Snehapriya.com

November 22, 2024

ವಿದ್ಯಮಾನ

ಸಿಂಗಾಪುರದಲ್ಲಿ ವಿಶ್ವ ಕನ್ನಡ ಹಬ್ಬ ಶಿವಣ್ಣ ಸೇರಿ ಗಣ್ಯರ ಶುಭ ಹಾರೈಕೆ

Social Share :

ದೂರದ ಸಿಂಗಾಪುರದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಲಾಗಿದೆ.
ಕಳೆದ ನವೆಂಬರ್ 9ರಂದು ಸಿಂಗಾಪುರದ ಪೊಂಗಲ್ ನಗರದಲ್ಲಿ
ನಡೆದ ವಿಜೃಂಭಣೆಯ ಉತ್ಸವದಲ್ಲಿ ಕನ್ನಡದ ಸಹೃದಯ ಮನಸ್ಸುಗಳು ನಲಿದಾಡಿವೆ.

ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ ಅಲ್ಲಿನ ಕನ್ನಡ ಸಂಘಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಎರಡನೇ ವಿಶ್ವಕನ್ನಡ ಹಬ್ಬ ಸಮಾರಂಭ ಅದ್ದೂರಿಯಾಗಿ ನೆರವೇರಿದೆ.

ಈ ಸಮಾರಂಭದಲ್ಲಿ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಭಾಗವಹಿಸುವ ಆಶಯವಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸಿಂಗಾಪುರ ಕನ್ನಡಿಗರಿಗೆ ಶುಭ ಹಾರೈಸಿದರು.

ಕನ್ನಡ ಭಾಷೆಯ ಸೊಗಡು, ಸಂಸ್ಕೃತಿಯ ಘಮಲನ್ನು ವಿದೇಶದಲ್ಲೂ ಪಸರಿಸಬೇಕೆಂಬ ಆಶಯದಲ್ಲಿ ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ ಸಂಸ್ಥೆ ಕಳೆದ ವರ್ಷ ದುಬೈನಲ್ಲಿ ವಿಶ್ವ ಕನ್ನಡ ಹಬ್ಬವನ್ನು ಯಶಸ್ವಿಯಾಗಿ ನಡೆಸಿತ್ತು. ಅದೇರೀತಿ ಈ ವರ್ಷ ಎರಡನೇ ವಿಶ್ವ ಕನ್ನಡ ಹಬ್ಬವನ್ನು ಸಿಂಗಾಪುರದಲ್ಲಿ ಯಶಸ್ವಿಯಾಗಿ ಮುಗಿಸಿಕೊಂಡು ಬಂದಿದೆ.

ಈಚೆಗೆ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ ಅಧ್ಯಕ್ಷ ಡಾ. ಶಿವಕುಮಾರ್‍ ನಾಗರ ನವಿಲೆ, 2ನೇ ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ್‍, ಸಾಂಸ್ಕೃತಿಕ ಅಧ್ಯಕ್ಷರಾದ ನಟಿ ರೂಪಿಕಾ,ಪ್ರತಿಭಾ ಪಟುವರ್ಧನ್, ಸೈ ರಮೇಶ್, ಕಾರ್ಯದರ್ಶಿ ರಂಜಿತಾ, ಸಿಂಚನ ದೀಕ್ಷಿತ್ ಹಾಗೂ ಇತರರು ವರ್ಣರಂಜಿತ ಹಬ್ಬದ ವಿವರಗಳನ್ನು ಮುಂದಿಟ್ಟರು.

ಕನ್ನಡ ಸಾಂಸ್ಕೃತಿಕ ನೆಲೆಯ ಕಾರ್ಯಕ್ರಮಗಳ ಜೊತೆಗೆ ಇಸ್ರೋ ವಿಜ್ಞಾನಿ ಎಸ್‍. ಕಿರಣ್ ಕುಮಾರ್ ಅವರಿಗೆ ‘2024ನೇ ಸಾಲಿನ ವಿಶ್ವಮಾನವ ಪ್ರಶಸ್ತಿ’ ಹಾಗೂ ಮೀನಾರಾಜ್ ಅವರಿಗೆ ‘ವಿಶ್ವಕನ್ನಡತಿ’ ಕಿರೀಟವನ್ನು ನೀಡಿ ಗೌರವಿಸಲಾಯಿತು.

ವಿಶೇಷವಾಗಿ ಸಿದ್ದಿ ಜನಾಂಗದ 10 ಪ್ರತಿಭೆಗಳನ್ನು ಕರೆದೊಯ್ದು ಅವರಿಗೂ ವೇದಿಕೆ ಕಲ್ಪಿಸಿದ್ದೆವು. ಇಲ್ಲಿಂದ ಒಟ್ಟು 120 ಕ್ಕೂ ಹೆಚ್ಚು ಜನ ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದೆವು ಎಂಬ ವಿವರಗಳನ್ನು ನೀಡಿದರು ಡಾ.ಶಿವಕುಮಾರ್.

ಆನಂದ ಗುರೂಜಿ, ಜಾನಪದ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅಲ್ಲದೆ ಸಿಂಗಪುರ ಕನ್ನಡ ಸಂಘದ ಅಧ್ಯಕ್ಷ ವೆಂಕಟರತ್ನಯ್ಯ ಸೇರಿದಂತೆ ಹಲವಾರು ಗಣ್ಯರು ಈ ವಿಶ್ವ ಕನ್ನಡ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿದ್ದರು‌.

ಪಸಂದಾಗವ್ನೆ ಖ್ಯಾತಿಯ ಗಾಯಕಿ ಮಂಗ್ಲಿ ಅವರ ಗಾಯನ ಗಮನ ಸೆಳೆಯಿತು. ಕಾರ್ಯಕ್ರಮದ ರಾಯಭಾರಿ ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯ ಅವರ ಅದ್ಭುತ ಡ್ಯಾನ್ಸ್ ಮುಖ್ಯ ಆಕರ್ಷಣೆಯಾಗಿತ್ತು.

ವಿದೇಶಗಳಲ್ಲಿ ಕನ್ನಡ ಭಾಷೆ, ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜತೆಗೆ ಸಾಧನೆಗೈದ ಕನ್ನಡಿಗರಿಗೆ ಗೌರವ ಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂಬ ವಿವರಗಳು ಬಂದವು.

Social Share :

ಮಾದಕ ವಸ್ತು ಜಾಲ ನಿಯಂತ್ರಣಕ್ಕೆ ಕಾರ್ಯಪಡೆ : ಭೀಮ ತಂಡದ ಖುಷಿ

Social Share :


ರಾಜ್ಯದಲ್ಲಿ ಮಾದಕ ವಸ್ತು ಪೂರೈಕೆ ಹಾಗೂ ಮಾರಾಟ ಜಾಲ ನಿಯಂತ್ರಣಕ್ಕೆ ಸರ್ಕಾರ ಕಾರ್ಯಪಡೆ ರಚಿಸಿರುವುದಕ್ಕೆ ‘ಭೀಮ’ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.

ಮಾದಕ ವ್ಯಸನ ಚಟಕ್ಕೆ ಯುವ ಸಮೂಹ ಯಾವ ರೀತಿ ಬಲಿಯಾಗುತ್ತಿದೆ ಮತ್ತು ಅದರ ಜಾಲ ಮತ್ತು ನೆಲೆಯ ಬಗ್ಗೆ ದುನಿಯಾ ವಿಜಯ್ ಅವರು ನಟಿಸಿ, ನಿರ್ದೇಶಿಸಿದ್ದ ಚಿತ್ರ ‘ಭೀಮ’ ಚಿತ್ರ ಬೆಳಕು ಚೆಲ್ಲಿತ್ತು.

ಅಲ್ಲದೆ ವಿಜಯ ಕುಮಾರ್ (ದುನಿಯಾ ವಿಜಯ್) ಅವರು ಡ್ರಗ್ಸ್ ಮಾಫಿಯಾ ಮತ್ತು ಅದರ ವಿಸ್ತಾರ ಜಾಲ ಹಾಗೂ ಜನರು ಬಳಸುವ ಔಷಧಗಳಲ್ಲಿ ಅದರ ಬಳಕೆ ಮುಂತಾದ ವಿಷಯಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಬೆಳಕು ಚೆಲ್ಲಿದ್ದರು.

ಮಾದಕ ವಸ್ತುಗಳ ಜಾಲದ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಈಗ ಕ್ರಮ ಕೈಗೊಂಡಿದೆ.

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಕ ವಸ್ತು, ಅದರ ಜಾಲ ಹಾಗೂ ನಿಯಂತ್ರಣದ ಬಗ್ಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾದಕ ವಸ್ತು ನಿಯಂತ್ರಣದ ಬಗ್ಗೆ ಚರ್ಚೆ ನಡೆದ ಪರಿಣಾಮ ಮಾದಕ ವಸ್ತು ಜಾಲ ನಿಯಂತ್ರಣಕ್ಕೆ ಕಾರ್ಯಪಡೆ ಅಸ್ತಿತ್ವಗೊಂಡಿದೆ.

ಮಾದಕ ವಸ್ತು ಜಾಲ ಮತ್ತು ಬಳಕೆಯ ನಿಯಂತ್ರಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ, ಮಧು ಬಂಗಾರಪ್ಪ ಹಾಗೂ ಎಂ.ಸಿ.ಸುಧಾಕರ್ ಕಾರ್ಯಪಡೆಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಮಾದಕ ದ್ರವ್ಯ ಹಾವಳಿ ನಿಯಂತ್ರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಖ್ಯಾಂಶಗಳು

* ಸರ್ಕಾರವು ಮಾದಕ ವಸ್ತುಗಳ ಹಾವಳಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇದರ ವಿರುದ್ಧದ ಕಾಯ್ದೆಗಳಿಗೆ ಸೂಕ್ತ ತಿದ್ದುಪಡಿ ತಂದು ಕಾನೂನು ಬಲ ಪಡಿಸುವ ಕುರಿತು ಪರಿಶೀಲಿಸುವಂತೆ ಸೂಚಿಸಲಾಗಿದೆ.

* ಮಾದಕ ವಸ್ತುಗಳ ಮಾರಾಟ, ಸರಬರಾಜು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ
ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿರುವ ಸೂಕ್ಷ್ಮ ಪೊಲೀಸ್‌ ಠಾಣಾ ವ್ಯಾಪ್ತಿಗಳನ್ನು ಗುರುತಿಸಿ, ಅಂತಹ ಕಡೆ ಮಾದಕ ವಸ್ತುಗಳ ನಿಯಂಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಆಯಾ ಠಾಣೆಯ ಇನ್ಸ್‌ಪೆಕ್ಟರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡುವ ಎಚ್ಚರಿಕೆ ನೀಡಲಾಗಿದೆ.

* ಔಷಧಿ ಮಳಿಗೆಗಳಲ್ಲಿ ಅನಧಿಕೃತವಾಗಿ ಸಿಂಥೆಟಿಕ್ ಡ್ರಗ್ಸ್, ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲು ಸೂಚಿಸಲಾಗಿದೆ.
ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದವರ ಪರವಾನಗಿಯನ್ನು ರದ್ದುಪಡಿಸಲು ಸಹ ಸೂಚಿಸಲಾಗಿದೆ. ಹಾಗೆಯೇ ಔಷಧಿ ಮಳಿಗೆಗಳ ಮೇಲೆ ನಿರಂತರ ನಿಗಾ ಇರಿಸಿ, ಆಗಿಂದಾಗ್ಗೆ ಪರಿಶೀಲನೆ ನಡೆಸುವಂತೆ ಡ್ರಗ್ಸ್‌ ಕಂಟ್ರೋಲ್‌ ಇಲಾಖೆಗೆ ಸೂಚನೆ ನೀಡಲಾಗಿದೆ.

* ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಹಾಗೂ ಜಾಗೃತಿ ಮೂಡಿಸಲು ಪೊಲೀಸ್‌ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದೂ ಸೂಚಿಸಲಾಗಿದೆ.

Social Share :

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ : ಮುಖ್ಯಮಂತ್ರಿ ಸಿದ್ದರಾಮಯ್ಯ

Social Share :

* ಸಾಮಾಜಿಕ‌ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ*

* ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ : ಮುಖ್ಯಮಂತ್ರಿ *

* ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ಅಗತ್ಯ; ಪತ್ರಿಕಾ ಮತ್ತು ಮಾಧ್ಯಮ ಸಂಘಟನೆಗಳ ಹೊಣೆಗಾರಿಕೆಯೂ ಮುಖ್ಯ ಸಿ.ಎಂ.ಸಿದ್ದರಾಮಯ್ಯ ಕರೆ *

ಸುಳ್ಳುಸುದ್ದಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಹಾಗಾಗಿ ಈ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಅದರಲ್ಲಿಯೂ ಪತ್ರಿಕಾ ಮತ್ತು ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ಬೆಂಗಳೂರು ಪ್ರೆಸ್ ಕ್ಲಬ್ , ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಾಮಾಜಿಕ‌ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.

ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಈ ಬಗ್ಗೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಅವರು ಪ್ರಧಾನ ಭಾಷಣದಲ್ಲಿ ಪತ್ರಿಕೋದ್ಯಮದ ಈ ಕ್ಷಣದ ಸ್ಥಿತಿಗತಿಯನ್ನು ವಿವರಿಸಿದರು.

Social Share :

ಕೆಯುಡಬ್ಲ್ಯುಜೆ ಹೋರಾಟದ ಫಲ ನನಸಾದ ಪತ್ರಕರ್ತರ ಬಸ್ ಪಾಸ್

Social Share :


ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಪ್ರಕಟಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್ ನಲ್ಲಿ ಈ ವಿಷಯ ಪ್ರಕಟಿಸಿದ್ದು, ಇದರಿಂದ ಪತ್ರಕರ್ತರ
ದಶಕಗಳ ಕಾಲದ ಕನಸು ನನಸಾಗಿದೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅವಿರತ ಹೋರಾಟದ ಫಲವಾಗಿ ಇದು ಸಾಧ್ಯವಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರತಿಕ್ರಿಯೆ ನೀಡಿದ್ದಾರೆ.

ಬಸ್ ಪಾಸ್ ಬೇಡಿಕೆ ಈಡೇರಿಸಲು ಸ್ಪಂದಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಲ್ಲಾ ಹಂತದಲ್ಲಿಯೂ ಸಹಕಾರ ನೀಡಿದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೂ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ವಿಶೇಷವಾಗಿ ಅಭಿನಂದಿಸಿದೆ.

ಬಜೆಟ್ ನಲ್ಲಿ ಘೋಷಣೆ ಮಾಡಿರುವ ಬಸ್ ಪಾಸ್ ಯೋಜನೆಯನ್ನು ಕ್ರಮಬದ್ದವಾಗಿ ಕೂಡಲೇ ಜಾರಿಗೆ ತರಲು ವಾರ್ತಾ ಇಲಾಖೆ ಮುಂದಾಗಬೇಕು ಎಂದು ಶಿವಾನಂದ ತಗಡೂರು ವಿನಂತಿ ಮಾಡಿದ್ದಾರೆ.

Social Share :

ಸೋನಿ ಮಾಸ್ಟರ್ ಶೆಫ್ ಸ್ಪರ್ಧೆಗೆ ಬೆಂಗಳೂರಿನ ಉದ್ಯಮಿ ಹರೀಶ್‌

Social Share :

ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ʻಇಟ್ಸಿ ಬಿಟ್ಸಿʼ ಎಂಬ ಕರಕುಶಲ ವಸ್ತುಗಳ ಮಳಿಗೆ ವ್ಯಾಪಾರ ನಡೆಸುವ ಉದ್ಯಮಿ ಹರೀಶ್ ಕ್ಲೋಸ್ ಪೇಟ್ ಈಗ ‘ಅತ್ಯುತ್ತಮ ಬಾಣಸಿಗ’ ಆಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಿಸಿಕೊಂಡಿದ್ದಾರೆ.

ಸೋನಿ ವಾಹಿನಿಯ ಮಾಸ್ಟರ್ ಶೆಫ್ ಇಂಡಿಯಾ ಅಡುಗೆ ಸ್ಪರ್ಧೆಯ ಅಗ್ರಗಣ್ಯ 12 ಸ್ಪರ್ಧಿಗಳ ಪೈಕಿ ಒಬ್ಬರಾಗಿ ಹರೀಶ್ ಆಯ್ಕೆಯಾಗುವ ಮೂಲಕ ಉತ್ತಮ ಬಾಣಸಿಗ ಆಗಿ ಹೊಮ್ಮಿದ್ದಾರೆ.

ಬಿಡುವಿದ್ದಾಗ ಅಡುಗೆ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದ ಉದ್ಯಮಿ ಹರೀಶ್, ಮಗಳಿಗೆ ಲಂಚ್ ಬಾಕ್ಸ್ ಮಾಡಿಕೊಡುವಾಗ ತಯಾರಿಕೆಯ ವೈವಿಧ್ಯತೆ ಕಾಯ್ದು ಕೊಂಡಿದ್ದರ ಫಲವಾಗಿ ಬಾಣಸಿಗ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಬಂದಿದೆ.

ʻಮಾಸ್ಟರ್‌ ಶೆಫ್‌ ಇಂಡಿಯಾʼ ಅಡುಗೆ ಸ್ಪರ್ಧೆಯ ಟಾಪ್‌ 12 ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆ ಆಗುವುದು ಸಾಮಾನ್ಯ ವಿಷಯವೇ ಅಲ್ಲ. ಏಕೆಂದರೆ ದೇಶದೆಲ್ಲಡೆ ಅಡುಗೆ ವಿಷಯದಲ್ಲಿ ದೊಡ್ಡದಾಗಿ ಪಳಗಿದ ಬಾಣಸಿಗರು ಅಲ್ಲಿರುತ್ತಾರೆ.

ಅಂಥವರ ನಡುವೆ ಕನ್ನಡಿಗ ಹರೀಶ್‌ ಕ್ಲೋಸ್‌ಪೇಟ್‌ ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಕಠಿಣ ಹಾದಿಯಲ್ಲಿ ನಡೆದುಬಂದ ಹರೀಶ್ ಸಾಧನೆಯನ್ನು ಈಗ ಕೊಂಡಾಡಲಾಗುತ್ತಿದೆ.

ಏಕೆಂದರೆ; ಅವರ ಇಟ್ಸಿ ಬಿಟ್ಸಿ ಕರಕುಶಲ ವಸ್ತುಗಳ 36 ಮಳಿಗೆಗಳು ದೇಶಾದ್ಯಂತ ಇವೆ. ಜೊತೆಗೆ ಆನ್ಲೈನ್ ಮಳಿಗೆ ಕೂಡ ಇದೆ. ಸುಮಾರು ಮೂರು ಸಾವಿರ ಮಹಿಳೆಯರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇವರ ಕರಕುಶಲ ವಸ್ತುಗಳಿಗೆ ಬೇಡಿಕೆ ಇದೆ.

ಹೀಗೆ ಎಷ್ಟೇ ಕೆಲಸ ಕಾರ್ಯವಿದ್ದರೂ, ಬಿಡುವಿದ್ದಾಗ ಮಗಳ ಕಾಲೇಜು ಲಂಚ್‌ಬಾಕ್ಸ್‌ಗಾಗಿ ಹರೀಶ್ ಅಡುಗೆ ಮಾಡಿ ಕಳಿಸುತ್ತಿದ್ದರು. ಹಾಗೆಯೇ ಅಡುಗೆ ಮಾಡುವಾಗ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಡುವ ಉಪಾಯ ಹೊಳೆಯಿತು. ಕಳೆದ ವರ್ಷ ʻಹ್ಯಾರಿಸ್‌ ಲಂಚ್‌ ಬಾಕ್ಸ್‌ʼ ಎಂಬ ಸೋಷಿಯಲ್‌ ಮೀಡಿಯಾ ಖಾತೆ ಶುರು ಮಾಡಿ ಮಗಳ ಊಟದ ಡಬ್ಬಿಗೆ ಮಾಡಿ ಕಳಿಸುತ್ತಿದ್ದ ಅಡುಗೆಗಳನ್ನ ಚಿತ್ರೀಕರಿಸಿ ಲೋಡ್‌ ಮಾಡತೊಡಗಿದರು.

ಅಷ್ಟೋತ್ತಿಗಾಗಲೇ ಅನೇಕ ಅಡುಗೆ ಯುಟ್ಯೂಬ್‌ ವಾಹಿನಿಗಳಿದ್ದವು. ಆದರೆ ಹರೀಶ್‌ ಅವರು ತಯಾರಿಸುತ್ತಿದ್ದ ವಿವಿಧ ಪಾಕಗಳು, ಅವುಗಳ ವೈಶಿಷ್ಟ್ಯತೆ ಹಾಗೂ ಸರಳತೆಯಿಂದಾಗಿ ಗಮನ ಸೆಳೆದವು; ಉದ್ಯಮ ಸಂಬಂಧ ಪ್ರವಾಸ ಹೋದಾಗ ದೇಶ ವಿದೇಶಗಳಲ್ಲಿ ಸವಿಯುವ ಅಡುಗೆ ಮಾಡುವ ವಿಧಾನ ತಿಳಿದುಕೊಂಡೇ ಬರುತ್ತಿದ್ದರು.

ಹಾಗೆ ಬಂದವರು, ತಮ್ಮದೇ ಪಾಕ ವಿಧಾನ ಪ್ರಯೋಗಿಸುತ್ತಿದ್ದರು. ಇದು ಹೊಸದೊಂದು ಅಧ್ಯಾಯ ತೆರೆಯಲು ಸಹಕಾರಿಯಾಗುತ್ತದೆ ಎಂಬುದನ್ನು ಅವರು ಊಹಿಸಿರಲಿಲ್ಲ. ಜೊತೆಗೆ ತಂದೆ ಮಗಳ ಬಾಂಧವ್ಯವೂ ವೀಕ್ಷಕರಿಗೆ ಇಷ್ಟವಾಯಿತು. ಕಡಿಮೆ ಅವಧಿಯಲ್ಲಿ ʻಹ್ಯಾರಿಸ್‌ ಲಂಚ್‌ ಬಾಕ್ಸ್‌ʼ ವೈರಲ್‌ ಆಗಿ ಜನಪ್ರಿಯವಾಯಿತು.

ʻಅಡುಗೆ ಮಾಡುವಾಗ ಯಾವುದನ್ನೂ ಅಳೆದು ಅಳೆದು ಹಾಕಬಾರದು; ಅಡುಗೆಯನ್ನು ಖುಷಿಯಿಂದ ಮಾಡಬೇಕು. ಜೊತೆಗೆ ಪ್ರೀತಿಯಿಂದ ಮಾಡುವ ಅಡುಗೆಯ ರುಚಿ ಹೆಚ್ಚಿರುತ್ತದೆ. ಅದೇ ಯಶಸ್ಸಿನ ಗುಟ್ಟು ಎಂಬುದು ಹರೀಶ್‌ ಕ್ಲೋಸ್‌ಪೇಟ್‌ ಆತ್ಮವಿಶ್ವಾಸದಿಂದ ಹೇಳುವ ಮಾತು.

ಸಾಮಾನ್ಯ ನೌಕರರು ನಿವೃತ್ತರಾಗುವ 58 ವಯಸ್ಸಿನಲ್ಲಿ ಹರೀಶ್‌ ಅವರು ಮಾಸ್ಟರ್‌ ಶೆಫ್‌-2023ಕ್ಕೆ ಪ್ರವೇಶ ಪಡೆದಿದ್ದಾರೆ. ಮತ್ತು ಆ ಮೂಲಕ ಕ್ರಿಯಾಶೀಲತೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಇತರ ಸ್ಪರ್ಧಿಗಳ ನಡುವೆ ವೀಕ್ಷಕರು ಹೆಚ್ಚು ಹೆಚ್ಚು ಓಟ್‌ ಮಾಡಿದರೆ ಅಂತಿಮ ಸುತ್ತಿನವರೆಗೂ ಹೋಗುವ ಅವಕಾಶ ಸಿಗುತ್ತದೆ. ಕರ್ನಾಟಕದ ವೀಕ್ಷಕರು ಕಾರ್ಯಕ್ರಮ ನೋಡಿ ಓಟ್‌ ಮಾಡಿ ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ ಎಂಬ ಭರವಸೆ ಜೊತೆ ಇದ್ದಾರೆ ಹರೀಶ್‌ ಕ್ಲೋಸ್‌ ಪೇಟ್‌.

Social Share :

ಬೆಂಬಿಡದ ಬೆನ್ನು ನೋವು ಜಗ್ಗೇಶ್ ಧಿಡೀರ್ ಆಸ್ಪತ್ರೆಗೆ..

Social Share :

ಕಳೆದ ಒಂದು ವಾರದಿಂದ ಬದ್ರಿ ಕೇದಾರನಾಥ, ಹರಿದ್ವಾರ ಮುಂತಾದ ಪುಣ್ಯ ಕ್ಷೇತ್ರಗಳ ಕಡೆ ಓಡಾಡುತ್ತ ದೇವರ ಸ್ಮರಣೆಯಲ್ಲಿದ್ದ ನವರಸ ನಾಯಕ ಜಗ್ಗೇಶ್ ಇಂದು (ಸೆಪ್ಟೆಂಬರ್ 29) ಧಿಡೀರ್ ಆಸ್ಪತ್ರೆಗೆ ‌ದಾಖಲಾಗಿದ್ದಾರೆ.

ಸದ್ಯ ದೆಹಲಿಯಲ್ಲಿವ ಜಗ್ಗೇಶ್ ಅವರು ಅತಿಯಾದ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.

ನಿನ್ನೆ ಜಗ್ಗೇಶ್ ಅವರು ಮುಖ್ಯ ಪಾತ್ರದಲ್ಲಿದ್ದ ‘ತೋತಾಪುರಿ-2’ ಚಿತ್ರ ಬಿಡುಗಡೆ ಕಂಡಿತ್ತು. ಅದರ ಪ್ರಚಾರದಲ್ಲಿಯೂ ನವರಸ ನಾಯಕರು ಕಾಣಿಸಿಕೊಂಡಿರಲಿಲ್ಲ.

ಬದ್ರಿ ಕೇದಾರನಾಥ, ಹರಿದ್ವಾರ ಶಿವನ ಸನ್ನಿಧಿ ನನಗೆ ಪ್ರೀತಿ ಪಾತ್ರ ಸ್ಥಳವಾಗಿದೆ. ಜೀವನ ಅರ್ಥೈಸುವುದು ಸಾಧ್ಯವಾಗಿದೆ ಎಂದು ಅವರು ‘ಸ್ನೇಹಪ್ರಿಯ’ಗೆ ತಿಳಿಸಿದ್ದರು.

ಅಲ್ಲದೆ ಕಾವೇರಿ ಹೋರಾಟದ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ನಾನು ಕನ್ನಡದ ಮಣ್ಣಿನ ಮಗ, ಕಾವೇರಿ ನನ್ನ ತಾಯಿ. ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದೆ. ದೂರ ಉಳಿದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.

ಜಗ್ಗೇಶ್ ಅವರಿಗೆ ಎರಡು ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಆಸ್ಪತ್ರೆ ಮೂಲಗಳನ್ನು ಉಲ್ಲೇಖಿಸಿ ಆಪ್ತರು ಮಾಹಿತಿ ನೀಡಿದ್ದಾರೆ.

Social Share :

ರಜನಿಕಾಂತ್ ಅಚ್ಚರಿ ಭೇಟಿ; ಪುಳಕಿತರಾದ ಬಿಎಂಟಿಸಿ ಸಿಬ್ಬಂದಿ

Social Share :


ಎಂದಿನಂತೆ ಕೆಲಸಕ್ಕೆ ಧಾವಿಸಿದ ಬೆಂಗಳೂರಿನ ಜಯನಗರದಲ್ಲಿರುವ ಬಿಎಂಟಿಸಿ 3ನೇ ಘಟಕದ ಸಿಬ್ಬಂದಿಗೆ ಮಂಗಳವಾರ ಬೆಳಿಗ್ಗೆಯೇ ರೋಮಾಂಚಕ ಸಂಗತಿಯೊಂದು ಎದುರಾಯ್ತು..

ಕನಸು ಮನಸಿನಲ್ಲಿಯೂ ಎಣಿಸದ ಅಥವಾ ಕನಸಿನಂತೆಯೇ ಎದುರಾದ ರೋಚಕ ಸನ್ನಿವೇಶದಲ್ಲಿ ಅವರೆಲ್ಲರೂ ಮಿಂದೆದ್ದರು..

ಅದು ರಜನಿಕಾಂತ್..!

ಒಂದು ಕಾಲದಲ್ಲಿ ಬಿಟಿಎಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್; ಆನಂತರ ಸ್ಟಾರ್ ಆಗಿ ಆಗಸದೆತ್ತರ ಬೆಳೆದಿದ್ದು ಇತಿಹಾಸ..

ಆದರೆ ತಾವು ಬೆಳೆದು ಬಂದ ದಾರಿಯನ್ನು ಈ ಸೂಪರ್ ಸ್ಟಾರ್ ಎಂದಿಗೂ ಮರೆಯಲೇ ಇಲ್ಲ. ಬೆಂಗಳೂರಿನ ಪೂರ್ವಾಶ್ರಮದ ಆ ತಾಣವನ್ನು ಅಚ್ಚರಿಯ ಭೇಟಿಯ ಮೂಲಕ ಪರಿಶೀಲಿಸಲು ಮನಸ್ಸು ಮಾಡಿದ್ದರ ಫಲ..

ಆಗಸ್ಟ್ 29ರ ಮಂಗಳವಾರ ಜಯನಗರ ಬಿಎಂಟಿಸಿ ಸಿಬ್ಬಂದಿಗೆ ಮಹಾನ್ ನಟನನ್ನು ನೋಡುವ, ಕಣ್ತುಂಬಿಕೊಳ್ಳುವ ಮತ್ತು ಸೆಲ್ಫಿ ತೆಗೆದುಕೊಳ್ಳುವುದು ವರವಾಗಿ ಬಂದಿತ್ತು.

ಡಿಪೋನ ಸಿಬ್ಬಂದಿಯ ಸಂತಸ, ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಒಬ್ಬ ಸೂಪರ್ ಸ್ಟಾರ್ ಇಷ್ಟೊಂದು ಸರಳವಾಗಿ ತಮ್ಮ ಜೊತೆ ಬೆರೆಯುವರು ಎಂದು ಅವರು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

ರಜನಿಕಾಂತ್ ಜೊತೆ ಅವರ ಬಾಲ್ಯದ ಗೆಳೆಯ ರಾಜ್ ಬಹದ್ದೂರ್ ಸಹ ಇದ್ದರು. ಸ್ನಿಗ್ಧ ನಗೆ ತಣ್ಣಗಿನ ಸ್ಪರ್ಶದಿಂದ ಅಲ್ಲಿನ ಜನರನ್ನು ಪುಳಕಿತರಾಗಿಸಿದ ರಜನಿ ಇನ್ನು ಕೆಲವು ಅಚ್ಚರಿ ತಾಣಗಳನ್ನು ಹುಡುಕುತ್ತಿದ್ದರು..

ಸೂಪರ್ ಸ್ಟಾರ್ ರಜನಿಕಾಂತ್ ಈಗ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ನಟ. ಜಪಾನ್, ಚೀನಾ, ಶ್ರೀಲಂಕಾ ಎಲ್ಲಿ ಬೇಕೆಂದರೆ ಅಲ್ಲಿ ಕಂಡು ಕೇಳರಿಯದ ಅಭಿಮಾನಿ ಬಳಗವಿದೆ..

ಮೇಲಾಗಿ ಅವರ ‘ಜೈಲರ್’ ಚಿತ್ರ ಸುಮಾರು 600 ಕೋಟಿ ಗಳಿಕೆ ಮಾಡಿದೆ. ಆದರೆ ರಜನಿಕಾಂತ್ ಈಗ ಶಾಂತಿಯನ್ನು ಹುಡುಕುತ್ತಿದ್ದಾರೆ. ಅದಕ್ಕಾಗಿ ಹಿಮಾಲಯ ಹಾಗೂ ಇತರ ಭಾಗಗಳಿಗೆ ಸಂಚರಿಸಿದ್ದಾರೆ.
ಅದೇ ರೀತಿ ಅವರ ಬಾಲ್ಯದ ದಿನಗಳನ್ನು ಕಳೆದ ಬೆಂಗಳೂರಿನ ಅಚ್ಚರಿಗಳನ್ನು ಅಚ್ಚರಿಯ ಭೇಟಿ ಮೂಲಕವೇ ಹುಡುಕುತ್ತಿದ್ದಾರೆ.

Social Share :

ಹರ್ಷಿಕಾ ಭುವನ್ ಮದುವೆ ಕರೆ

Social Share :

ದೀರ್ಘ ಕಾಲ ಸ್ನೇಹಿತರಾಗಿದ್ದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಸದ್ಯದಲ್ಲಿಯೇ ಸತಿ ಪತಿಗಳಾಗಲಿದ್ದಾರೆ.

ಇದೇ ತಿಂಗಳು ಅಂದರೆ ಆಗಸ್ಟ್ 24 ರಂದು ವಿರಾಜಪೇಟೆಯಲ್ಲಿ ನಡೆಯಲಿರುವ ಅದ್ದೂರಿ ವಿವಾಹ ಸಂಭ್ರಮೋತ್ಸವದಲ್ಲಿ ಹರ್ಷಿಕಾ ಹಾಗೂ ಭುವನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ.

ಕೊಡವ ಸಾಂಪ್ರದಾಯಿಕ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ಮದುವೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಗೆ ಆಮಂತ್ರಣ ಪತ್ರ ತಲುಪಿಸಲಾಗಿದೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಹಾಗೂ ಸಿನಿಮಾ ಉದ್ಯಮದ ಗಣ್ಯರಾದ
ಡಾ.ಶಿವರಾಜ್ ಕುಮಾರ್, ಡಾ.ರವಿಚಂದ್ರನ್, ಗಣೇಶ್ , ದೊಡ್ಡಣ್ಣ, ಶ್ರೀನಾಥ್ ಜಯಮಾಲ, ಸುಧಾರಾಣಿ, ತಾರಾ, ಮಾಲಾಶ್ರೀ..

ಅನುಪ್ರಭಾಕರ್ ಅಮೂಲ್ಯ, ದಿಗಂತ್, ಅಶ್ವಿನಿ ಪುನೀತ್ ರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್ ,ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಬೇಡಿದೆ ಜೋಡಿ.

 

Social Share :

ಸೂತಕದ ಮನೆಗೆ ಸಾಂತ್ವನಗಳು ಸಾಲುವುದಿಲ್ಲ…

Social Share :


* ಸ್ಪಂದನಾ ಪಂಚಭೂತಗಳಲ್ಲಿ ಲೀನ

* ತಾರೆಯರ ಭಾವುಕ ಕ್ಷಣಗಳು

* ಶೋಕ ಸಾಗರದಲ್ಲಿ ಚಿತ್ರರಂಗ

ಆಕಾಶದ ಭಾರವನ್ನೆಲ್ಲಾ ತಲೆಯ ಮೇಲೆ ಹೊದ್ದು ಮಲಗಿದಂತೆ ಪ್ರಕ್ಷುಬ್ಧ ವಾಗಿದ್ದ ಮನಸ್ಥಿತಿಯನ್ನು ಹತೋಟಿಗೆ ತಂದು ಪ್ರತಿಯೊಬ್ಬರ ಸಾಂತ್ವನದ ಅಪ್ಪುಗೆ ಸ್ವೀಕರಿಸುತ್ತಿದ್ದರೂ ವಿಜಯ ರಾಘವೇಂದ್ರ ಅವರನ್ನಾವರಿಸಿದ್ದ ಶೂನ್ಯ ಭಾವ ಯಾರಿಂದಲೂ ತುಂಬುವುದು ಬಹುಶಃ ಸಾಧ್ಯವಿರಲಿಲ್ಲ..

ಮಲ್ಲೇಶ್ವರದಲ್ಲಿರುವ ನಿವೃತ್ತ ಪೊಲೀಸ್ ಹಿರಿಯ ಅಧಿಕಾರಿ ಬಿ.ಕೆ.ಶಿವರಾಮ್ ಅವರ ನಿವಾಸದ ಆವರದಲ್ಲಿ ಜನ ಸಾಗರದ ನಡುವೆ ಯಾವ ಸ್ಪಂದನೆಯೂ ಇಲ್ಲದಂತೆ ತಣ್ಣಗೆ ಮಲಗಿದ್ದರು ಸ್ಪಂದನಾ..

ಹೇಳಿ ಕೇಳಿ ರಾಜ್ (ದೊಡ್ಮನೆ) ಕುಟುಂಬ; ಜೊತೆಗೆ ರಾಜಕೀಯದಲ್ಲಿ ದೊಡ್ಡ ಪ್ರಭಾವವಿರುವ ಕುಟುಂಬ ಹಾಗಾಗಿ ಚಿತ್ರರಂಗ, ರಾಜಕೀಯ ಹಾಗೂ ಬಂಧು ಬಾಂಧವರಿಗೆ ಕೊರತೆಯೇ ಇರಲಿಲ್ಲ..

ಸಭ್ಯ ನಟ ಎಂದೇ ಹೆಸರಾದ ವಿಜಯ ರಾಘವೇಂದ್ರ ಗಳಿಕೆ ಮಾಡಿರುವ ಸ್ನೇಹ ಬಳಗ ದೊಡ್ಡದು ಜೊತೆಗೆ ಸಿನಿಮಾ ಮನೆತನ. ತಮ್ಮ ಶ್ರೀಮುರಳಿ ಸ್ಟಾರ್ ನಟ ಹೀಗೆ ದೊಡ್ಡತನದ ಸಾಕಷ್ಟು ಕೊಂಡಿಗಳನ್ನು ಹೊಂದಿರುವ ಕಾರಣ ಬುಧವಾರ ಸ್ಪಂದನಾ ಸಾವಿನ ಶೋಕ ಸಾಗರದ ಹೊರತಾಗಿ ಮಾಧ್ಯಮಗಳಲ್ಲಿ ಬೇರೇನೂ ಕಾಣಲೇ ಇಲ್ಲ.

ರಾತ್ರಿ ಸುಮಾರು ಒಂದು ಗಂಟೆಗೆ ಸ್ಪಂದನಾ ಪಾರ್ಥಿವ ಶರೀರ ಥೈಲ್ಯಾಂಡ್ ನಿಂದ ಮನೆಯ ಆವರಣಕ್ಕೆ ಆಗಮಿಸಿದ ಕ್ಷಣದಿಂದ ಆ ಮನೆಯನ್ನು ಸುತ್ತುವರೆದಿತ್ತು ಜನ ಸಾಗರ.

ಥೈ ಏರ್ ವೇಸ್ ಮೂಲಕವೇ ಬಂದ ವಿಜಯ ರಾಘವೇಂದ್ರ ಅವರನ್ನು ಸಹೋದರ ಶ್ರೀಮುರಳಿ ಹಾಗೂ ಚಿತ್ರರಂಗದ ಗೆಳೆಯರು ದುಃಖತಪ್ತರಾಗಿಯೇ ಬರ ಮಾಡಿಕೊಂಡರು.

ವಿಜಯ ರಾಘವೇಂದ್ರ ಮನೆಯ ಆವರಣ ಪ್ರವೇಶಿಸುವಾಗ ಪುತ್ರನ ಕೈ ಹಿಡಿದೇ ಬಂದರು. ಬಳಿಕ ಅವರ ಮಾವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗೂ ಬಂಧು ಬಳಗದ ಆಗಮನವಾಯ್ತು.

ಬುಧವಾರ ಮುಂಜಾನೆ ಸ್ಪಂದನಾ ಪಾರ್ಥಿವ ಶರೀರವನ್ನು ತಂದು ಮನೆಯ ಆವರಣದಲ್ಲಿ ಇರಿಸಿದ ಅ ಕ್ಷಣದಿಂದ ಲೆಕ್ಕವಿಲ್ಲದಷ್ಟು ಅಭಿಮಾನಿಗಳು, ಗಣ್ಯರು ಸೇರಿ ಅಂತಿಮ ದರ್ಶನ ಪಡೆಯ ತೊಡಗಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಹಿರಿಯ ನಟ ಶ್ರೀನಾಥ್, ದೊಡ್ಡಣ್ಣ, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ರಾಘಣ್ಣ ಕುಟುಂಬದ ಸದಸ್ಯರು ಸೇರಿದಾಗ ಅಲ್ಲಿ ಕಣ್ಣೀರ ಕಡಲು ಉಕ್ಕಿ ಹರಿಯಿತು.

ನಟ ಯಶ್, ಜಗ್ಗೇಶ್, ಧ್ರುವಸರ್ಜಾ, ರಮೇಶ್ ಅರವಿಂದ್ ಸುಂದರ್ ರಾಜ್, ಭಾ.ಮ.ಹರೀಶ್, ಕೃಷ್ಣ ಅಜಯ್ ರಾವ್, ಕೆ.ಶಿವರಾಂ, ವಿನೋದ್ ರಾಜ್, ಅನುಶ್ರೀ, ಉಮಾಶ್ರೀ, ಜಯಮಾಲ ಹೀಗೆ ಬಂದವರೆಲ್ಲಾ ವಿಜಯ್ ಅಪ್ಪಿ ಸಾಂತ್ವಾನ ಹೇಳುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಹೀಗೆ ರಾಜಕೀಯ ಅಗ್ರಗಣ್ಯರ ದಂಡು ಆಗಮಿಸಿ ವಿಜಯ್ ಹಾಗೂ ಬಿ.ಕೆ.ಶಿವರಾಮ್ ಕುಟುಂಬಕ್ಕೆ ಸಾಂತ್ವಾನ ಹೇಳಿತು.

ಶಾಸಕ ಮುನಿರತ್ನ, ಬಿ.ಕೆ.ಹರಿಪ್ರಸಾದ್, ಎಸ್.ಎ.ಚಿನ್ನೇಗೌಡ ಹಾಗೂ ಕುಟುಂಬದ ಸದಸ್ಯರು ಗಣ್ಯರ ಓಡಾಟದ ಉಸ್ತುವಾರಿ ವಹಿಸಿದ್ದರು.

ಮಲ್ಲೇಶ್ವರ ದಿಂದ ಅಂತಿಮ ಯಾತ್ರೆ ಹೊರಟು ಹರಿಶ್ಚಂದ್ರ ಘಾಟ್ ನಲ್ಲಿ ಅದರ ವಿಧಿ ವಿಧಾನಗಳು ನಡೆದು ಸಂಜೆ 4.45ರ ಸುಮಾರಿಗೆ ಸ್ಪಂದನಾ ಅಗ್ನಿಯಲ್ಲಿ ಲೀನವಾದರು.

ಸ್ಪಂದನಾ ಮರಳಿ ಬಾರದೂರಿಗೆ ಹೊರಟು ಹೋಗಿದ್ದಾರೆ. ಇದು ಅನ್ಯಾಯದ ಸಾವು. ಅಕಾಲಿಕ ದುರ್ಮರಣ..

ಹೀಗೆ ಮರಗುತ್ತಲೇ ಯಾರು ಎಷ್ಟೇ ಅಪ್ಪುಗೆಯ ಸಾಂತ್ವಾನ ನೀಡಿದರೂ ವಿಜಯ ರಾಘವೇಂದ್ರ ಮನ ತುಂಬುತ್ತಿಲ್ಲ..
ಅದು ಖಾಲಿ.. ಖಾಲಿ..
ಶೂನ್ಯ ಭಾವ..

Social Share :

ಮಲಗಿದ ಸ್ಪಂದನಾ ಮತ್ತೆ ಏಳಲಿಲ್ಲ ವಿಜಯ ರಾಘವೇಂದ್ರ ಪತ್ನಿ ಇನ್ನಿಲ್ಲ..

Social Share :


ರಾತ್ರಿ ಮಲಗಿದ ಸ್ಪಂದನಾ (ವಿಜಯ ರಾಘವೇಂದ್ರ ಪತ್ನಿ) ಮತ್ತೆ ಮೇಲೇಳಲೇ ಇಲ್ಲ..!

ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಬರ ಸಿಡಿಲಿನಂತಹ ಸುದ್ದಿ ಬಂದೆರಗಿದೆ.
ಅದರಲ್ಲೂ ರಾಜ್ ಕುಟುಂಬಕ್ಕೆ ಎರಡನೇ ಆಘಾತ ಇದಾಗಿದೆ..

ಕನ್ನಡದ ಜನಪ್ರಿಯ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ಸ್ಪಂದನ ಅವರಿಗೆ ಥೈಲ್ಯಾಂಡ್ ನಲ್ಲಿ ಲೋ ಬಿಪಿ ಬಳಿಕ ಹೃದಯಾಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ಮಾಹಿತಿ.

ಪೊಲೀಸ್ ಇಲಾಖೆಯಲ್ಲಿ ಕಠಿಣ ಅಧಿಕಾರಿ ಎಂದೇ ಹೆಸರಾಗಿದ್ದ ಬಿ.ಕೆ.ಶಿವರಾಮ್ ಅವರ ಪುತ್ರಿ ಸ್ಪಂದನಾ ಅವರು ನಟ ವಿಜಯ ರಾಘವೇಂದ್ರ ಅವರನ್ನು ಪ್ರೇಮಿಸಿ ಮದುವೆಯಾಗಿದ್ದರು.

ಕಾಫಿ ಡೇ ನಲ್ಲಿ ವಿಜಯ ರಾಘವೇಂದ್ರ ಹಾಗೂ ಸ್ಪಂದನಾ ಭೇಟಿಯಾಗಿ ಪ್ರೇಮಾಂಕುರವಾಗಿತ್ತು. ಬಳಿಕ ಅವರು ಸಂಬಂಧವೇ ಆಗಬೇಕು ಎಂದು ತಿಳಿದಾಗ ಹಿರಿಯರ ಸಮ್ಮತಿ ಜೊತೆ 2007ರಲ್ಲಿ ವಿವಾಹವಾಗಿದ್ದರು.

ಎಲ್ಲರ ಕಣ್ಣು ಬೀಳುವಷ್ಟು ಅನೋನ್ಯವಾಗಿದ್ದ ವಿಜಯ ರಾಘವೇಂದ್ರ ದಂಪತಿಗಳಿಗೆ ಶೌರ್ಯ ಎಂಬ ಪುತ್ರನಿದ್ದಾನೆ. ಪಾರ್ವತಮ್ಮ ರಾಜ್‍ಕುಮಾರ್ ಅವರ ಸಹೋದರ ಎಸ್.ಎ.ಚಿನ್ನೇಗೌಡರ ಪುತ್ರ ವಿಜಯ ರಾಘವೇಂದ್ರ ಅತ್ಯಂತ ಸೌಮ್ಯ ಸ್ವಭಾವದ ನಟ. ಈಗ ಅವರ ಬದುಕಿಗೆ ಬರಸಿಡಿಲು ಬಂದೆರಗಿದೆ.

ಸ್ಪಂದನಾ ಚಿತ್ರರಂಗದ ಜೊತೆ ಉತ್ತಮ ನಂಟು ಹೊಂದಿದ್ದರು. ವಿಜಯ ರಾಘವೇಂದ್ರ ಅಭಿನಯದ ‘ಕಿಸ್ಮತ್’ ಎಂಬ ಚಿತ್ರವನ್ನು ನಿರ್ಮಿಸಿದ್ದರು ಮಾತ್ರವಲ್ಲ; ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅಭಿನಯದ ‘ಅಪೂರ್ವ’ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು.

ವಿದೇಶ ಪ್ರವಾಸದಲ್ಲಿದ್ದ ಸ್ಪಂದನಾ ಅವರಿಗೆ ಏನಾಗಿತ್ತು ಎಂಬುದರ ಮಾಹಿತಿ ಸದ್ಯಕ್ಕಿಲ್ಲ. ಅವರು ಮಲಗಿದ್ದಾಗಲೇ ಇಹಲೋಕ ತ್ಯಜಿಸಿದ್ದಾರೆ ಎಂದು ವಿಜಯ ರಾಘವೇಂದ್ರ ಸಹೋದರ ನಟ ಮುರಳಿ ಹಾಗೂ ಸ್ಪಂದನಾ ದೊಡ್ಡಪ್ಪ ಹಿರಿಯ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.

ಸ್ಪಂದನಾ ಪಾರ್ಥಿವ ಶರೀರವನ್ನು ಬ್ಯಾಂಕಾಕ್ ನಿಂದ ತರಲು ಸರ್ಕಾರ ಸಹಕಾರ ನೀಡಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದು, ಬಿ.ಕೆ.ಹರಿಪ್ರಸಾದ್ ಈ ಸಂಬಂಧ ಬ್ಯಾಂಕಾಕ್ ಗೆ ತೆರಳಲಿದ್ದಾರೆ.

ಭಾನುವಾರ ರಾತ್ರಿಯೇ ವಿಜಯ ರಾಘವೇಂದ್ರ ಬ್ಯಾಂಕಾಕ್ ಗೆ ತೆರಳಿದ್ದಾರೆ. ಅಲ್ಲಿ ಸೋಮವಾರ ಪೋಸ್ಟ್ ಮಾರ್ಟನ್ ನಡೆದು ಮಂಗಳವಾರ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದೆ ಎಂಬುದು ಸದ್ಯದ ಮಾಹಿತಿ.

Social Share :