತ್ತವೆ.

ಪೊಲೀಸ್ ಅಧಿಕಾರಿ ಅರ್ಜುನ್ ಸಾಮಾನ್ಯನಲ್ಲ; ಆತನಿಗೆ ಅಶ್ವಿನ್ ಎಂಬ ಸಹಾಯಕ ಅಧಿಕಾರಿ ಬೆಂಬಲವೂ ಇರುತ್ತದೆ. ಹಾಗಾಗಿ ಪೊಲೀಸ್ ವ್ಯವಸ್ಥೆಯ ಸಮರ್ಪಕ ಬಳಕೆಯಿಂದ ಎಲ್ಲವನ್ನು ಬೇಧಿಸುತ್ತಾನೆ. ಮುಖ್ಯವಾಗಿ ಆ ವಿಕೃತ ಮನುಷ್ಯ ಅರ್ಜುನ್ ಕುಟುಂಬದ ವಿಷಯಕ್ಕೆ ಕೈ ಹಾಕಿ ಅವಸಾನವನ್ನು ಮೇಲೆಳೆದುಕೊಳ್ಳುತ್ತಾನೆ.

ಇಲ್ಲಿ ಅಚ್ಚರಿ ಕಾಡುವುದು ಕೆಳ ಹಂತದ ಅಧಿಕಾರಿ ದೊಡ್ಡದಾಗಿ ಕೆಲಸ ಮಾಡುವುದು. ಆ ಅಧಿಕಾರಿಗೆ ಇನ್ನೂ ಹೆಚ್ಚಿನ ಪವರ್ ಬೇಕಿರುತ್ತದೆ ಎಂಬುದು ಪ್ರೇಕ್ಷಕನಿಗೇ ಅನಿಸುತ್ತ ಹೋಗುತ್ತದೆ. ಆದೇಶ ನೀಡುವಷ್ಟು ಅಧಿಕಾರವಿಲ್ಲದ ಅಧಿಕಾರಿ ಕೈಗೆ ದೊಡ್ಡ ಜವಾಬ್ದಾರಿ ವಹಿಸುವ ಕಮಿಷನರ್ ಕೂಡ ಇಲ್ಲಿ ಗಮನ ಸೆಳೆಯುತ್ತಾರೆ.

ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸು ಕಥೆಯ ವೇಗಕ್ಕೆ ಬೆಂಬಲವಾಗಿ ನಿಲ್ಲುವುದು ಜ್ಯೂಡೋಸ್ಯಾಂಡಿ ಅವರ ಹಿನ್ನೆಲೆ ಸಂಗೀತ ಮತ್ತು ಗಿರೀಶ್ ಆರ್.ಗೌಡ ಛಾಯಾಗ್ರಹಣ. ಕೆ.ಎಂ.ಪ್ರಕಾಶ್ ಸಂಕಲನವೂ ವೇಗಕ್ಕೆ ಸಹಕರಿಸಿದೆ.

ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಧನ್ವೀರ್ ಗೌಡ ಲೀಲಾಜಾಲವಾಗಿ ನಟಿಸಿದ್ದಾರೆ. ‘ಐ ಯಾಮ್ ದಿ ಸೂಪರ್ ಬ್ರಹ್ಮ’ ಎಂದು ಅಬ್ಬರಿಸುವ ಸುನೀಲ್ ರಾವ್ ವರಸೆ ಆ ಪಾತ್ರಕ್ಕೆ ಅದ್ಭುತ.

ಆದರೆ ಅಷ್ಟೊಂದು ರಕ್ತಪಾತ, ಹಿಂಸೆ ನೋಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎಂಬುದು ಚಿತ್ರದ ನಕಾರಾತ್ಮಕ ಅಂಶ.

ಸಂಜನಾ ಆನಂದ್, ಅಶ್ವಿನ್ ಹಾಸನ ಹಾಗೂ ಅಶ್ವಿನಿಗೌಡ ಅವರು ತಮಗೆ ದಕ್ಕಿರುವ ವಿಶೇಷ ಅವಕಾಶಗಳಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ ರಮೇಶ್ ಭಟ್, ಸಾಧುಕೋಕಿಲ, ಶರತ್ ಲೋಹಿತಾಶ್ವ , ಶೊಭ್ ರಾಜ್, ಗಿಲ್ಲಿ ನಟ ಅವರ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ.

Social Share :

ಸೂಪರ್ ಹಿಟ್ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಜಿ.ಉಮೇಶ್

ನಿರ್ದೇಶನ : ವಿಜಯಾನಂದ್

ಆಗಸಕ್ಕೆ ತೆರೆದಿಟ್ಟ ಪಯಣ..

ಇದೊಂದು ಮಿಕ್ಕಿ ಮೌಸ್ ಮಾದರಿಯ ಕಥೆ; ಒಂದಕ್ಕೊಂದು ಸಂಬಂಧ ಮತ್ತು ಸಂಪರ್ಕವಿದ್ದರೂ ಯಾವುದೂ ಕೈಗೆ ನಿಲುಕುವುದಿಲ್ಲ.

ಒಂದು ಸುಂದರವಾದ ಕಾರು. ಅದರಲ್ಲಿ ಅಹಲ್ಯ, ಸತ್ಯ ಮತ್ತು ಭೂಪತಿಯ ಪಯಣ.. ದಾರಿಯಲ್ಲಿ ಸಿಗುವ ಮದುವೆ ಜೋಡಿ ಮತ್ತು ದಿಬ್ಬಣ..

ಅಸಾಧ್ಯ ಮಾತುಗಾರ ಭೂಪತಿ, ಕುಳಿತಲ್ಲೇ ರೀಲ್ಸ್ ಕಥೆ ಕಟ್ಟುವ ಸತ್ಯ ಹಾಗೂ ಇಬ್ಬರಿಗೂ ಚಮಕ್ ನೀಡುವ ಅಪ್ಸರ ಮೂವರನ್ನು ಹೊತ್ತ ಕಾರು ಮತ್ತು ಕಣ್ಣಿಗೆ ಹಬ್ಬ ನೀಡುವ ಪ್ರಕೃತಿಯ ವಿಹಂಗಮ ನೋಟ (ವೈಮಾನಿಕ ಚಿತ್ರಣ) ಎಲ್ಲವೂ ಸೊಗಸು.

ಆದರೆ ಕೆಲವೊಮ್ಮೆ ಯಥೇಚ್ಛ ರೀಲ್ಸ್ ನ ಮಾತುಗಳು ಕೈಯಲ್ಲಿ‌ ಮೊಬೈಲ್ ಹಿಡಿದು ನೋಡಿದ ಅನುಭವ. ಒಂದು ಕೊಲೆ ಅದನ್ನು ಸೆರೆ ಹಿಡಿದು ಬಚ್ಚಿಟ್ಟುಕೊಂಡಿರುವ ಪೆನ್ ಡ್ರೈವ್. ಅದರ ಹುಡುಕಾಟದಲ್ಲಿ ಬಿಚ್ಚಿಕೊಳ್ಳುವ ಎಲ್ಲರ ಕಥಾನಕ ಕುತೂಹಲವೇ..

ಬ್ರೇನ್ ಲೆಸ್ ಕಾಮಿಡಿ ವರಸೆಯಲ್ಲಿ ಸಾಗುವ ಪರಿಯಲ್ಲಿ ಮಿಕ್ಕಿ ಮೌಸ್ ಆಟವೇ ಪ್ರಧಾನ. ಈ ನಡುವೆ ನಿರ್ದೇಶಕ ವಿಜಯಾನಂದ್ ಹಾಗೂ ಅವರ ಸಹೋದರ ಡಾ.ವಿ.ನಾಗೇಂದ್ರ ಪ್ರಸಾದ್ ಕಾಮಿಡಿ ಡಾನ್ ಮಾದರಿಯಲ್ಲಿ ಅಬ್ಬರಿಸಿ ಹೋಗುವುದೂ ತಮಾಷೆ..

ಸತ್ಯ ಮತ್ತು ಭೂಪತಿ ಸೀರಿಯಸ್ ಬದುಕನ್ನು ಕಾಮಿಡಿ ಮಾಡಿಕೊಂಡವರು. ಅಪ್ಸರಾ ಕೂಡ ಅದೇ ನೆಲೆಯಲ್ಲಿ ಸಾಗುವುದರಿಂದ ಎಲ್ಲಾ ತಿರುವು ಮತ್ತು ಘಟನೆಗಳು ತಮಾಷೆಯಾಗಿಯೇ ಕಾಣುತ್ತವೆ.

ಕಳ್ಳ ಪೊಲೀಸ್ ಆಗಿ ಬರುವ ಗೋವಿಂದೇಗೌಡ ಮತ್ತು ಪ್ರಮೋದ್ ಶೆಟ್ಟಿ ಅವರ ಪಾತ್ರವೂ ಸೀರಿಯಸ್ ಅಲ್ಲ. ಕೊನೆಗೆ ಸಾಧು ಪ್ರವೇಶ ಕೂಡ ತಮಾಷೆಯೇ..

ಪ್ರತಿ ಘಟನೆ ಬಿಚ್ಚಿಕೊಳ್ಳುವ ರೀತಿಯಿಂದಲೇ ಕುತೂಹಲ ಕೆರಳಿಸುವ ಸಂದರ್ಭದಲ್ಲಿ ಗಿಲ್ಲಿ ನಟ ಹಾಗೂ ಗೌರವ್ ಶೆಟ್ಟಿ ಮಾತುಗಳು ಕಚಗುಳಿ ಇಡುತ್ತವೆ. ಶ್ವೇತ ಕೆಲವೊಮ್ಮೆ ಕಾಮಿಡಿ ಮತ್ತು ಕೆಲವೊಮ್ಮೆ ಸೀರಿಯಸ್.

ಸುಮ್ಮನೆ ಕುಳಿತು ನಕ್ಕು ಹಗುರಾಗಲು ಪೂರಕ ಈ ಸಿನಿಮಾ. ಎಲ್ಲಾ ಪಾತ್ರಗಳು ನಗುವಿನ ಬುಗ್ಗೆ ಹರಿಸದಿದ್ದರೂ ಒಳಗೆ ನಗುವಿನ ಲಹರಿಯನ್ನು ಹರಿಸುತ್ತವೆ.

ಸಾಹಿತಿ ಹೃದಯ ಶಿವ ವಿಶೇಷ ಪಾತ್ರದಲ್ಲಿ ಗಮನ ಸೆಳೆದರೆ, ಡ್ರ್ಯಾಗನ್ ಮಂಜು, ಸೀನು ಭಾಯ್, ನಾಗವರ್ಧನ್, ಗಿರೀಶ್ ಶಿವಣ್ಣ, ಟಿನ್ನಿಸ್ ಕೃಷ್ಣ, ಕರಿಸುಬ್ಬು, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಮಂಗಳೂರು ಮೀನನಾಥ ಅವರ ಪಾತ್ರಗಳೂ ನಗುವಿಗೆ ಪೂರಕ.

ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕೆ ಪೂರಕ.

Social Share :

ಶಿಖಂಡಿ ಎಂಬ ಮಾರಕಾಸ್ತ್ರ ಹಿಡಿದ ಸುನಾಮಿ ಗುರುಮೂರ್ತಿ..

Social Share :

* ಮಹಾ ಭಾರತದ ಪಾತ್ರವೇ ಪ್ರೇರಣೆ *

ಶಿಖಂಡಿಯನ್ನು ಅಡ್ಡ ತಂದರೆ ಆಚಾರ್ಯ ಭೀಷ್ಮ ಶಸ್ತ್ರ ಹಿಡಿಯುವುದಿಲ್ಲ; ಮಹಾ ಭಾರತದ ಅತ್ಯಂತ ಪ್ರಭಾವೀ ಸನ್ನಿವೇಶ ಇಲ್ಲಿ ಚಿತ್ರವಾಗಿದೆ..

ಅದೇ ಶಿಖಂಡಿ..!

ಈ ಹಿಂದೆ ‘ಮಾರಕಾಸ್ತ್ರ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಗುರುಮೂರ್ತಿ ವಿ (ಗುರುಮೂರ್ತಿ ಸುನಾಮಿ) ಈಗ ವಿಭಿನ್ನ ಕಥಾಹಂದರ ಹೊಂದಿರುವ ‘ಶಿಖಂಡಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಪೋಲಾ ಪ್ರವೀಣ್ ಕುಮಾರ್ ಪೋಲಾ ಮೂವೀಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದು, ಸೋಮವಾರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ನಿರ್ಮಾಪಕ ಸಂಜಯ್ ಗೌಡ ಹಾಗೂ ನಿರ್ದೇಶಕರಾದ ಜಡೇಶ್ ಕೆ ಹಂಪಿ, ನವೀನ್ ರೆಡ್ಡಿ ‘ಶಿಖಂಡಿ’ ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಮಹಾಭಾರತದಲ್ಲಿ ಶಿಖಂಡಿ ಪುನರ್ಜನ್ಮ ಪಡೆದು ತನ್ನ ಸೇಡನ್ನು ತೀರಿಸಿಕೊಳ್ಳುವುದು ಪುರಾಣದಲ್ಲಿದೆ. ಈ ಅಂಶವನ್ನೇ ಪ್ರಧಾನವಾಗಿಸಿ ಈ ಚಿತ್ರದ ಕಥೆ ಹೆಣೆಯಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಇರುವ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಿದು ಎಂಬ ವಿವರಣೆ ನೀಡಿದರು ನಿರ್ದೇಶಕ ಗುರುಮೂರ್ತಿ ವಿ.

ಕಥೆ ಕೇಳಿದ ತಕ್ಷಣ ಮೆಚ್ಚಿಕೊಂಡ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಚಿತ್ರದ ನಿರ್ಮಾಣಕ್ಕೆ ಮುಂದಾದರು. ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಚಿತ್ರೀಕರಣ ಮುಗಿದಿದೆ. ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಮೇ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು.

ಬಳ್ಳಾರಿ ಮೂಲದ ನನಗೆ ಚಿತ್ರ ಮಾಡಲು ಎರಡು ಕಾರಣ. ಒಂದು ಕಥೆ . ಮತ್ತೊಂದು ವಿಶೇಷ ಚೇತನರಾಗಿದ್ದರೂ ನಿರ್ದೇಶಕ ಗುರುಮೂರ್ತಿ ಅವರಿಗೆ ಸಿನಿಮಾ ಮೇಲಿರುವ ಪ್ರೀತಿ. ಹಾಗಾಗಿ ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ಬರುತ್ತಿದೆ ಎಂದರು ನಿರ್ಮಾಪಕ ಪೋಲಾ ಪ್ರವೀಣ್.

ಮೈಸೂರು ಮೂಲದ ಯುವರಾಜ್ ಗೌಡ ಮುಖ್ಯ ಪಾತ್ರದಲ್ಲಿದ್ದು, ಅವರ ಎದುರು ಖ್ಯಾತಿ ನಟಿಸಿದ್ದಾರೆ. ನಟಿಯರಾದ ನಿಖಿತಾ ಸ್ವಾಮಿ, ನೀತು, ಚಾಂದಿನಿ ತಮ್ಮ ಪಾತ್ರಗಳ ವಿವರ ನೀಡಿದರು.

ಹಿರಿಯ ಕಲಾವಿದರಾದ ರಘು ರಾಮನಕೊಪ್ಪ, ದೀಪಕ್ ಶೆಟ್ಟಿ, ವಿಜಯ್ ಚಂಡೂರ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಛಾಯಾಗ್ರಾಹಕ ಸ್ವಾಮಿ, ಸಂಗೀತ ನಿರ್ದೇಶಕ ಮಂಜುಕವಿ, ಹಾಡು ಬರೆದಿರುವ ಕಿನ್ನಾಳ್ ರಾಜ್, ಹಿನ್ನೆಲೆ ಸಂಗೀತ ನೀಡಿರುವ ಪ್ರದ್ಯೋತನ್, ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಹಾಗೂ ಚಿತ್ರಕಥೆ ಬರೆದಿರುವ ದಯಾಶಂಕರ್ ಹಾಜರಿದ್ದರು.

Social Share :

ಪುರಾಣ ಪುಣ್ಯಕಥೆ ಹಯಗ್ರೀವ ಇದೇ 27 ರಂದು ಬಿಡುಗಡೆ..

Social Share :

ಧನ್ವೀರ್ ಮುಖ್ಯ ಪಾತ್ರದಲ್ಲಿರುವ
ಪುರಾಣದ ಕಥೆಯ ಪ್ರೇರಣೆ ಹೊಂದಿರುವ ‘ಹಯಗ್ರೀವ’ ಇದೇ ವಾರ ಬಿಡುಗಡೆ ಕಾಣುತ್ತಿದೆ.

ಕೆ.ವಿ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ, ರಘುಕುಮಾರ್ ಓ.ಆರ್ ನಿರ್ದೇಶನದ ಚಿತ್ರವೀಗ ಬಿಡುಗಡೆಯ ಹಾದಿಯಲ್ಲಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಚಿತ್ರತಂಡ ಮಾಧ್ಯಮಗಳ ಮುಂದೆ ಬಂದಿತ್ತು..

ರಘು ಕುಮಾರ್ ನಿರ್ದೇಶನ ಮಾಡಿದ್ದ ಕಿರುಚಿತ್ರ ಇಷ್ಟವಾಗಿ ಅವರಿಂದ ಈ ಚಿತ್ರದ ನಿರ್ದೇಶನ ಮಾಡಿಸಲಾಗಿದೆ. ಇದು ನಮ್ಮ ಸಂಸ್ಥೆಯ ಮೂರನೇ ಚಿತ್ರ ಎಂದು ವಿವರ ನೀಡಿದರು ನಿರ್ಮಾಪಕ ಸಮೃದ್ಧಿ ಮಂಜುನಾಥ್.

ದರ್ಶನ್ ಅವರ ಮೂಲಕ ಧನ್ವೀರ್ ಅವರ ಪರಿಚಯವಾಯಿತು. ಧನ್ವೀರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅತ್ಯುತ್ತಮ. ಕನ್ನಡದಲ್ಲಿ ತೀರ ಅಪರೂಪದ ಕಥೆ ಇದು. ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರವಿದು ಎಂದರು.

ಭಾರತೀಯ ಪುರಾಣವನ್ನು ಆಧರಿಸಿ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಧನ್ವೀರ್ ಜೋಡಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿರುವುದಾಗಿ ನಿರ್ದೇಶಕ ರಘು ಕುಮಾರ್ ನೀಡಿದ ವಿವರ.

ಸಾಧುಕೋಕಿಲ, ಶರತ್ ಲೋಹಿತಾಶ್ವ , ಶೊಭ್ ರಾಜ್, ಅಶ್ವಿನಿ ಗೌಡ, ಗಿಲ್ಲಿ ನಟ ಮುಂತಾದವರು ತಾರಾಬಳಗವಿದೆ ಎಂಬ ವಿವರ ಬಂತು.

ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗಿರೀಶ್ ಆರ್ ಗೌಡ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಶೈಲೇಶ್ ಕುಮಾರ್ ಹಾಗೂ ಚೇತನ್ ಸಿದ್ ಸಂಭಾಷಣೆ ಬರೆದಿದ್ದಾರೆ. ‌ ‌ ‌ ‌‌‌‌ ‌

Social Share :

ಸರಳ ಸುಬ್ಬರಾವ್ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಲೋಹಿತ್ ನಂಜುಂಡಯ್ಯ

ನಿರ್ದೇಶನ : ಮಂಜು ಸ್ವರಾಜ್

ಭಾವ ಬೆಡಗಿನ ಸಂಸಾರ
ಕಾಲಾತೀತ ಸಂಸ್ಕಾರ..

ಸಂಸಾರವೆಂದರೆ ಅದೊಂದು ಭಾವ ಬೆಡಗು..
ಜೀವನದ ಉದ್ದಕ್ಕೂ ಒಲುಮೆ ಮತ್ತು ನಲುಮೆ ಕಡಿಮೆಯಾಗದಂತೆ ಪ್ರೇಮಿಸುವುದು ಎಂದರೆ ದೂರದ ಬೆಟ್ಟದ ಹಸಿರು; ಅದು ನಿತ್ಯ ಹರಿದ್ವರ್ಣದ ಕಾಡಿನಂತೆ..

ಸುಬ್ಬರಾವ್ ಮತ್ತು ಸರಳ ಪ್ರೇಮವೆಂದರೆ ಅದೊಂದು ಸೊಗಸು..
ಕ್ಷಣ ಕ್ಷಣವೂ ಕಾಣುವ ಬೆಡಗು.

ಅಕ್ಷರಶಃ ತಿಂಡಿ ಪೋತಿಯಾದ ಸರಳಳ ಮುಗ್ಧತೆ ನವಿರು ಭಾವವನ್ನು ಪೋಷಿಸುತ್ತದೆ. ಸುಬ್ಬರಾವ್ ಅವಳ ಆರಾಧಕ. ಮುಗ್ಧ ನಗುವಿನ ಸಿಂಚನದಲ್ಲಿ ಕರಗಿ ಹೋಗುವ ಗಂಡಸು..

ಪತ್ನಿಯ ಮೇಲಿನ ಅದಮ್ಯ ಪ್ರೇಮದಿಂದ ಸುಬ್ಬರಾವ್ ಅದದೇ ವರಸೆಯಲ್ಲಿ ತೇಲುತ್ತಾನೆ. ತಿಂಡಿ ಅಥವಾ ಭೋಜನ ಪ್ರಿಯ ಸರಳ ಮಾತ್ರ ತಿಂಡಿ ಮೇಲಿನ ಆಸಕ್ತಿಯನ್ನು ಸ್ವಲ್ಪವೂ ಸಡಿಲಗೊಳಿಸುವುದಿಲ್ಲ..

ತ್ರಿವೇಣಿ ಅವರ ಕಾದಂಬರಿಯಿಂದ ಸ್ಫೂರ್ತಿ ಪಡೆದ 70 ರ ದಶಕದ ಕಥೆಯ ಚೌಕಟ್ಟಿನಲ್ಲಿ ಎದ್ದು ಕಾಣುವುದು ಕೌಟುಂಬಿಕ ಪ್ರೇಮ..!

ಕಾಲೇಜಿನ ಆಂಗ್ಲ ಉಪನ್ಯಾಸಕ ಸುಬ್ಬರಾವ್ ಗೆ ಸಹೋದ್ಯೋಗಿ ಗೆಳೆಯರ ಸಾಂಗತ್ಯವೂ ಅದಮ್ಯ ಪ್ರೇಮಕ್ಕೆ ನೆರವಾಗಿ ಅಲ್ಲಲ್ಲಿ ನವಿರು ಹಾಸ್ಯವೂ ತುಂಬಿ ತುಳುಕುತ್ತದೆ.

ಆದರೆ..
ಪದೇ ಪದೇ ಅದೇ ಪುನರಾವರ್ತನೆಯಾದರೆ ಅದು ಪ್ರೇಮದ ಚುಯಿಂಗ್ ಗಮ್..
ಇಲ್ಲಿಯೂ ರುಚಿ ತಪ್ಪುತ್ತದೆ..

ಪ್ರತಿ ಕ್ಷಣವೂ ಎಳೆದಾಡುವ ತಿಂಡಿ ಪ್ರೇಮವೊಂದು ರೆಟ್ರೋ ಮಾದರಿ. ಮೊದ ಮೊದಲಿಗೆ ಮನ ಸೋಲುವ ಪ್ರೇಕ್ಷಕನಿಗೆ ಬರ ಬರುತ್ತಾ ಅದು ಕಬ್ಬಿಣದ ಕಡಲೆ ಅಥವಾ ಬಿಸಿ ತುಪ್ಪ. ಏಕೆಂದರೆ ವೇಗ ಬಯಸುವ ಕಾಲಮಾನದಲ್ಲಿ ಎಂದಿಗೂ ಒಗ್ಗದ ನಿಧಾನಗತಿಯ ಸರಳ ಪ್ರೇಮ..!

ಪ್ರೇಮ-ಮದುವೆ ಅಥವಾ ಮದುವೆ-ಪ್ರೇಮ. ಈ ಎರಡನೇಯದು ಸಾರ್ಥಕತೆ ಪಡೆಯುವುದು ಮೂರನೇಯದರ ಉಗಮದಿಂದ. ಅದು ಮಗುವಾದರೆ ಆಹ್ಲಾದ.. ಅಥವಾ ಪ್ರೇಮ ಹಳಿ ತಪ್ಪಿದರೆ ವಿವಾದ..

ಸಿನಿಮಾಗಳು ಸಾಗುವುದು ಈ ಎರಡು ಬಿಕ್ಕಟ್ಟುಗಳ ನಡುವೆ. ಇಲ್ಲಿ ಅಂತೂ ಆಕೆ ಗರ್ಭಿಣಿ ಆಗುತ್ತಾಳೆ. ಅಲ್ಲಿಯೂ ವಿನಾ ಕಾರಣ ಎಳೆತ ಪ್ರೇಕ್ಷಕ ವಿಚಲಿತ..!

ಅಜಯ್ ರಾವ್ ಮತ್ತು ಮಿಶಾ ನಾರಂಗ್ ಜೋಡಿ ನವಿರು ಪ್ರೇಮದ ವಾರಸುದಾರರಾಗಿ ಮೆರೆದಿದ್ದರೆ, ರಂಗಾಯಣ ರಘು, ವೀಣಾ ಸುಂದರ್ ಮತ್ತೊಂದು ಬಗೆಯ ಪ್ರೇಮದ ಸೊಗಸುಗಾರಿಕೆಯನ್ನು ಮೊಗೆದು ಕೊಡುತ್ತಾರೆ.

ರಾಮಕೃಷ್ಣ, ರಘು ರಾಮನಕೊಪ್ಪ, ವಿಜಯ್ ಚೆಂಡೂರ್ ಮೊದಲಾದವರು ರೆಟ್ರೋ ಮಾದರಿಗೆ ಹೇಳಿ ಮಾಡಿಸಿದ ಪಾತ್ರಗಳಾಗಿದ್ದಾರೆ.

ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಪೂರಕ.

Social Share :

ಆಲ್ಫಾ ಚಿತ್ರವಿಮರ್ಶೆ

Social Share :

ರೇಟಿಂಗ್ : 3.5/5

ನಿರ್ಮಾಣ : ಆನಂದ್ ಕುಮಾರ್

ನಿರ್ದೇಶನ : ವಿಜಯ್

ಹಣ ಮಾಡುವ ಮಾದಕ
ವ್ಯಸನದ ಸುತ್ತ..

ಸಾಮಾಜಿಕವಾಗಿ ಡ್ರಗ್ ಮಾಫಿಯಾ ವಿಶಾಲವಾದ ನೆಲೆಯನ್ನು ಕಂಡುಕೊಂಡಿದೆ. ಅದರ ವಿಸ್ತಾರ ಕಬಂಧ ಬಾಹು ಯುವ ಸಮೂಹದ ನೆಮ್ಮದಿಯನ್ನು ಕಬಳಿಸುತ್ತಿದೆ.

ಕೋಟಿ ಕೋಟಿ ವ್ಯವಹಾರದ ಡ್ರಗ್ ಮಾಫಿಯಾ ಈ ಬಗೆಯಲ್ಲಿ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಪೊಲೀಸ್ ವ್ಯವಸ್ಥೆ ನೆರವಾಗಿದೆ ಎಂಬ ಪ್ರತಿಪಾದನೆ ಬಹಳ ಹಿಂದಿನಿಂದಲೂ ಇದೆ.

ಇದೇ ಡ್ರಗ್ ಮಾಫಿಯಾ ಮತ್ತು ಅದರ ಡಾನ್ ಗಳ ಸುತ್ತ ನಡೆಯುವ ಕದನದಲ್ಲಿ ಪೊಲೀಸ್ (ಇನ್ಸ್ ಪೆಕ್ಟರ್) ಕುಟುಂಬವೊಂದು ಅಮಾಯಕತ್ವ ಪ್ರದರ್ಶಿಸಲು ಹೋಗಿ ಒಳ ಸುಳಿಗೆ ಸಿಲುಕುತ್ತದೆ.

ನಿಷ್ಠಾವಂತ ಪೊಲೀಸ್ ಅಧಿಕಾರಿ ಎಂಬ ಬಿರುದು ಪಡೆದಿರುವ ಶಕ್ತಿ ಪ್ರಸಾದ್ (ಅಚ್ಯುತ್ ಕುಮಾರ್) ಮಗ ಅರ್ಜುನ್ ಒಂದು ಚಿಕ್ಕ ಪ್ರೇಮದ ಹುಡುಕಾಟದಲ್ಲಿ ಡ್ರಗ್ ಮಾಫಿಯಾ ಭೇದಿಸಲು ಯತ್ನಿಸುತ್ತಾನೆ. ಆದರೆ ಅಗಾಧ ಶಕ್ತಿ ಹೊಂದಿರುವ ಪಡೆ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು ಪಡೆಯಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ.

ಡ್ರಗ್ ಮಾಫಿಯಾದ ಖಳರು ಮತ್ತು ಪೊಲೀಸರ ನಡುವೆ ನಡೆಯುವ ಆಟದಲ್ಲಿ ಅರ್ಜುನ್ ಕೂಡ ದಾಳವಾಗುತ್ತಾನೆ. ಕೊನೆಗೆ ಎಲ್ಲವನ್ನು ಹಿಮ್ಮೆಟ್ಟಿಸಿ ವಿಜಯಿಯಾಗುತ್ತಾನೆ.

ಈ ದಾರಿಯಲ್ಲಿ ಪೊಲೀಸ್ ವ್ಯವಸ್ಥೆಯ ಲೋಪವನ್ನು ವಿಚಿತ್ರ ಕಲ್ಪನೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕರು. ಆದರೆ ಪೊಲೀಸ್ ಶಿಷ್ಟಾಚಾರದ ನೈಜ ಸಂಗತಿಗಳು ಮಾಯವಾಗಿವೆ.

ಮೊದಲರ್ಧ ಪ್ರೀತಿ ಪ್ರೇಮ ಹೊಡೆದಾಟ ಹೀಗೆ ಅತ್ಯಂತ ಲವಲವಿಕೆಯಿಂದ ಸಾಗುವ ಸಿನಿಮಾ ಉತ್ತರಾರ್ಧದಲ್ಲಿ ಹೊಡೆದಾಟ ಮತ್ತು ರಕ್ತಪಾತದ ತಾಣವಾಗಿ ಪರಿವರ್ತಿತವಾಗಿ ದಾರಿ ತಪ್ಪುತ್ತದೆ. ಹಾಗಾಗಿ ಕ್ರೌರ್ಯದ ವೈಪರೀತ್ಯದಲ್ಲಿ ಗೊಂದಲ ಗೋಜಲು ಹೆಚ್ಚಾಗಿದೆ.

ಮುಖ್ಯ ಪಾತ್ರದಲ್ಲಿರುವ ಹೇಮಂತ್ ಕುಮಾರ್ ಮುಖದ ಭಾವಗಳನ್ನು ಸಡಿಲಗೊಳಿಸುವುದಿಲ್ಲ; ಆದರೆ ಅತ್ಯಂತ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಸಿಕ್ಸ್ ಪ್ಯಾಕ್ ಮಾಡಿಕೊಂಡು ಹೊಡೆದಾಟದಲ್ಲಿ ಅಬ್ಬರಿಸಿರುವ ರೀತಿಯಲ್ಲಿ ಕನ್ನಡಕ್ಕೆ ಒಬ್ಬ ಆಕ್ಷನ್ ಹೀರೋ ಸಿಕ್ಕಿದಂತಾಗಿದೆ.

ನಟಿಯರಾದ ಗೋಪಿಕಾ ಸುರೇಶ್, ಅಯೆನಾ ಸಿಕ್ಕ ಅವಕಾಶವನ್ನು ಸದ್ದುಪಯೋಗ ಪಡಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಎಂದಿನ ಸಹಜ ನಟನೆಯಲ್ಲಿ ಮಿಂದೆದ್ದಿದ್ದರೆ, ರಾಘು ಶಿವಮೊಗ್ಗ, ಬಿ.ಎಂ.ಗಿರಿರಾಜ್, ಹೀರೇಮಠ, ಅಂಕಿತಾ ಜಯರಾಮ್, ಮಾನಸಿ ಸುಧೀರ್ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಕಾರ್ತಿಕ್ ಛಾಯಾಗ್ರಹಣ ಹಾಗೂ ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕೆ ಪೂರಕ.

Social Share :

ಚಿತ್ರಮಂದಿರಗಳತ್ತ ಮೆಜೆಸ್ಟಿಕ್ 2 ಮುಂದಿನ ತಿಂಗಳು ತೆರೆಗೆ..

Social Share :

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬದುಕಿಗೆ ಕಾರಣವಾದ ಮೆಜೆಸ್ಟಿಕ್ ಚಿತ್ರವು 25 ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದ ಚಿತ್ರ.

ಇದೀಗ ಅದೇ ಹೆಸರಿನ ಮತ್ತೊಂದು ಚಿತ್ರ ನಿರ್ಮಾಣವಾಗಿದೆ. ಈ ಚಿತ್ರದಲ್ಲೂ ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ಏನೇನೆಲ್ಲ ವ್ಯವಹಾರಗಳು, ದಂಧೆಗಳು ನಡೆಯುತ್ತವೆ ಎಂಬುದನ್ನು ನೈಜವಾಗಿ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಲಾಗಿದೆ.

ಅಮ್ಮಾ ಎಂಟರ್‌ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಬಿಗ್ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರದಲ್ಲಿ ಹಿರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಹಿರಿಯ ನಟಿ ಶೃತಿ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೆ ಮತ್ತೊಬ್ಬ ಹಿರಿಯ ನಟಿ ಮಾಲಾಶ್ರೀ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭರತ್ ಕುಮಾರ್ ಜೋಡಿಯಾಗಿ ಸಂಹಿತಾ ವಿನ್ಯಾ ಕಾಣಿಸಿಕೊಂಡಿದ್ದಾರೆ, ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ಮತ್ತು ಈಗಲೂ ನಡೆಯುವ ರೌಡಿಸಂ ಬಗ್ಗೆ ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ನಿರ್ದೇಶರು ಹೇಳಿದ್ದಾರೆ.

ಚಿತ್ರದ ಟ್ರೈಲರ್‌ನ್ನು ನಿರ್ಮಾಪಕರ ಪತ್ನಿ ನಿರ್ಮಲಮ್ಮ ಈಚೆಗೆ ಬಿಡುಗಡೆ ಮಾಡಿದರು. ಮಾರ್ಚ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಹೆಚ್.ಆನಂದಪ್ಪ ಸಿದ್ದತೆ ಮಾಡಿಕೊಂಡಿದ್ದಾರೆ.

ವೀನಸ್ ಮೂರ್ತಿ ಛಾಯಾಗ್ರಹಣ, ವಿನು ಮನಸು ಸಂಗೀತ, ಚಿನ್ನಯ್ಯ ಸಾಹಸ, ವಿಜಯಕುಮಾರ್ ಸಹ ನಿರ್ದೇಶನ ಚಿತ್ರಕ್ಕಿದೆ.

Social Share :

ಸಬ್ಸಿಡಿ ನಿಲ್ಲುವುದು ಬೇಡ ರಾಜೇಂದ್ರಸಿಂಗ್ ಬಾಬು ಮನವಿ

Social Share :

* ಸಬ್ಸಿಡಿ ಭಾಗ್ಯ ಕೊಡಿ:
ಸರ್ಕಾರಕ್ಕೆ ಹಂಸಲೇಖ ಮನವಿ *

* ವೀರ ಕಂಬಳ ಟ್ರೈಲರ್, ಹಾಡು ಬಿಡುಗಡೆ *

ಗುಣಮಟ್ಟದ ಚಿತ್ರಗಳಿಗೆ ಸರ್ಕಾರ ಸಹಾಯಧನ ನೀಡುವ ಪರಂಪರೆಯಿಂದ ನಿರ್ಮಾಪಕ ಕೊಂಚ ಉಸಿರಾಡುತ್ತಿದ್ದಾನೆ. ದಯವಿಟ್ಟು ಅದನ್ನು ನಿಲ್ಲಿಸಬೇಡಿ..

ಹೀಗೆಂದು ಮನವಿ ಮಾಡಿದವರು ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು..!

‘2026 ನೇ ಸಾಲಿನಿಂದ ಕನ್ನಡ ಚಿತ್ರಗಳಿಗೆ ಸರ್ಕಾರ ನೀಡುತ್ತಿರುವ ಸಹಾಯ ಧನಕ್ಕೆ ಕತ್ತರಿ‌ ಬೀಳಲಿದೆ..’

ಹೀಗೊಂದು ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಸುದ್ದಿ ಬಂದಿದೆ. ‘ಸಬ್ಸಿಡಿ ಕನ್ನಡ ಚಿತ್ರರಂಗದ ಉಸಿರು; ದಯವಿಟ್ಟು ಅದನ್ನು ನಿಲ್ಲಿಸುವುದು ಬೇಡ ಎಂದು ಮನವಿ ಮಾಡಿದರು.

ತಮ್ಮ ನಿರ್ದೇಶನದ ‘ವೀರ ಕಂಬಳ’ ಚಿತ್ರದ ಹಾಡುಗಳ ಬಿಡುಗಡೆಯಲ್ಲಿ ರಾಜೇಂದ್ರ ಸಿಂಗ್ ಬಾಬು ಈ ಮನವಿ ಮಾಡಿದರು.

ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ನಾದಬ್ರಹ್ಮ ಹಂಸಲೇಖ ಅವರು, ಇದು ಭಾಗ್ಯಗಳನ್ನು ನೀಡುತ್ತಿರುವ ಸರ್ಕಾರ. ದಯವಿಟ್ಟು ಸಬ್ಸಿಡಿ ಭಾಗ್ಯ ಕೊಡಿ ; ಅದನ್ನು ನಿಲ್ಲಿಸಬೇಡಿ ಎಂದರು.

ತುಳುನಾಡಿನ ಜನ ಜೀವನದೊಂದಿಗೆ ಹೊಸೆದುಕೊಂಡಿರುವ ಕಂಬಳ ಎಂಬುದು ಒಂದು ಧೀಮಂತ ಪರಂಪರೆ. ಏಕೆಂದರೆ ಅದೊಂದು ಅದ್ವಿತೀಯ ಸಾಹಸ. ಅಂತಹ ಕ್ರೀಡೆಯ ಮೇಲೆ ಬೆಳಕು ಚೆಲ್ಲುವ ‘ವೀರ ಕಂಬಳ’ ಸಾಕಷ್ಟು ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಚಿತ್ರವಾಗಿದೆ ಎಂಬ ವಿವರ ನೀಡಿದರು ರಾಜೇಂದ್ರ ಸಿಂಗ್ ಬಾಬು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಂಬಳದ ಸುತ್ತಾ ಘಟಿಸುವ ರೋಚಕ ಕಥನವಿರುವ ವೀರ ಕಂಬಳದ ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆಗೊಳಿಸಿದರು.

ಇದೇ ವೇಳೆ ತುಳು ಆವೃತ್ತಿಯಾದ ಬಿರ್ದ್‌ದ ಕಂಬುಳದ ಟ್ರೈಲರ್ ಕೂಡಾ ಅನಾವರಣಗೊಂಡಿತು.

ಕಲೆ ಎಂಬುದು ಮುಪ್ಪಿಲ್ಲದ, ಸುಕ್ಕಿಲ್ಲದ ಕನ್ಯೆಯಿದ್ದಂತೆ. ಅದು ಮನುಷ್ಯನನ್ನು ಸದಾ ಜೀವಂತಿಕೆಯಿಂದ ಉಳಿಸುತ್ತದೆ ಎಂದರು ಹಂಸಲೇಖ.

ವೀರತ್ವದ ಸಂಕೇತದಂತಿರುವ ಕಂಬಳಕ್ಕೆ ಕಲೆಯೆಂಬ ಕನ್ಯೆ ಕೊಟ್ಟ ತಾಂಬೂಲವೇ `ವೀರ ಕಂಬಳ’.
ತುಳುನಾಡಿನ ನೆಲದ ಘಮಲು ಹೊಂದಿರುವ ಕಂಬಳವನ್ನು ದೃಶ್ಯ ಮಾಧ್ಯಮಕ್ಕೆ ಒಗ್ಗಿಸುವ ಸಾಹಸ ಮಾಡಿರುವ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಇಡೀ ತಂಡಕ್ಕೆ ಶುಭವಾಗಲಿ ಎಂದರು.

ಚಿತ್ರದಲ್ಲಿ ಆದಿತ್ಯ, ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಭಾಷೆಯಲ್ಲಿಯೂ ಬಿಡುಗಡೆಗೊಳ್ಳಲಿರುವ ಈ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ.

ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನವಿದೆ. ಆರ್.ಗಿರಿ ಛಾಯಾಗ್ರಹಣ, ಶ್ರೀನಿವಾಸ್ ಎಸ್ ಬಾಬು ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಕಲಾ ನಿರ್ದೇಶನ, ಕಾಂತ ಪ್ರಸಾದನ ಹಾಗೂ ಭಾಷಾ ಅವರ ವಸ್ತ್ರವಿನ್ಯಾಸವಿರುವ ವೀರ ಕಂಬಳ ಫೆಬ್ರವರಿ 27ರಂದು ತೆರೆ ಕಾಣಲಿದೆ ಎಂಬ ವಿವರ ಬಂದವು.

ನಿರ್ಮಾಪಕರಾದ ಅರುಣ್ ರೈ, ವಿನಿತಾ ವಿಜಯ್ ಕುಮಾರ್ ರೆಡ್ಡಿ, ಸಾಹಿತಿ ವಿಜಯಕುಮಾರ್ ಕೊಡಿಯಾಲ್ ಬೈಲ್, ನಟ ಆದಿತ್ಯ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಹಿರಿಯ ನಟಿ ಉಷಾ ಭಂಡಾರಿ, ನಟಿ ದಿವ್ಯ ವಿಸ್ಮೀತಾ ಮೊದಲಾದವರು ಹಾಜರಿದ್ದರು.

Social Share :

ಸೀತಾ ಪಯಣ ಚಿತ್ರವಿಮರ್ಶೆ

Social Share :

ರೇಟಿಂಗ್ : 4/5

ನಿರ್ಮಾಣ ಮತ್ತು ನಿರ್ದೇಶನ :
ಅರ್ಜುನ್ ಸರ್ಜಾ

ಭಾವುಕ ಪಯಣ
ಪ್ರೇಮದ ಕುಲುಮೆ

ಕುಟುಂಬ ಪ್ರೀತಿ ಎಂಬುದು ಕಾಲಾನುಕಾಲಕ್ಕೆ ಬದಲಾಗುತ್ತದೆ. ಸ್ವಾರ್ಥದ ನೆಲೆಯಲ್ಲಿ ಕೌಟುಂಬಿಕ ಮೌಲ್ಯ ನಶಿಸುತ್ತ ಹೋಗುತ್ತದೆ..

ಕುಟುಂಬದ ಪ್ರೀತಿ ಮತ್ತು ಕೌಟುಂಬಿಕ ಮೌಲ್ಯದ ನೆಲೆಯನ್ನು ಅದೇ ಪ್ರೇಮದ ಜಾಡಿನಲ್ಲಿ ಹುಡುಕಾಡಿರುವ ಪ್ರಯತ್ನವೇ ಸೀತಾ ಪಯಣ..

ಅಪ್ಪನ ಪ್ರೀತಿಯಲ್ಲಿ ಮಿಂದೆದ್ದು ಭಯ ಮಿಶ್ರಿತ ಬದುಕಿನಲ್ಲಿಯೂ ಸಾಹಸಿ ಯಾಗಲು ಹೋಗುವ ಸೀತಾ, ಅದಮ್ಯ ಚೈತನ್ಯ ಮತ್ತು ಪ್ರೇಮ ಸಹಿತ ಭಾವನೆಯಲ್ಲಿ ಮಿಂದೇಳುವವಳು..

ಆಕೆಯ ಬದುಕಿಗೆ ಪಯಣಿಗನಾಗಿ ಬರುವ ಅಭಿಷೇಕ್ ಆತನ ಕುಟುಂಬ ಪ್ರೀತಿಯ ನೆಲೆಯಲ್ಲಿ ಕಾಣ ಸಿಗುವ ಅಕ್ಷಯ ಪಾತ್ರೆ. ಆದರೆ ಅಪ್ಪನ ಮೇಲಿನ ಅತಿಯಾದ ಪ್ರೀತಿ ಆಕೆಗೆ ಗಂಟಾಗುತ್ತದೆ..

ಆ ಗಂಟು ಕ್ಷಣ ಕ್ಷಣವೂ ಸಡಿಲವಾಗಲು ಅಥವಾ ಇನ್ನಷ್ಟು ಗಟ್ಟಿಯಾಗುವ ದಾರಿಯಲ್ಲಿ ಘಟನಾವಳಿಗಳು ನಡೆಯುತ್ತಾ ಹೋಗುತ್ತವೆ..

ಅದೊಂದು ಭಾವುಕ ಪಯಣ..!

ದಾರಿಯ ಉದ್ದಕ್ಕೂ ಪ್ರೀತಿ ಪಾತ್ರರು ಸಿಗುತ್ತಾ ಹೋಗುತ್ತಾರೆ. ಕಟುಕ ಗಿರಿ, ಹೂವು ಮಾರುವ ಹುಡುಗಿ, ಬಸವನ ಹಿಡಿದು ಬರುವ ಹುಡುಗ, ಗೂಳಿ ಬಸವಣ್ಣ, ಜೊತೆಗೆ ಅಭಿ ಹೀಗೆ ಪಯಣದಲ್ಲಿ ಸೀತಾ ಬದುಕಿನಲ್ಲಿ ವರವಾಗುತ್ತಾರೆ.

ಬಹು ದೊಡ್ಡ ಅಗ್ನಿ ಅವಘಡದಿಂದ ಪಾರಾಗುವ ಸೀತಾ, ಆನಂತರದಲ್ಲಿ‌ ಆತ್ಮವಿಮರ್ಶೆಗೆ ಒಡ್ಡಿಕೊಳ್ಳುತ್ತಾ ಎಲ್ಲರಿಗೂ ಧನ್ಯವಾದ ಅರ್ಪಿಸುವ ಮತ್ತೊಂದು ಪಯಣದಲ್ಲಿ ಕುಟುಂಬದ ಮೌಲ್ಯಗಳು ವ್ಯಕ್ತವಾಗುತ್ತಾ ಹೋಗುತ್ತವೆ..

ಮದುವೆಯಾಗಲು ಅಪ್ಪನ ಮೇಲಿನ ಪ್ರೀತಿ ಅಡ್ಡಿ ಎಂಬ ಬಿಕ್ಕಟ್ಟು ಸುಮ್ಮನೆ ಎಳೆಯುತ್ತಾ ಹೋಗುತ್ತದೆ ಎಂದು ಅನಿಸುತ್ತಾ ಹೋದರೂ ಅದು ಅಚ್ಚರಿ ಅಲ್ಲ. ಆದರೆ ಭಾವುಕ ನೆಲೆಯಲ್ಲಿ ಅದು ತೆಳುವಾಗುತ್ತಾ ಕರಗಿ ಹೋಗುವುದೇ ವಿಶೇಷ.

ಕೊನೆಗೆ ಮನೆ ಅಂದ್ರೆ ಬರೀ ಗೊಡೆಗಳಲ್ಲ; ಸಂಬಂಧಗಳು ಎಂಬ ಅರಿವು ಮೂಡಿ ಸುಖಾಂತವಾಗುವಷ್ಟರಲ್ಲಿ ಪ್ರೇಕ್ಷಕನಿಗೂ ಬಿಡುಗಡೆಯ ಅನುಭವ ಸಿಗುತ್ತದೆ..

ಅರ್ಜುನ್ ಸರ್ಜಾ‌ ಮಗಳಿಗಾಗಿ, ಮಗಳಿಗೋಸ್ಕರ ಮಾಡಿರುವ ಈ ಚಿತ್ರದಲ್ಲಿ ಐಶ್ವರ್ಯ ಅರ್ಜುನ್ ಇಡೀ ಚಿತ್ರವನ್ನು ಆವರಿಸಿಕೊಂಡು ತಾನೊಬ್ಬ ಪ್ರಬುದ್ಧ ನಟಿಯಾಗಬಲ್ಲೆ ಎಂದು ಸಾಬೀತುಪಡಿಸಿದ್ದಾರೆ. ಉಪ್ಪಿ ಅಣ್ಣನ ಮಗ ನಿರಂಜನ್ ಸುಧೀಂದ್ರ ಅತ್ಯುತ್ತಮ ಅವಕಾಶ ಪಡೆದು ಮಿಂಚಿದ್ದಾರೆ.

ಪ್ರಕಾಶ್ ರಾಜ್ ವಿರುದ್ಧ ನೆಲೆಯ ಪಾತ್ರದಲ್ಲಿ ಅದ್ಭುತವಾಗಿ ಮಿಂಚಿದ್ದಾರೆ. ಸತ್ಯರಾಜ್ ಎಂದಿನ ಸಹಜ ಸೊಬಗಿನಲ್ಲಿ ಕಣ್ಣಂಚು ಒದ್ದೆಯಾಗುವಂತೆ ಕಾಣಿಸಿಕೊಂಡಿರುವುದೇ ವಿಶೇಷ.

ಕಟುಕನ ಪಾತ್ರದಲ್ಲಿ ಅರ್ಜುನ್ ಸರ್ಜಾ ಮತ್ತು ಗೂಳಿ ಬಸವಣ್ಣನ ಪಾತ್ರದಲ್ಲಿ ಧ್ರುವ ಸರ್ಜಾ ಬೆಂಬಲವೂ ಐಶ್ವರ್ಯ ಬೆಳೆಯುವ ದಿಕ್ಕಿನಲ್ಲಿ ಕಂಡು ಬರುವ ಅಚ್ಚರಿ.

ಉತ್ತರ ಕರ್ನಾಟಕದ ಜೀವನ ಮೌಲ್ಯದ ಸೊಬಗು; ದಾರಿಯಲ್ಲಿ ಕಾಣುವ ಪ್ರಕೃತಿಯ ಬೆಡಗು ಜಿ.ಬಾಲ ಮುರುಗನ್ ಕ್ಯಾಮೆರಾದಲ್ಲಿ ಅದ್ಭುತ ರೀತಿಯಲ್ಲಿ ಸೆರೆಯಾಗಿದೆ. ಭಾವುಕ ಪಯಣದಲ್ಲಿ ಹೃದಯ ತಟ್ಟುವುದು ಅನೂಪ್ ರುಬೆನ್ ಸಂಗೀತ..

Social Share :