ರೇಟಿಂಗ್ : 4/5
ನಿರ್ಮಾಣ : ವಿಜಯ್ ಕಿರಗಂದೂರು
ಹೊಂಬಾಳೆ ಫಿಲಮ್ಸ್
ನಿರ್ದೇಶನ : ಡಾ.ಸೂರಿ
ಸೂಪರ್ ಮಾಯಾ ಮನುಷ್ಯ..
ಸೂಪರ್ ಮ್ಯಾನ್ ಆಗುವುದು ಸುಲಭವಲ್ಲ; ಅದಕ್ಕೆ ಬೇಕಾಗಿರುವುದು ಅದಮ್ಯ ಸಂಕಲ್ಪ ಮತ್ತು ಧೈರ್ಯ ಎಂಬುದು ಅರಿವಾಗುವಷ್ಟರಲ್ಲಿ ಸೂಪರ್ ಮ್ಯಾನ್ ವೇಷಧಾರಿಯಾಗಿ ಕಟ್ಟಡದ ಮೇಲಿಂದ ಹಾರಿ ಗಾಯ ಮಾಡಿಕೊಂಡಿರುತ್ತಾನೆ ಬಾಲಕ ವೇದಾಂತ್.
ಅಮ್ಮನ ಆದರ್ಶದ ಮಾತುಗಳಿಗೆ ಕಿವಿಯಾಗಿ ಸೂಪರ್ ಮ್ಯಾನ್ ವರಸೆ ತೋರುವ ದಾರಿಯಲ್ಲಿ ಆತ ಹುಡುಕಿ ಕೊಳ್ಳುವುದು ಪೊಲೀಸ್ ಅಧಿಕಾರಿಯ ಹುದ್ದೆ. ಆದರೆ ಅದು ವ್ಯವಸ್ಥೆಯ ಕಟುಪಾಡುಗಳಿಗೆ ಹೊಂದಿಕೊಂಡಿರುತ್ತದೆ ಎಂಬುದು ನಂತರ ತಿಳಿಯುತ್ತದೆ.
ನಿಷ್ಠಾವಂತ ಪೊಲೀಸ್ ಅಧಿಕಾರಿ ಅತ್ಯಂತ ಕೆಟ್ಟ ವ್ಯವಸ್ಥೆ ಮತ್ತು ಅತಿ ಕ್ರೂರ ಮನುಷ್ಯರನ್ನು ಕಾನೂನಾತ್ಮಕವಾಗಿ ಮಣಿಸಲು ಸಾಧ್ಯವಾಗದಿದ್ದರೆ; ಅಂತಹವನ್ನು ಸದೆ ಬಡಿಯಲು ಬೇರೆ ಮಾರ್ಗ ಕಂಡುಕೊಳ್ಳುವುದೇ ‘ಮಾಯಾ ಮನುಷ್ಯ’ನ ಸರಿದಾರಿ.
ವೇದಾಂತ್ ಎಂಬ ಯುವಕ ಐಪಿಎಸ್ ಪಾಸಾಗಿ ಬಂದಾಗ ಆತನಿಗೆ ಅತ್ಯಂತ ಕಠಿಣ ಪ್ರದೇಶದ ಉಸ್ತುವಾರಿ ದೊರೆಯುತ್ತದೆ. ಎಸಿಪಿ ವೇದಾಂತ್ ದುಷ್ಟರನ್ನು ಹಣಿಯುವ ಮಾರ್ಗದಲ್ಲಿ ಬರೀ ಕಲ್ಲು ಮುಳ್ಳು ಕ್ರೂರಾತಿ ಕ್ರೂರ ಮನುಷ್ಯರಿಗೆ ವ್ಯವಸ್ಥೆಯ ಬೆಂಬಲ.
ಅಲ್ಲದೆ ದುಷ್ಟರ ಬೆಂಬಲಕ್ಕೆ ರಾಜಕಾರಣಿಗಳು ಆ ಮೂಲಕ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ಕೃಪಾ ಕಟಾಕ್ಷ ಬೇರೆ.. ಇಂತಹ ವೇಳೆಯಲ್ಲಿ ಎದೆ ನಡುಗಿಸುವ ಘಟನೆಗಳು ನಡೆದು ಹೋಗುತ್ತವೆ.
ದುರುಳರಿಂದ ಅತ್ಯಾಚಾರಕ್ಕೆ ಒಳಗಾಗುವ ಯುವತಿಯೊಬ್ಬಳು ಸೀಮೆ ಎಣ್ಣೆ ಸುರಿದುಕೊಂಡು ಅಮಾನುಷವಾಗಿ ಸಾಯುವ ದೃಶ್ಯ ವೇದಾಂತ್ ಹೃದಯವನ್ನು ಅಲ್ಲೋಲ ಕಲ್ಲೋಲ ಮಾಡುತ್ತದೆ.
ಆಗ ಹುಟ್ಟುತ್ತಾನೆ ಬಘೀರ..!
ಕೆಚ್ಚದೆಯ ವೇದಾಂತ್ ಬಘೀರನ ವೇಷಧಾರಿಯಾಗಿ ಅತ್ಯಾಚಾರಿಗಳ ಗುಂಡಿಗೆ ಬಗೆಯುತ್ತಾನೆ. ಕೆಟ್ಟವರ ಎದೆ ಸೀಳುತ್ತಾನೆ. ಆ ಮೂಲಕ ಪ್ರಶ್ನೆಯಾಗುವ ಈ ‘ಮಾಯಾ ಮನುಷ್ಯ’ ಯಾರು ಎಂಬುದು ಪ್ರೇಕ್ಷಕನಿಗೆ ತಿಳಿದಿರುತ್ತದೆ.
ಆದರೆ ವ್ಯವಸ್ಥೆಗೆ ತಿಳಿಯುವುದಿಲ್ಲ. ಆದ್ದರಿಂದಲೇ ಕೇಂದ್ರದಿಂದ ಬಘೀರನ ಹುಡುಕಾಟಕ್ಕೆ ಉನ್ನತ ಅಧಿಕಾರಿಯೊಬ್ಬರನ್ನು ನೇಮಿಸಲಾಗುತ್ತದೆ. ಆ ಅಧಿಕಾರಿಯ ಬುಡದಲ್ಲಿಯೂ ಬಘೀರನ ವಿರುದ್ಧ ಸೇಡು ಮನೆ ಮಾಡಿರುತ್ತದೆ ಎಂಬುದು ಬೇರೆ ಕಾರಣಕ್ಕೆ..
ಪ್ರಶಾಂತ್ ನೀಲ್ ಬರೆದಿರುವ ಕಥೆಯ ವಿಷಯಕ್ಕೆ ಬಂದರೆ ಹಳೆ ಮದ್ಯವನ್ನು ಹೊಸ ಬಾಟಲ್ ಗೆ ತುಂಬಿಕೊಟ್ಟಂತೆ..
ಆದರೆ ಏಳು ಚಾಪ್ಟರ್ ಗಳಾಗಿ ಕಥೆಯನ್ನು ವಿಂಗಡಿಸಿ ಹೆಣೆದಿರುವ ರೀತಿ ಅದ್ಭುತ. ಹಿಂದಿಯಲ್ಲಿ ಬಂದಿದ್ದ ಶೆಹಿನ್ ಷಾ, ಮಿಸ್ಟರ್ ಇಂಡಿಯಾ ಕನ್ನಡದಲ್ಲಿಯೇ ಬಂದ ಅನೇಕ ಚಿತ್ರಗಳ ಮಾದರಿಗಳನ್ನು ಇದು ನೆನಪಿಸುತ್ತದೆ.
ಮೊದಲರ್ಧ ಶ್ರೀಮುರುಳಿ ಅವರ ಪೊಲೀಸ್ ಸಮವಸ್ತ್ರದಂತೆಯೇ ಫಿಟ್ ಅಂಡ್ ಫೈನ್. ಉತ್ತರಾರ್ಧದಲ್ಲಿ ಹಿಂಸೆ ನಾಟ್ಯವಾಡುತ್ತದೆ ಜೊತೆಗೆ ಕೆಡುಕು ಸ್ಥಳಗಳನ್ನು ಬಘೀರ ಹುಡುಕಿ ಧ್ವಂಸಗೊಳಿಸುವುದು ಮತ್ತು ಆತನ ಹಿಂದೆ ತನಿಖಾ ತಂಡ ಬೀಳುವುದು ನಡೆಯುತ್ತದೆ.
ಈ ದಾರಿಯಲ್ಲಿ ಬಘೀರನ ಸಾಹಸಗಳ ವರಸೆ ಮತ್ತು ದುಷ್ಕರ್ಮಿಗಳ ದುಷ್ಟತನದ ಮಾಯಾಜಾಲದ ಹುಡುಕಾಟದಲ್ಲಿ ಅದ್ಭುತ ದೃಶ್ಯ ಸಂಯೋಜನೆಯ ಝಲಕ್ ಗಳು ಕಣ್ತುಂಬುವುದರಿಂದ ಕ್ಷಣ ಕ್ಷಣ ಕುತೂಹಲ.
ಅಂಗಾಂಗ ಮಾರಾಟದ ಜಾಲವೂ ಪತ್ತೆ. ಅದನ್ನು ಮಾಡುವ ವಂಚಕರ ವಿವರವೂ ಪತ್ತೆ. ಆದರೆ ಅದನ್ನು ನಿಭಾಯಿಸುವ ಪರಿಯೇ ಪ್ರಶ್ನೆ. ವೇದಾಂತ್ ನೇ ಬಘೀರ ಎಂದು ಅರಿವಾಗುವಷ್ಟರಲ್ಲಿ ತನಿಖಾ ಅಧಿಕಾರಿಗೆ ನೈಜತೆಯ ಸಾಕ್ಷಾತ್ಕಾರವಾಗುತ್ತದೆ. ಆಗ ಅವರಿಂದ ಸಿಗುವುದು ಅಚ್ಚರಿಯ ತಿರುವು.
ಮುಂದೆ ಬಘೀರನಿಂದಲೇ ದುಷ್ಟ ಸಂಹಾರ. ಚಿಕ್ಕ ವಯಸ್ಸಿನಲ್ಲಿ ಸೂಪರ್ ಮ್ಯಾನ್ ಆಗಲು ಹೋಗಿ ಕಾಲು ಗಾಯ ಮಾಡಿಕೊಂಡಿದ್ದ ವೇದಾಂತ್ ಗೆ ಅಮ್ಮ ಸ್ಫೂರ್ತಿ. ಅಪ್ಪ ಕೂಡ ಲಂಚಬಾಕ ಎಂದು ತಿಳಿದಾಗ ಗುಟ್ಟಾಗಿ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾನೆ.
ಇಡೀ ಚಿತ್ರ ಆವರಿಸಿ ಕೊಂಡಿರುವ ಶ್ರೀಮುರುಳಿ ಪ್ರತಿ ಹಂತದಲ್ಲಿಯೂ ಫಿಟ್ ಅಂಡ್ ಫೈನ್. ಪೊಲೀಸ್ ಹೇಗಿರಬೇಕು ಎಂಬುದರಿಂದ ಹಿಡಿದು ಕಣ್ಣಲ್ಲೇ ಬೆಂಕಿಯುಗುಳುವ ಬಘೀರನವರೆಗೆ ಪಾತ್ರ ಪೋಷಣೆ ಅದ್ಭುತ.
ಎರಡನೇಯದಾಗಿ ಇಷ್ಟವಾಗುವುದು ಪ್ರಕಾಶ್ ರೈ. ತನಿಖಾ ತಂಡದ ಅಧಿಕಾರಿ ಮತ್ತು ನಿಷ್ಠೆಗೆ ಬೆಲೆ ಕೊಡುವ ಅವರ ಎರಡು ವರಸೆಗಳು ಅನನ್ಯ.
ರುಕ್ಮಿಣಿ ವಸಂತ, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾರಾಣಿ, ಪ್ರಮೋದ್ ಶೆಟ್ಟಿ, ರಘು ರಾಮನಕೊಪ್ಪ, ಶ್ರೀಧರ್, ಅಶ್ವಿನ್ ಹಾಸನ್, ವಿಲನ್ ಗರುಡಾ ರಾಮ್ ಹೀಗೆ ಪ್ರತಿಯೊಬ್ಬರೂ ಪ್ರಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಎ.ಜೆ.ಶೆಟ್ಟಿ ಕ್ಯಾಮೆರಾ ಮತ್ತು ಅಜನೀಶ್ ಲೋಕನಾಥ್ ಸಂಗೀತ ಎರಡೂ ಚಿತ್ರವನ್ನು ಶ್ರೀಮಂತಗೊಳಿಸಿವೆ ಎಂದರೆ ತಪ್ಪಲ್ಲ..