Snehapriya.com

November 20, 2024

ರಾಜಕೀಯ-ವಿಶ್ಲೇಷಣೆ

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮಾಣ

Social Share :

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕರ್ನಾಟಕದ ಹೆಮ್ಮೆಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮಾಣ ಸ್ವೀಕರಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ನಿಕಟ ಪೂರ್ವ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ್ದರು.

80ರ ಹರೆಯದ ಮಲ್ಲಿಕಾರ್ಜುನ್ ಖರ್ಗೆ ಅವರು ಸುದೀರ್ಘ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನೇ ಜೀವನದ ಮೌಲ್ಯಗಳನ್ನಾಗಿಸಿ ಕೊಂಡವರು..

ಹಾಗಾಗಿ ತಮ್ಮ ಅನುಭವ ಮಾರ್ಗದರ್ಶನದೊಂದಿಗೆ ಕಾಂಗ್ರೆಸ್ ಪಕ್ಷ ಮತ್ತಷ್ಟು ಸದೃಢವಾಗಿ ಸೈದ್ಧಾಂತಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಬಲಗೊಳ್ಳುವಂತೆ ಮಾಡಬಲ್ಲರು ಎಂಬುದಾಗಿ ಈ ಸಂದರ್ಭದಲ್ಲಿ ಮುಖಂಡರು ಆಶಾ ಭಾವನೆ ವ್ಯಕ್ತಪಡಿಸಿದರು.

Social Share :

ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯ್ತಿ ಮುಖ್ಯಮಂತ್ರಿ ಘೋಷಣೆ..

Social Share :

ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಸಂರಕ್ಷಣೆ ಮಾಡಲು ಪ್ರೇರಣೆ ನೀಡುವ ‘ಗಂಧದ ಗುಡಿ’ ಚಲನಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯ್ತಿಯನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಶುಕ್ರವಾರ ಅವರು ‘ಪುನೀತ್ ಪರ್ವ’ ಗಂಧದ ಗುಡಿ ಬಿಡುಗಡೆ ಪೂರ್ವ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಗಂಧದ ಗುಡಿ ಚಲನಚಿತ್ರ ನಿಸರ್ಗ ಮತ್ತು ಅದರ ರಕ್ಷಣೆ ಕುರಿತಾಗಿರುವ ಚಲನಚಿತ್ರವಾಗಿರುವುದರಿಂದ ಇಂದಿನ ಕಾಲದಲ್ಲಿ ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.

ಅಪ್ಪು ಜನಮಾನಸದಲ್ಲಿ ಜೀವಂತವಾಗಿದ್ದಾರೆ; ಅಪ್ಪು ಅವರನ್ನು ಕಳೆದುಕೊಂಡು ಒಂದು ವರ್ಷವಾಗಿದೆ. ಅಪ್ಪು ನಮ್ಮ ಜೊತೆಗೆ ಇದ್ದಾರೆ ಎಂಬ ಭಾವನೆ ನಮ್ಮಲ್ಲಿದೆ; ಅವರು ದೇವತಾ ಮನುಷ್ಯ, ಅವರ ವ್ಯಕ್ತಿತ್ವಕ್ಕೆ ದೇವರ ಆಶೀರ್ವಾದವಿದೆ ಎಂದರು.

ನವೆಂಬರ್ 1 ರಂದು ಅಪ್ಪುರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ವಿಧಾನಸೌಧದ ಮುಖ್ಯದ್ವಾರ ಮೆಟ್ಟಿಲುಗಳ ಮೇಲೆ ಮರಣೋತ್ತರವಾಗಿ ಕರ್ನಾಟಕ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಗುತ್ತಿದೆ. ಇದು ಎಲ್ಲಾ ಯುವಕರಿಗೂ ಪ್ರೇರಣೆಯಾಗುವಂತಹ ಒಂದು ಗೌರವ ಎಂದು ಭಾವಿಸುತ್ತೇನೆ ಎಂದರು.

ಗಂಧದ ಗುಡಿ ಚಲನಚಿತ್ರ ಅತ್ಯಂತ ಯಶಸ್ವಿಯಾಗಲಿ; ಅದೇ ರೀತಿ ಪುನೀತ್ ಪರ್ವ ಕಾರ್ಯಕ್ರಮ ಕೂಡ ಯಶಸ್ವಿಯಾಗಲಿ. ಸುಮಾರು ಹತ್ತು ದಿನಗಳ ಕಾಲ ನಡೆಯುವ ಕರ್ನಾಟಕ ರತ್ನ ಸಮಾರಂಭದ ಸಂಭ್ರಮವೂ ಕೂಡ ಯಶಸ್ವಿಯಾಗಲಿ. ಈ ಕಾರ್ಯಕ್ರಮದ ಮೂಲಕ ಅಪ್ಪುವಿನ ಮೇಲಿನ ನಮ್ಮ ಪ್ರೀತಿ, ವಾತ್ಸಲ್ಯವನ್ನು ಸಮಸ್ತ ಕನ್ನಡ ನಾಡು ತೋರಿಸಿದಂತಾಗುತ್ತದೆ ಎನ್ನುವ ಆಶಾಭಾವನೆ ನನಗಿದೆ ಎಂದರು.

Social Share :

ಎಐಸಿಸಿಗೆ ಮಲ್ಲಿಕಾರ್ಜುನ ಖರ್ಗೆ ಅಜಾತ ಶತ್ರು ಆಗಮನ

Social Share :

🖋ವೈ.ಜಿ.ಅಶೋಕ್ ಕುಮಾರ್
ಹಿರಿಯ ರಾಜಕೀಯ ವಿಶ್ಲೇಷಕರು

ಅಜಾತಶತ್ರು ಆಗಮನ
*** *** *** ***
ರಾಜ್ಯ ಕಾಂಗ್ರೆಸ್ನಲ್ಲಿ ಮೂರು ಶಕ್ತಿ ಕೇಂದ್ರ
************
ಆವತ್ತು 2004ರಲ್ಲಿ ಇನ್ನೇನು ದೇವೇಗೌಡರು ಮುಖ್ಯಮಂತ್ರಿ ಹೆಸರನ್ನು ಸೋನಿಯಾ ಗಾಂಧಿಯವರಿಗೆ ಸೂಚಿಸಬೇಕಿತ್ತು.
ಅವರಿಗೊಂದು ದೂರವಾಣಿ
ಕರೆ ಬಂತು.
ಮಾತನಾಡಿದವರು‍ ಕಾಂಗ್ರೆಸ್ ಮುಖಂಡರೇ ಆಗಿದ್ದರು.
ಖರ್ಗೆಯವರ ಬದಲು ಅವರ ಅನುಗಾಲದ ಗೆಳೆಯ ಧರ್ಮಸಿಂಗ್ ಮುಖ್ಯಮಂತ್ರಿಯಾದರು.
ಸಂತೋಷದಿಂದ ಗೆಳೆಯನನ್ನು ಖರ್ಗೆ ಆಲಂಗಿಸಿಕೊಂಡು ಬುದ್ಧನಾದರು.

ಅದಕ್ಕೂ ಮುನ್ನ ಎಸ್ ಎಂ ಕೃಷ್ಣ ಕ್ಯಾಬಿನೆಟ್ ನಲ್ಲಿ ಉಪಮುಖ್ಯಮಂತ್ರಿ ಘೋಷಣೆಯಾಗಿ ಒಟ್ಟೊಟ್ಟಿಗೆ ಪ್ರಮಾಣ ಸ್ವೀಕರಿಸಬೇಕಿತ್ತು. ಆಗ
ಸ್ವಯಂ ಕೆ ಎಚ್ ರಂಗನಾಥ್ ಕೃಷ್ಣ ಮನೆಗೆ ಧಾವಿಸಿ ಬಂದು ಕೃಷ್ಣ ಅವರ ಕೈ ಹಿಡಿದು ಪ್ರಮಾಣ ಮಾಡಿಸಿ ಕೊಂಡರು. ಕೃಷ್ಣ ವಿಧಾನಸೌಧದ ಕಾರಿಡಾರಿನಲ್ಲಿ ಖರ್ಗೆ ಮನವೊಲಿಸಿದರು. ಈ ರಾಜ್ಯದಲ್ಲಿ ಯಾರಿಗಾಗಿ ಉಪಮುಖ್ಯಮಂತ್ರಿ ಹುದ್ದೆ ಮೊದಲ ಬಾರಿಗೆ ಸೃಷ್ಟಿಯಾಗಿತ್ತೋ ಅವರು
ಮುಖ್ಯಮಂತ್ರಿ ಆದಾಗ ಖರ್ಗೆಯವರಿಗೆ ಆ ಸ್ಥಾನ ನೀಡಲಿಲ್ಲ..
ಖರ್ಗೆ ಮತ್ತೊಮ್ಮೆ ಬುದ್ದನಾದರು.

ಸಿದ್ದರಾಮಯ್ಯ ಅವರಿಗಾಗಿ ವಿರೋಧ ಪಕ್ಷದ ಸ್ಥಾನ ತ್ಯಜಿಸಬೇಕಾಯಿತು. ಖರ್ಗೆ ಕೆಪಿಸಿಸಿ ಅಧ್ಯಕ್ಷರಾದರು. ಮುಂದೆ ಲೋಕಸಭೆ ಗೆದ್ದರೂ ವಿರೋಧ ಪಕ್ಷದ ನಾಯಕನಾಗಲು ಸಂಖ್ಯಾಬಲದ ಕೊರತೆಯಿಂದ ಸಂಸದೀಯ ಮುಖಂಡರಾದರು.
ಆಗ ಪ್ರಬಲ ಪ್ರಧಾನಿಯನ್ನು ಎದುರಿಸಿ ನಿಂತರು.
ಅವಮಾನಿತ ಸಂದರ್ಭಗಳು ಅವರಿಗಾಗಿಯೆ ಸೃಷ್ಟಿಯಾಗುತ್ತಿತ್ತು !
ಖರ್ಗೆ ಕಂಠದ ವಾಗ್ಜರಿಗೆ ಮೋದಿ ಬೆರಗಾದರು.
ಅವರ ಕಂಠವನ್ನು ಕರ್ನಾಟಕದ ಕಂದಮ್ಮಗಳು ಕೂಡಾ ಗುರುತಿಸುತ್ತವೆ.

ಮುಖ್ಯಮಂತ್ರಿ ಕುರ್ಚಿಯ ಸಮೀಪವೇ ಇದ್ದ ಖರ್ಗೆ ಮತ್ತು ಸಿದ್ದರಾಮಯ್ಯ ನಡುವೆ ಆಂತರಿಕ ಚುನಾವಣೆ ನಡೆದರೂ ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ದಕ್ಕಲಿಲ್ಲ.
ಅವರು ಮತ್ತೊಮ್ಮೆ ಬುದ್ದನಾದರು.

ಕರ್ನಾಟಕದಲ್ಲಿ ಮೂವರು ಮುಖ್ಯಮಂತ್ರಿಗಳ ಬದಲಾವಣೆ ಆದಾಗಲೂ ಖರ್ಗೆ ಧರ್ಮಸಿಂಗ್ ಹೆಚ್ ಕೆ ಪಾಟೀಲ್ ಮಂತ್ರಿಗಳು ಇವರನ್ನು ಕರ್ನಾಟಕ ರಾಜಕಾರಣದ‌ ಸೆಟ್ ದೋಸೆ ಎಂದು ಪತ್ರಿಕೆಗಳು ಹೆಸರಿಸಿದವು. ಅವರನ್ನು ಸೋಲಿಲ್ಲದ ಸರದಾರ ಎಂದೇ ಬಣ್ಣಿಸಲಾಗಿದೆ.

ಈಗ ಮತ್ತೆ ಅವರು ಪರಮೋಚ್ಛ ಸ್ಥಾನವನ್ನು ಅಲಂಕರಿಸಿದ್ದಾರೆ.
ಸಿದ್ದು ಡಿಕೆಶಿ ಹಗ್ಗ ಜಗ್ಗಾಟದಲ್ಲಿ ಖರ್ಗೆ ಮುಖ್ಯಮಂತ್ರಿ ಆಗಬಹುದೆಂದು ಭಾವಿಸಲಾಗಿತ್ತು. ಈಗ ಆ ಅವಕಾಶವೂ ಕ್ಷೀಣಿಸಿದೆ. ಆದರೆ ರಾಜ್ಯದಲ್ಲಿ ಖರ್ಗೆ ಶಕ್ತಿ ಕೇಂದ್ರ ವಿಸ್ತಾರವಾಗಲಿದೆ. ಸಿದ್ದು ಡಿಕೆಶಿ ಮನೆ ಬಾಗಿಲಿಗೆ ಎಡತಾಕುತ್ತಿದ್ದ ಆಕಾಂಕ್ಷಿಗಳು ಇನ್ನು ಮುಂದೆ ಖರ್ಗೆ ಮನೆ ಬಾಗಿಲು ಕಾಯಲಿದ್ದಾರೆ.
ಆದರೆ ಮುಂದಿನ ಲೋಕಸಭೆಗೆ ಅವರು ಆಯ್ಕೆಯಾಗ ಬೇಕಿದೆ . ಅದಕ್ಕೂ ಮೊದಲು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಅದರಲ್ಲಿ ಅವರು ವಿಫಲರಾದರೆ ಎಐಸಿಸಿ ಅಧ್ಯಕ್ಷ ಸ್ಥಾನದ ಗೌರವ ಕುಸಿಯಲಿದೆ.
ಮುಂದೊಂದು ದಿನ ಲೋಕಸಭೆಗೆ ಬಹುಮತ ದೊರೆತರೆ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ.
ಅದಾಗದಿದ್ದರೇ ಅವರು ಮತ್ತೊಮ್ಮೆ ಬುದ್ದನಾಗುತ್ತಾರೆ.

ಕಾಂಗ್ರೆಸ್ ನ ಸ್ವಾರ್ಥಿಗಳ ನಡುವೆ ತಮ್ಮ ಅನುಭವಗಳ ನಡವಳಿಕೆಯಿಂದ ಅನಾಥರಾಗಿ ಜನಿಸಿದ ಮಲ್ಲಿಕಾರ್ಜುನ
ಎಂ ಖರ್ಗೆ ಆಕಾಶದೆತ್ತರಕ್ಕೆ ಬೆಳೆದದ್ದು ತಮ್ಮ ಪಕ್ಷನಿಷ್ಟ ಪ್ರವೃತ್ತಿಯಿಂದ.
ಅವರು ಯಾವತ್ತೂ ಹೈಕಮಾಂಡ್ ಹಾಕಿದ ಗೆರೆ ದಾಟಿದವರಲ್ಲ.ಅದಕ್ಕಿಂತ ಹೆಚ್ಚಾಗಿ ಗೆರೆ ಹಾಕಲು ಅವರು ಅವಕಾಶವನ್ನೇ ಕೊಡಲಿಲ್ಲ.
ದೇವರಾಜ ಅರಸರು ಸಿಡಿದಾಗಲೂ ಖರ್ಗೆ ಹೈಕಮಾಂಡ್ ಪರವಾಗಿಯೇ ನಿಂತರು.
ಎರಡೂ ಮಂಡಿ ಅಪರೇಷನ್ ಮಾಡಿಕೊಂಡು ಎದ್ದು ನಿಂತಿರುವ
ಅವರು ತಿನ್ನುವ ಅಂಬಳಗಟ್ಟ ಬೀಜ ಕಂಠಕ್ಕೆ ಮತ್ತು ಸೊಂಟಕ್ಕೆ ಬಲ ತುಂಬಿದೆ ಎಂದು ಹಿರಿಯ ಪತ್ರಕರ್ತ ಕೆ ರಾಜಾರಾವ್ ಹೇಳಿದ್ದು ಈಗ ನೆನಪಾಗುತ್ತಿದೆ.
— — —- —- —

Social Share :

ದ್ರೌಪದಿ ಮುರ್ಮು ದೇವೇಗೌಡ ಭೇಟಿ

Social Share :

ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿ ಎ ಅಭ್ಯರ್ಥಿ ಯಾಗಿರುವ ದ್ರೌಪದಿ ಮುರ್ಮು ಭಾನುವಾರ ರಾಜ್ಯದ ಪ್ರವಾಸ ಕೈಗೊಂಡು ಮತ ಯೋಚಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ದ್ರೌಪದಿ ಮುರ್ಮು ಭೇಟಿ ಮಾಡಿ ಮತ ಯಾಚಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಕಿಶನ ರೆಡ್ಡಿ, ಮಾಜಿ ಮುಖ್ಯಮಂತ್ರಿಎಚ್ .ಡಿ. ಕುಮಾರ ಸ್ವಾಮಿ, ಮಾಜಿ ಸಚಿವ ಎಚ್ ಡಿ ರೇವಣ್ಣ ಮತ್ತು ಇತರರು ಹಾಜರಿದ್ದರು.

ದ್ರೌಪದಿ ಮುರ್ಮು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸೌಹಾರ್ದ ಮಾತುಕತೆ ನಡೆಸಿದರು. ಈ ವೇಳೆ ಚೆನ್ನಮ್ಮ ದೇವೇಗೌಡ ಸಹ ಹಾಜರಿದ್ದರು.

ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿರುವ ಕಾರಣ ಅವರಿಗೆ ಬೆಂಬಲ ನೀಡಲಾಗುತ್ತದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲೇ ಘೋಷಣೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ದೇವೇಗೌಡರನ್ನು ಭೇಟಿ ಮಾಡಿದ್ದರು. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸಹ ಈ ಸಂದರ್ಭದಲ್ಲಿ ಹಾಜರಿದ್ದರು.

ಇದಕ್ಕೂ ಮುಂಚೆ ದ್ರೌಪದಿ ಮುರ್ಮು ಅವರು ಬಿಜೆಪಿ ಶಾಸಕರು ಹಾಗೂ ಸಂಸದರ ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಸಭೆಯಲ್ಲಿ ಹಾಜರಿದ್ದರು.

Social Share :

ಸಾಲು ಮರದ ತಿಮ್ಮಕ್ಕ ಈಗ ಪರಿಸರ ರಾಯಭಾರಿ

Social Share :

ರಾಜ್ಯ ಸಚಿವರ ಸ್ಥಾನಮಾನ

ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಇನ್ನು ಮುಂದೆ ಪರಿಸರದ ರಾಯಭಾರಿ..

ಸಾಲು ಮರದ ತಿಮ್ಮಕ್ಕ ಅವರಿಗೆ ಪರಿಸರದ ರಾಯಭಾರಿ ಎಂಬ ವಿಶೇಷ ಬಿರುದು ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಈ ವಿಷಯ ಪ್ರಕಟಿಸಿದ್ದಾರೆ. ಸಾಲು ಮರದ ತಿಮ್ಮಕ್ಕ ಅವರಿಗೆ ರಾಜ್ಯ ಸಚಿವರ ಸ್ಥಾನ ನೀಡಿ , ವಾಹನ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತುಮಕೂರಿನ ಶ್ರೀ ಸಿದ್ಧಾರ್ಥ ಶೈಕ್ಷಣಿಕ ಸಂಸ್ಥೆ ಹಾಗೂ ಸಾಲುಮರದ ತಿಮ್ಮಕ್ಕ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ವಸಂತ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ‌ಆಯೋಜಿಸಿದ್ದ ವೃಕ್ಷ ಮಾತೆ, ಪದ್ಮಶ್ರೀ ನಾಡೋಜ, ಡಾ. ಸಾಲು ಮರದ ತಿಮ್ಮಕ್ಕ ಅವರ 111ರ ಜನ್ಮ ಸಂಭ್ರಮ ಹಾಗೂ ನ್ಯಾಷನಲ್ ಗ್ರೀನರಿ ಅವಾರ್ಡ್-2020ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ಪ್ರಕಟಿಸಿದ್ದಾರೆ.

ಸಾಲು ಮರದ ತಿಮ್ಮಕ್ಕ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋದರೆ ಅದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅವರನ್ನು ಕುರಿತ ವೆಬ್ ಸೈಟ್ ಅಭಿವೃದ್ಧಿ ಪಡಿಸಿ ದೇಶದ ತುಂಬೆಲ್ಲಾ ಪ್ರಚಾರವಾಗುವಂತೆ ನೋಡಿಕೊಳ್ಳಲು ವಾರ್ತಾ ಇಲಾಖೆಗೆ ಸೂಚಿಸಲಾಗುವುದು; ಸಾಲುಮರದ ತಿಮ್ಮಕ್ಕ ಅವರಲ್ಲದೇ ಈ ರೀತಿಯ ಸೇವೆಗಳನ್ನು ಮಾಡಿರುವವರ ವೆಬ್ ಸೀರೀಸ್ ನ್ನು ಕೂಡ ವಾರ್ತಾ ಇಲಾಖೆ ನಿರ್ಮಿಸಲಿದೆ ಎಂದರು.

ತಿಮ್ಮಕ್ಕನ ಊರಿನ ಬಳಿ 10 ಎಕರೆ ಸ್ಥಳ ನಿಗದಿ ಮಾಡಿ ಆದೇಶವನ್ನು ಶೀಘ್ರವಾಗಿ ಹೊರಡಿಸಲಾಗುವುದು. ತಿಮ್ಮಕ್ಕ ಅವರಿಗೆ ಈಗಾಗಲೇ ಬಿಡಿಎ ನಿವೇಶನ ನೀಡಿ ನೋಂದಾಣಿಯನ್ನು ಮಾಡಿಕೊಡಲಾಗಿದೆ. ನಿವೇಶನವನ್ನು ಭದ್ರಪಡಿಸಲು ತಂತಿಬೇಲಿ ಹಾಕಬೇಕು. ಶೀಘ್ರವಾಗಿ ಮನೆಯನ್ನು ಕಟ್ಟಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಸಾಧನೆ ಮಾಡಲು ಪದವಿ, ನೆರವು ಅವಕಾಶಗಳು ಅಗತ್ಯ ವಿಲ್ಲ. ಒಂದು ಧ್ಯೇಯ ಇದ್ದಲ್ಲಿ ಕಾಯಕನಿಷ್ಠೆಯಿಂದ ಸರ್ವರಿಗೂ ಒಳ್ಳೆಯದಾಗುವ ಕೆಲಸ ಮಾಡಿದರೆ ಇಡೀ ಜಗತ್ತಿಗೆ ಬದಲಾವಣೆ ತರುವ ಪ್ರಭಾವಿ ಶಕ್ತಿಯಾಗಬಹುದು ಎನ್ನುವ ಉದಾಹರಣೆ ನಮ್ಮವರೇ ಆದ ಸಾಲು ಮರದ ತಿಮ್ಮಕ್ಕ ಅವರದು ಎಂದರು.

ತಿಮ್ಮಕ್ಕ ಬಹು ದೊಡ್ಡ ಪ್ರೇರಣಾ ಶಕ್ತಿ

ಸಾಲು ಮರದ ತಿಮ್ಮಕ್ಕನ ಮುಖದಲ್ಲಿ ಮುಗ್ಧತೆ ಇದೆ. ಅವರ ಪ್ರಾಂಜಲ ಮನಸ್ಸು ಮತ್ತು ಶುದ್ಧ ಅಂತ:ಕರಣದಿಂದ ಮಾಡಿದ ಕಾಯಕ ಯೋಗದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಸಾಧನೆ ಕಡಿಮೆ ಸಾಧನೆಯಲ್ಲ; ಪ್ರಶಸ್ತಿ ಗಳು ತಿಮ್ಮಕ್ಕ ರನ್ನು ಹುಡುಕಿಕೊಂಡು ಬಂದಿವೆ. ಆಕೆಯ ಕತೃತ್ವ ಶಕ್ತಿ ಅಷ್ಟಿದೆ. ತಮ್ಮ ಊರಿನ ನಾಲ್ಕು ಕಿಮೀ ಉದ್ದಕ್ಕೂ ಸಸಿಗಳನ್ನು ನೆಟ್ಟು ಬೆಳೆಸಿರುವುದು ಅಸಾಮಾನ್ಯ. ಸಾಲು ಮರದ ತಿಮ್ಮಕ್ಕ ಪ್ರಸಿದ್ದರಾದ ನಂತರ ಬಹಳ ಜನರಿಗೆ ಪ್ರೇರಣೆಯಾಗಿದ್ದಾರೆ. ಪ್ರತಿ ಶಾಲೆ ಹಾಗೂ ಊರಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಅದ್ಭುತವಾಗಿದೆ. ಆಕೆ ಅಷ್ಟು ದೊಡ್ಡ ಪ್ರೇರಣಾ ಶಕ್ತಿ ಎಂದರು.

ತಿಮ್ಮಕ್ಕ ಅವರ ಬಗ್ಗೆ ಪ್ರಚಾರ ಎಂದರೆ ಹಸಿರು, ಪರಿಸರ, ಶುದ್ಧೀಕರಣದ ಪ್ರಚಾರ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

Social Share :

ಮುಖ್ಯಮಂತ್ರಿಗಳಿಗೆ ಸಾಲು ಮರದ ತಿಮ್ಮಕ್ಕ ಆಶೀರ್ವಾದ

Social Share :

ಸಾಲುಮರದ ತಿಮ್ಮಕ್ಕ ಅವರು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

 

ಸಾಲು ಮರಗಳನ್ನು ಬೆಳೆಸಿ ‘ಪರಿಸರದ ತಾಯಿ’ ಎಂದೇ ಹೆಸರಾಗಿರುವ ತಿಮ್ಮಕ್ಕ ಅವರು ಮುಖ್ಯಮಂತ್ರಿಗಳಿಗೆ ಆಶೀರ್ವಾದ ಕೂಡ ಮಾಡಿದರು.

ಮುಖ್ಯಮಂತ್ರಿ ಅವರು ಸಹ ವಿನಮ್ರವಾಗಿ ತಿಮ್ಮಕ್ಕ ಅವರ ಆಶೀರ್ವಾದ ಪಡೆದರು.

Social Share :

ಕಾಶ್ಮೀರಿ ಫೈಲ್ಸ್ ಮೋಹ ಜೇಮ್ಸ್ ಚಿತ್ರ ಪ್ರದರ್ಶನ ತಡೆಗೆ ಒತ್ತಡ

Social Share :

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆದು ಹಾಕಲು ಬಿಜೆಪಿಯ ಕೆಲ ಶಾಸಕರು ಒತ್ತಡ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಪ್ರೋತ್ಸಾಹಿಸುವ ಸಲುವಾಗಿ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ತೆರವುಗೊಳಿಸುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಜೇಮ್ಸ್ ಚಿತ್ರದ ನಿರ್ಮಾಪಕರಿಂದ ತಮಗೆ ದೂರು ಬಂದಿರುವುದಾಗಿ ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.

ಜೇಮ್ಸ್ ಚಿತ್ರವು ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಚಿತ್ರವಾಗಿದ್ದು, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಆದರೆ ಬಿಜೆಪಿಯ ಕೆಲ ಶಾಸಕರು ಜೇಮ್ಸ್ ಚಿತ್ರ ತೆಗೆದು ಕಾಶ್ಮೀರಿ ಫೈಲ್ಸ್ ಚಿತ್ರ ಹಾಕಬೇಕೆಂದು ಒತ್ತಡ ಹಾಕಿರುವುದು ಅಕ್ಷಮ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಕೊಪ್ಪಳದಲ್ಲಿ ಮಾತನಾಡಿರುವ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪಾತಿಕೊಂಡ ಅವರು ಜೇಮ್ಸ್ ಚಿತ್ರಕ್ಕೆ ತಡೆಯೊಡ್ಡುವ ಆತಂಕ ಎದುರಾಗಿರುವುದು ನಿಜ ಎಂದು ತಿಳಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಚಿಕ್ಕಬಳ್ಳಾಪುರದಲ್ಲಿ ನಡೆದ ತ್ರಿಬಲ್ ಆರ್ ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು.. ಪುನೀತ್ ಅವರ ಬಗ್ಗೆ ಭಾವುಕವಾಗಿ ಮಾತನಾಡಿ ‘ನನ್ನ ಅಪ್ಪು..’ ಎಂದು ಹೊಗಳಿದ್ದರು. ಈಗ ಅಪ್ಪು ಚಿತ್ರ ಪ್ರದರ್ಶನಕ್ಕೆ ಆತಂಕ ಎದುರಾಗಿರುವುದನ್ನು ಅವರೇ ದೂರ ಮಾಡಬೇಕಿದೆ..

ಈ ಮಧ್ಯೆ ದೆಹಲಿಯಲ್ಲೂ ಕಾಶ್ಮೀರಿ ಫೈಲ್ಸ್ ನ ಸಲುವಾಗಿ ಈಚೆಗೆ ಬಿಡುಗಡೆ ಕಂಡ ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ಚಿತ್ರದ ಪ್ರದರ್ಶನ ತಡೆಯೊಡ್ಡಿ ಚಿತ್ರವನ್ನು ಚಿತ್ರಮಂದಿರದಿಂದ ತೆರವುಗೊಳಿಸಲಾಗಿದೆ ಎಂಬ ಆರೋಪ ಬಂದಿರುವುದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

Social Share :

ಮಹಿಳಾ ಶಕ್ತಿ, ಸಾಮರ್ಥ್ಯ ಅನನ್ಯ ಮುಖ್ಯಮಂತ್ರಿ ಬೊಮ್ಮಾಯಿ

Social Share :

ಮುಂದಿನ ದಿನಗಳಲ್ಲಿ ಮಹಿಳೆಯರು ರಾಜ್ಯವನ್ನು ಆರ್ಥಿಕತೆಯ ಸಬಲತೆಯತ್ತ ಕೊಂಡೊಯ್ಯಬಲ್ಲರು ಎಂಬ ವಿಶ್ವಾಸವಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಮಹಿಳೆಯರು ಸಾಮರ್ಥ್ಯ ಹಾಗೂ ಕಾರ್ಯಕ್ಷೇತ್ರದಲ್ಲಿನ ಸಾಧನೆಗಳಿಂದ ವರ್ಷದ ಪ್ರತಿ ದಿನವೂ ಮಹಿಳಾ ದಿನಾಚರಣೆಯನ್ನು ಆಚರಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶ್ರೀ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ಮಾರ್ಚ್ 8ರಂದು ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಹಿಳೆಯರ ಪ್ರಾಮಾಣಿಕತೆ, ಪರಿಶ್ರಮ ಹಾಗೂ ಉಳಿತಾಯದ ಚಾಕಚಕ್ಯತೆಗಳಿಗೆ ಸೂಕ್ತ ಅವಕಾಶ ಹಾಗೂ ಮಾರ್ಗದರ್ಶನ ನೀಡಿದರೆ ಅವರೂ ನವೋದ್ಯಮಿಗಳಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಬಾರಿಯ ಆಯವ್ಯಯವನ್ನು ರೂಪಿಸಲಾಗಿದೆ. ಸ್ವ ಸಹಾಯ ಸಂಘಕ್ಕೆ 1.50 ಲಕ್ಷ ಆರ್ಥಿಕ ನೆರವು, ಸುಲಭ ಸಾಲ ಸೌಲಭ್ಯ, ಉದ್ಯೋಗ, 43,118 ಕೋಟಿ ರೂ. ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ ಎಂದರು.

ಉಳಿತಾಯ ಸಂಸ್ಕೃತಿ..
ಭಾರತದಲ್ಲಿ ಉಳಿತಾಯ ಸಂಸ್ಕೃತಿ ಮಹಿಳೆಯರಿಂದ ಬಂದಿದೆ. ಪಾಶ್ಚಿಮಾತ್ಯದಲ್ಲಿ ಖರ್ಚು ಮಾಡುವ ಸಂಸ್ಕೃತಿಯಿದೆ. ಅಮೆರಿಕಾದಲ್ಲಿ ಬ್ಯಾಂಕ್ ನಷ್ಟ ಹೊಂದಿದ್ದರೆ ಆಪದ್ಧನದ ಮಾರ್ಗವೇ ಇರುವುದಿಲ್ಲ. ಆದರೆ ಭಾರತದಲ್ಲಿ ಮಹಿಳೆಯರು ಖರ್ಚಿನ ಬಾಬ್ತಿನಲ್ಲಿ ಚಾಕಚಕ್ಯತೆಯಿಂದ ಹಣವನ್ನು ಆಪದ್ಧನವಾಗಿ ಉಳಿತಾಯ ಮಾಡಿರುತ್ತಾರೆ. ಅದೇ ಒಂದು ಕುಟುಂಬದ ಬಂಡವಾಳ ಎಂದು ತಿ
ಹೊಗಳಿದರು.

ವೀರ ನಾರಿಯರು ಪ್ರೇರಣಾ ಶಕ್ತಿ..
ಶಕ್ತಿ ದೇವತೆಗಳೆಲ್ಲಾ ಸ್ತ್ರೀ ಸ್ವರೂಪವೇ. ವೀರಮಹಿಳೆಯರ. ಬ್ರಿಟೀಷರ ವಿರುದ್ಧ ವೀರಾವೇಶದಿಂದ ಹೋರಾಡಿದ ವೀರ ನಾರಿಯರು ನಮಗೆಲ್ಲಾ ಪ್ರೇರಣಾ ಶಕ್ತಿ. ಯುವಪೀಳಿಗೆಗೆ ವೀರವನಿತೆಯರ ಜೀವನ ಸಾಧನೆಗಳ ಪರಿಚಯಿಸುವ ಸಲುವಾಗಿ ಕೆಳದಿ ಚೆನ್ನಮ್ಮ, ಒನಕೆ ಓಬವ್ವ ರಂತಹ ವೀರವನಿತೆಯರ ಜನ್ಮ ದಿನಾಚರಣೆಯನ್ನು ಸರ್ಕಾರ ಆಚರಣೆ ಮಾಡಿದೆ.

ದುಡಿಮೆಯೇ ದೊಡ್ಡಪ್ಪ..
ಬಡ ಹೆಣ್ಣುಮಕ್ಕಳು ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮಗಳ ಸಹಾಯದಿಂದ ಆರ್ಥಿಕವಾಗಿ ಸಬಲರಾದರೆ, ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೂ ಕೊಡುಗೆ ನೀಡಬಹುದು. ವಿಜ್ಞಾನ, ಕ್ರೀಡೆ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಮುಂದಿರುವ ಮಹಿಳೆಯರು’ದುಡಿಮೆಯೇ ದೊಡ್ಡಪ್ಪ’ ಎನ್ನುವ ಮಾತನ್ನು ಅರ್ಥಪೂರ್ಣಗೊಳಿಸಬಲ್ಲರು. ಮಹಿಳೆಯರು ತಮ್ಮ ಕ್ರಿಯಾಶೀಲತೆಯಿಂದ ಉತ್ತಮ ನಾಡು ಕಟ್ಟಬಲ್ಲರು. ಲಿಂಗ ಸಮಾನತೆ ಹಾಗೂ ಸುಸ್ಥಿತ ಭವಿಷ್ಯದ ಧ್ಯೇಯವಾಕ್ಯದ ಅಂತರರಾಷ್ಟ್ರೀಯ ಮಹಿಳಾ ದಿನದ ಆಚರಣೆ ಸಾರ್ಥಕವಾಗಲಿ ಎಂದು ತಿಳಿಸಿದರು.

Social Share :

ದೇವೇಗೌಡರ ಕೈಯಲ್ಲಿ ‘ಇಬ್ರಾಹಿಂ’ ಒಂದು ಅಸ್ತ್ರವಾಗಬಹುದೇ?

Social Share :

ಸಿ.ರುದ್ರಪ್ಪ
ಹಿರಿಯ ರಾಜಕೀಯ ವಿಶ್ಲೇಷಕರು

ರಾಜಕಾರಣದಲ್ಲಿ ದಿಢೀರನೆ ಬೆಳಕಿಗೆ ಬರುವವರ ಬಗ್ಗೆ ಕುತೂಹಲ ಸಹಜ.”who is janardhana pujari?(ಯಾರು ಜನಾರ್ಧನ ಪೂಜಾರಿ?)”.ಇದು ತುರ್ತು ಪರಿಸ್ಥಿತಿ ನಂತರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ವರದಿಯೊಂದರ ಶೀರ್ಷಿಕೆಯಾಗಿತ್ತು.ಮಂಗಳೂರು ಕ್ಷೇತ್ರದ ಹಾಲಿ ಸದಸ್ಯರಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಕೆ.ಕೆ.ಶೆಟ್ಟಿಯವರಿಗೆ ಟಿಕೆಟ್ ತಪ್ಪಿಸಿ ಜನಾರ್ಧನ ಪೂಜಾರಿಯವರಿಗೆ ಅವಕಾಶ ಕಲ್ಪಿಸಲಾಗಿತ್ತು.ಅವರು ಪ್ರಸಿದ್ಧ ಕ್ರಿಮಿನಲ್ ಲಾಯರ್ ಯೂಸುಫ್ ಹೈದರ್ ಅವರ ಜೂನಿಯರ್ ಆಗಿದ್ದರು.ಕಾಂಗ್ರೆಸ್ ಸದಸ್ಯರೂ ಆಗಿರಲಿಲ್ಲ.ಈ ಬಿಲ್ಲವ ಯುವಕನ ಬಗ್ಗೆ ಪತ್ರಕರ್ತ ಗೇಬ್ರಿಯಲ್ ವಾಜ್ ತಮ್ಮ ವರದಿಯಲ್ಲಿ ಹೀಗೆ ಕುತೂಹಲ ವ್ಯಕ್ತಪಡಿಸಿದ್ದರು.
ಇದೇ ರೀತಿ 1971 ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷದ ಟಿಕೇಟನ್ನು ಗಿಟ್ಟಿಸಿಕೊಂಡಿದ್ದ ಸೇವಾದಳದ ಸಾಮಾನ್ಯ ಕಾರ್ಯಕರ್ತ ಸಿ.ಕೆ.ಜಾಫರ್ ಷರೀಫ್ ಬಗ್ಗೆಯೂ ಕುತೂಹಲ ವ್ಯಕ್ತವಾಗಿತ್ತು.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಈ ಚುರಕಾದ ಯುವಕನನ್ನು ಎಸ್.ನಿಜಲಿಂಗಪ್ಪ

– [ ] ನವರು ಬೆಂಗಳೂರಿನ ಕಾಂಗ್ರೆಸ್ ಕಚೇರಿಗೆ ಕರೆದುಕೊಂಡು ಬಂದಿದ್ದರು.ಆದರೆ ಜಾಫರ್ ಷರೀಫ್ ,ನಿಜಲಿಂಗಪ್ಪ ಕ್ಯಾಂಪಿನ ವಿದ್ಯಮಾನಗಳನ್ನು ಪ್ರಧಾನಿ ಇಂದಿರಾ ಗಾಂಧಿಯವರಿಗೆ ರಹಸ್ಯವಾಗಿ ರವಾನಿಸಿ ಅವರ ವಿಶ್ವಾಸವನ್ನು ಗಳಿಸಿದ್ದರು.

– [ ] ಅದೇ ರೀತಿ 1973 ರ ಸುಮಾರಿಗೆ ರಾಜ್ಯ ರಾಜಕೀಯ ವಲಯದಲ್ಲಿ”ಈ ಸಿ ಎಂ ಇಬ್ರಾಹಿಂ ಯಾರು?”ಎಂಬ ಪ್ರಶ್ನೆ ಉದ್ಭವಿಸಿತ್ತು.ಒಂದು ದಿನ ಲಾಲ್ ಬಾಗಿನ ಗಾಜಿನಮನೆಯಲ್ಲಿ ಸಂಸ್ಥಾ ಕಾಂಗ್ರೆಸ್ಸಿನ ರಾಜ್ಯ ಮಟ್ಟದ ಯುವಜನ ಸಮಾವೇಶ ನಡೆಯುತ್ತಿತ್ತು.ವೇದಿಕೆಯ ನೆಲಹಾಸಿನ ಮೇಲೆ ವೀರೇಂದ್ರ ಪಾಟೀಲ್,ರಾಮಕೃಷ್ಣ ಹೆಗಡೆ,ಎಚ್ ಡಿ ದೇವೇಗೌಡ ಮೊದಲಾದ ನಾಯಕರು ಗಹನ ಸಮಾಲೋಚನೆಯಲ್ಲಿ ತೊಡಗಿದ್ದರು.ವೇದಿಕೆಯ ತುದಿಯಲ್ಲಿ ಒಂದು ಮೈಕ್ ಇಟ್ಟಿದ್ದರು.ವಿವಿಧ ಜಿಲ್ಲೆಯ ಯುವ ಮುಖಂಡರು ಭಾಷಣ ಮಾಡಿ ಹೋಗುತ್ತಿದ್ದರು.ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷ ಎಚ್ ಸಿ ಪ್ರಕಾಶ್ ಅವರ ಸರದಿ ಬಂದಿತು.ಆದರೆ ಅವರಿಗೆ ಸ್ಟೇಜ್ ಫಿಯರ್ ಶುರುವಾಯಿತು.ತಮ್ಮೊಂದಿಗೆ ಕಾರ್ಯಕರ್ತರ ನಿಯೋಗದಲ್ಲಿ ಬಂದಿರುವ ಭದ್ರಾವತಿಯ ಯುವಕ ಸಿ.ಎಂ.ಇಬ್ರಾಹಿಂ ಅವರೇ ತಮ್ಮ ಬದಲು ವೇದಿಕೆಯಲ್ಲಿ ಮಾತನಾಡಲು ಸರಿಯಾದ ವ್ಯಕ್ತಿ ಎಂದು ಅವರಿಗೆ ಅನ್ನಿಸಿತು.ರಾಜ್ಯೋತ್ಸವ,ಗಣೇಶೋತ್ಸವ ಗಳಲ್ಲಿ ಮತ್ತು ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ವಿದ್ಯಾರ್ಥಿ ಹೋರಾಟಗಳಲ್ಲಿ ಇಬ್ರಾಹಿಂ ಮಾಡುತ್ತಿದ್ದ ಅದ್ಭುತವಾದ ಭಾಷಣಗಳು ಅವರ ನೆನಪಿಗೆ ಬಂದವು.

– [ ] ಲಿಂಗಾಯತ ಮಠವೊಂದರಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದ ಇಬ್ರಾಹಿಂ,ಶರಣರ ವಚನಗಳನ್ನು ಕವಿಪುಂಗವರ ನುಡಿಮುತ್ತುಗಳನ್ನು ಪೋಣಿಸಿ, ದೇಶ-ವಿದೇಶಗಳ ವಿದ್ಯಮಾನಗಳ ಬಗ್ಗೆ ಮಾಡಿದ ವಿಶಿಷ್ಠ ಶೈಲಿಯ ಭಾಷಣ ಸಭಾಂಗಣದಲ್ಲಿ ಮಾರ್ದನಿಸಿತು.ಆಗ ಮೊದಲ ಬಾರಿಗೆ ಮುಖಂಡರು ಇಬ್ರಾಹಿಂ ಅವರತ್ತ ತಲೆ ಎತ್ತಿ ನೋಡಿದರು.ವೀರೇಂದ್ರ ಪಾಟೀಲ್ ಮಾರನೆಯ ದಿನವೇ ಇಬ್ರಾಹಿಂ ಅವರನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು.ಇಬ್ರಾಹಿಂ ರಾಜ್ಯ ರಾಜಕಾರಣಕ್ಕೆ ದೊಡ್ಡ ಮಟ್ಟದ ಪ್ರವೇಶ ಪಡೆದರು.ಮುಸ್ಲಿಂ ನಾಯಕರೆಲ್ಲಾ ದೇವರಾಜ ಅರಸು ಕ್ಯಾಂಪಿಗೆ ಜಿಗಿದಿದ್ದರು.ಸಂಸ್ಥಾ ಕಾಂಗ್ರೆಸ್ ನಲ್ಲಿ ಯಾರೂ ಇರಲಿಲ್ಲ.ಆ ಕೊರತೆಯನ್ನು ಇಬ್ರಾಹಿಂ ತುಂಬಿದರು.ಆಗ ಅವರೊಬ್ಬ ಗ್ಲಾಮರಸ್ ಯುವ ನಾಯಕ.1978 ರಲ್ಲಿ ಜನತಾ ಪಕ್ಷದಿಂದ ಶಿವಾಜಿ ನಗರ ಕ್ಷೇತ್ರದ ಶಾಸಕರಾದರು.ವೀರೇಂದ್ರ ಪಾಟೀಲ್ ಜೊತೆಗೆ ಇಂದಿರಾ ಕಾಂಗ್ರೆಸ್ಸಿಗೆ ಮರಳಿದ ಇಬ್ರಾಹಿಂ,ಗುಂಡೂರಾವ್ ಸಂಪುಟದಲ್ಲಿ ಸಚಿವರಾದರು.

– [ ] ತಮ್ಮ ಹರಿತವಾದ ನಾಲಗೆಯನ್ನು ಯಾವ ದಿಕ್ಕಿಗೆ ಬೇಕಾದರೂ ಹೊರಳಿಸಿ ಭಾಷಣ ಮಾಡುವ ಕಲೆಯನ್ನು ಸಿದ್ಧಿಸಿಕೊಂಡಿರುವ ಇಬ್ರಾಹಿಂ ಅವರನ್ನು ಬಳಸಿಕೊಳ್ಳಲು ಅನೇಕ ನಾಯಕರು ಪ್ರಯತ್ನಿಸಿದ್ದಾರೆ.1994 ರಲ್ಲಿ ದೇವೇಗೌಡರು ಅಧಿಕಾರದ ದಡವನ್ನು ತಲುಪಲು ಇಬ್ರಾಹಿಂ ವಿಶೇಷವಾಗಿ ಪ್ರಯತ್ನಿಸಿದ್ದರು.ದೇವೇಗೌಡರಿಗಾಗಿ ರಾಜ್ಯದಲ್ಲೆಡೆ ಮುಸ್ಲಿಂ ಮುಖಂಡರ ಸಭೆಗಳನ್ನು ಸಂಘಟಿಸಿದ್ದರು.ದೇವೇಗೌಡರು ಪ್ರಧಾನಿಯಾದಾಗ ಇಬ್ರಾಹಿಂ ನಾಗರೀಕ ವಿಮಾನಯಾನ ಸಚಿವರಾಗಿದ್ದರು.ದೇವೇ ಗೌಡರಿಗೆ ಹಿಂದಿ ಚೆನ್ನಾಗಿ ಬರುತ್ತಿರಲಿಲ್ಲ.ಅವರು ಹಲವು ಸುತ್ತು ಉತ್ತರ ಭಾರತದ ಪ್ರವಾಸಗಳನ್ನು ಹಮ್ಮಿಕೊಂಡಿದ್ದರು.ಆಗ ಅವರನ್ನು ಅಲ್ಲಿನ ಜನರಿಗೆ ಪರಿಚಯಿಸಲು ಇಬ್ರಾಹಿಂ ಮಾಡುತ್ತಿದ್ದ ಹಿಂದೂಸ್ತಾನಿ ಭಾಷಣಗಳು ಜನಪ್ರಿಯವಾಗಿದ್ದವು.

– [ ] ನಂತರ ಸಿದ್ದರಾಮಯ್ಯನವರ ತೆಕ್ಕೆಗೆ ಜಾರಿದ ಇಬ್ರಾಹಿಂ ಅಹಿಂದ ಸಮಾವೇಶಗಳಲ್ಲಿ ಸಾವಿರಾರು ಜನರನ್ನು ತಮ್ಮ ಅಮೋಘವಾದ ಭಾಷಣಗಳ ಮೂಲಕ ರಂಜಿಸಿದರು.2013 ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತಮಗೆ ಮಂತ್ರಿ ಸ್ಥಾನ ನೀಡಬಹುದೆಂದು ನಿರೀಕ್ಷಿಸಿದ್ದರು. ಅದು ಹುಸಿಯಾಯಿತು.ಇತ್ತೀಚಿಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನವೂ ಕೈ ತಪ್ಪುತ್ತಿದ್ದಂತೆ ಇಬ್ರಾಹಿಂ ಸಿದ್ದರಾಮಯ್ಯನವರ ವಿರುದ್ಧ ಸಿಡಿದಿದ್ದಾರೆ.

– [ ] ಈ ಬೆಳವಣಿಗೆಯಿಂದ ದೇವೇಗೌಡರ ಮನಸ್ಸಿಗೆ ಸ್ವಲ್ಪ ಸಮಾಧಾನವಾಗಿದ್ದರೆ ಯಾರೂ ಆಶ್ಚರ್ಯಪಡಬೇಕಿಲ್ಲ.ಅವರು ಯೋಗಸಾಧನೆ ಮೂಲಕ ತಮ್ಮ ಇಳಿ ವಯಸ್ಸಿನಲ್ಲಿಯೂ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ.ಆದರೆ ಅವರ ಮನಸ್ಸಿಗೆ ನೆಮ್ಮದಿ ಇದೆಯೇ ಎಂಬ ಪ್ರಶ್ನೆಗೆ ಉತ್ತರ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಬೇಡ ಬೇಡವೆಂದರೂ ಅವರ ಮನಸ್ಸಿನೊಳಗೆ ಕೆಲವು ನೆನಪುಗಳು ಮತ್ತು ಸಂಗತಿಗಳು ನುಗ್ಗಿ ಬರುತ್ತಿವೆ:

– [x] 1.ವಿಧಾನ ಸೌಧದ ಮುಖ್ಯಮಂತ್ರಿಯವರ ಕೊಠಡಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಫೋಟೊ ಇತ್ತು.ಜೆ.ಎಚ್ .ಪಟೇಲ್ ಎಸ್.ಎಂ.ಕೃಷ್ಣ,ಧರಂ ಸಿಂಗ್,ಯಡಿಯೂರಪ್ಪ,ಡಿ.ವಿ.ಸದಾನಂದ ಗೌಡ,ಜಗದೀಶ್ ಶೆಟ್ಟರ್ ಹೀಗೆ ಯಾವ ಮುಖ್ಯಮಂತ್ರಿಯೂ ಆ ಫೋಟೋವನ್ನು ತೆಗೆಸಿರಲಿಲ್ಲ.ಆದರೆ 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಅದನ್ನು ತೆಗೆಸಿಬಿಟ್ಟರು.

– [x] 2.2018 ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿಯವರು “ಜೆಡಿಎಸ್ ಬಿಜೆಪಿಯ ಬಿ ಟೀಮ್”ಎಂದು ಟೀಕಿಸಿದ್ದರು .ಅದರಿಂದಾಗಿ ಜೆಡಿಎಸ್ ಹಲವು ಸೀಟುಗಳನ್ನು ಕಳೆದುಕೊಳ್ಳಬೇಕಾಯಿತು.ರಾಹುಲ್ ಗಾಂಧಿಯವರಿಂದ ಈ ಹೇಳಿಕೆಯನ್ನು ಕೊಡಿಸಿದ್ದು ಸಿದ್ದರಾಮಯ್ಯನವರೇ ಎನ್ನುವುದು ದೇವೇಗೌಡರಿಗೆ ಚೆನ್ನಾಗಿ ಗೊತ್ತು.”ಈ ಹೇಳಿಕೆಯಿಂದ ಡ್ಯಾಮೇಜ್ ಆಯಿತು.ಇಲ್ಲದಿದ್ದರೆ ನಮಗೆ 60 ಸೀಟು ಬರುತ್ತಿದ್ದವು”ಎಂದು ದೇವೇಗೌಡರು ದಿ ಹಿಂದೂ ಪತ್ರಿಕೆ ಸಂದರ್ಶನದಲ್ಲಿ ಹೇಳಿದ್ದರು.

– [x] 3. ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗುತ್ತಿದ್ದಂತೆ ಸಿದ್ದರಾಮಯ್ಯನವರ ನಡವಳಿಕೆಯಲ್ಲಿ ಬದಲಾವಣೆಯನ್ನು ದೇವೇಗೌಡರು ಗುರ್ತಿಸಿದ್ದರು.ವಿಧಾನಸಭೆಯಲ್ಲಿ ರೈತರ ಸಾಲ ಮನ್ನಾ ಮತ್ತು ಬಜೆಟ್ ಮೇಲಿನ ಚರ್ಚೆಗಳಿಗೆ ಕುಮಾರಸ್ವಾಮಿಯವರು ಉತ್ತರ ಹೇಳುತ್ತಿದ್ದಾಗ ಸಿದ್ದರಾಮಯ್ಯನವರು ಸದನದಿಂದ ಎದ್ದು ಹೋಗುತ್ತಿದ್ದುದನ್ನು ಕೂಡಾ ದೇವೇಗೌಡರು ಗಮನಿಸಿದ್ದರು.”siddaramaiah was not even in the assembly when mr kumaraswamy spoke during the three day session recently”ಎಂದು ದೇವೇಗೌಡರು ದಿ ಹಿಂದೂ ಪತ್ರಿಕೆ ಸಂದರ್ಶನದಲ್ಲಿ ಹೇಳಿರುವುದು ಗಮನಾರ್ಹ.

– [x] 4.ಜಮೀರ್ ಅಹ್ಮದ್ ಮೊದಲಾದ ತಾವೇ ಬೆಳೆಸಿದ್ದ ಮುಸ್ಲಿಂ ನಾಯಕರನ್ನು ಸಿದ್ದರಾಮಯ್ಯ ಹೈಜಾಕ್ ಮಾಡುತ್ತಿದ್ದಾರೆ ಎಂಬ ಬೇಸರವೂ ದೇವೇಗೌಡರಿಗೆ ಇದೆ.”they also wooed one or two muslim leaders who were with me”ಎಂದು ಅವರು ಅದೇ ಸಂದರ್ಶನದಲ್ಲಿ ಹೇಳಿದ್ದರು.

– [x] 5.ಸಮ್ಮಿಶ್ರ ಸರ್ಕಾರ ಯಶಸ್ವಿಯಾದರೆ ರಾಜ್ಯ ರಾಜಕಾರಣದ ಮೇಲಿನ ತಮ್ಮ ಹಿಡಿತ ತಪ್ಪಿಹೋದೀತೆಂಬ ಆತಂಕದಿಂದಲೇ ಸಿದ್ದರಾಮಯ್ಯ,ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಪಿತೂರಿ ಮಾಡಿರಬಹುದೆಂಬ ಅನುಮಾನ ದೇವೇಗೌಡರಿಗೆ ಮೊದಲಿಂದಲೂ ದಟ್ಟವಾಗಿತ್ತು.

– [ ] ಅಧಿಕಾರವಿರಲಿ ಅಥವಾ ಇಲ್ಲದಿರಲಿ ಹಲವು ದಶಕಗಳಿಂದ ರಾಜಕಾರಣದ ದಾಳಗಳನ್ನು ಲೀಲಾಜಾಲವಾಗಿ ಉರುಳಿಸುತ್ತಾ ಬಂದಿರುವ ದೇವೇಗೌಡರಿಗೆ ಈಗ ಸಿದ್ದರಾಮಯ್ಯನವರೇ ಒಂದು ತೊಡರುಗಾಲು ಆಗಿರುವುದು ಸ್ಪಷ್ಟ.ಕಳೆದ ವರ್ಷ ದೇವೇಗೌಡರು”ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ದೆಹಲಿಗೆ ತೆರಳಲಿ”ಎಂಬ ಸಲಹೆ ನೀಡಿದ್ದರು.ಅವರು ಏಕೆ ಅಂತಹ ಹೇಳಿಕೆ ನೀಡಿದರು ಎಂಬುದು ಬಹಳ ಜನರಿಗೆ ಆಗ ಅರ್ಥವಾಗಿರಲಿಲ್ಲ.

– [ ] ಸಿದ್ದರಾಮಯ್ಯನವರ ಸುತ್ತಲೂ ಕ್ರೋಢೀಕರಣವಾಗುತ್ತಿರುವ ಮುಸ್ಲಿಂ ಮತಗಳನ್ನು ಚದುರಿಸಲು ದೇವೇಗೌಡರು ಇಬ್ರಾಹಿಂ ಅವರನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದೇ? ಎಂಬ ಕುತೂಹಲ ಸಹಜ.ಈ ಅಸ್ತ್ರ ಮೊದಲಿನ ಮೊನಚನ್ನು ಉಳಿಸಿಕೊಂಡಿದೆಯೇ?2013 ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಊರು ಭದ್ರಾವತಿಯಲ್ಲಿ ಇಬ್ರಾಹಿಂ ಮೂರನೇ ಸ್ಥಾನಕ್ಕೆ ಕುಸಿದಿದ್ದರು.ಇಬ್ರಾಹಿಂ ಈಗ ಚಿತ್ರ-ವಿಚಿತ್ರವಾಗಿ ಮಾತನಾಡುತ್ತಿದ್ದಾರೆ.”ನನ್ನ ಮನಸ್ಸು ಪರಿಶುದ್ಧವಾಗಿದೆ.ನಾನು ಶಾಪ ಹಾಕಿದರೆ ಅದು ಘೋರ ಪರಿಣಾಮವನ್ನು ಬೀರುತ್ತದೆ”ಎಂದು ಅವರು ದೂರ್ವಾಸ ಮುನಿಯ ರೀತಿ ಮಾತನಾಡುತ್ತಾ ರಾಜಕಾರಣಕ್ಕೆ ಪೌರಾಣಿಕ ಟಚ್ ಕೊಡಲು ಪ್ರಯತ್ನಿಸುತ್ತಿದ್ದಾರೆ.”ಆರ್ ಎಸ್ ಎಸ್ ನಲ್ಲಿಯೂ ಒಳ್ಳೆಯವರಿದ್ದಾರೆ.ಭಾವೂರಾವ್ ದೇಶಪಾಂಡೆ ಅವರ ಕಾಲಲ್ಲಿ ಚಪ್ಪಲಿಯೇ ಇರಲಿಲ್ಲ.ಜಗನ್ನಾಥ ರಾವ್ ಜೋಶಿಯವರ ಬಳಿ ಆಸ್ಪತ್ರೆ ಬಿಲ್ ಕಟ್ಟಲು ದುಡ್ಡೇ ಇರಲಿಲ್ಲ”ಎನ್ನುತ್ತಾ ಬಿಜೆಪಿಯ ಬಿ ಟೀಮಿನವರ ರೀತಿ ಮಾತನಾಡುತ್ತಿದ್ದಾರೆ.ಇಬ್ರಾಹಿಂ ಅವರನ್ನು ಜನ ಗಂಭೀರವಾಗಿ ಪರಿಗಣಿಸುತ್ತಾರೆಯೇ?ಅಥವಾ ಅವರ ಭಾಷಣಗಳು ಕೇವಲ ಮನರಂಜನೆಗೆ ಸೀಮಿತವಾಗುತ್ತವೆಯೇ?.ಈ ಪ್ರಶ್ನೆಗಳಿಗೆ ಮುಂದೆ ಉತ್ತರ ಸಿಗಬೇಕಾಗಿದೆ.

Social Share :

ಆಡಳಿತಕ್ಕೆ ಮೇಜರ್ ಸರ್ಜರಿ ತೀವ್ರ ಒತ್ತಡದಲ್ಲಿ ಸಿಎಂ

Social Share :

🖋ಸಿ. ರುದ್ರಪ್ಪ 
ಹಿರಿಯ ರಾಜಕೀಯ ವಿಶ್ಲೇಷಕರು

ಆಡಳಿತಕ್ಕೆ ಮೇಜರ್ ಸರ್ಜರಿ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಒತ್ತಡದಲ್ಲಿ ಸಿಲುಕಿದ್ದಾರೆ.

ಯಾವುದೇ ನೂತನ ಮುಖ್ಯಮಂತ್ರಿ ತಮ್ಮ ವೇಗ ಮತ್ತು ದೃಷ್ಟಿಕೋನಕ್ಕೆ ತಕ್ಕಂತೆ ಕೆಲಸ ಮಾಡುವ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳಿಗೆ ನೇಮಿಸಿಕೊಳ್ಳುವ ಮೂಲಕ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡುವುದು ಸಹಜ ಪ್ರಕ್ರಿಯೆ.

ಆದರೆ ಬೊಮ್ಮಾಯಿಯವರಿಗೆ ಒಂದೂವರೆ ತಿಂಗಳಾದರೂ ಅದು ಸಾಧ್ಯವಾಗಿಲ್ಲ.ಅದಕ್ಕಿಂತ ಮೊದಲು ಮುಖ್ಯಮಂತ್ರಿಯವರ ಕಾರ್ಯಾಲಯದಲ್ಲಿ(ಸಿಎಂಒ)ತಮ್ಮ ವಿವೇಚನೆಗೆ ಅನುಗುಣವಾಗಿ ಸ್ವತಂತ್ರ ಮತ್ತು ಪರಿಪೂರ್ಣ ತಂಡವನ್ನು ರಚಿಸಿಕೊಳ್ಳುವುದೂ ಸಾಧ್ಯವಾಗಿಲ್ಲ.ಸಾಮಾನ್ಯವಾಗಿ ಒಂದೇ ಪಕ್ಷದ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಬದಲಾದಾಗ ಕೆಲವು ಅದಕ್ಷ ಮತ್ತು  ಭ್ರಷ್ಟರನ್ನು ಬಿಟ್ಟು ಬಹುತೇಕ ಹಳೆಯ ತಂಡವನ್ನೇ ಮುಂದುವರಿಸುವುದು ವಾಡಿಕೆ.ಈ ಹಿಂದೆ ಯಡಿಯೂರಪ್ಪನವರ ನಂತರ ಡಿ ವಿ ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾದಾಗ ಸಿಎಂ ಕಚೇರಿಯಲ್ಲಿ ಬಹುತೇಕ ಹಳೆಯ ತಂಡವೇ ಮುಂದುವರಿದಿತ್ತು.

ಆದರೆ ಈ ಬಾರಿ ಸಂಪೂರ್ಣವಾಗಿ ಹೊಸ ತಂಡವನ್ನೇ ರಚಿಸಿಕೊಳ್ಳುವಂತೆ ಆರ್ ಎಸ್ ಎಸ್ ಸ್ಪಷ್ಟವಾಗಿ ಸೂಚಿಸಿದೆ ಎನ್ನಲಾಗಿದೆ.ಸಂಘ ಪರಿವಾರದ ಸಿದ್ದಾಂತ ಮತ್ತು ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರು ಇದ್ದರೆ ಉತ್ತಮ ಎಂಬ ಆಶಯ ವ್ಯಕ್ತವಾಗಿದೆ.

ಮುಖ್ಯಮಂತ್ರಿಯವರ ಕಾರ್ಯಾಲಯದಲ್ಲಿ ಮೂರನೇ ಒಂದು ಭಾಗದಷ್ಟು ಸಿಬಂದಿಯನ್ನು ಭರ್ತಿ ಮಾಡಲು ಕೂಡ ಇನ್ನೂ ಸಾಧ್ಯವಾಗಿಲ್ಲ.ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ,ಜಂಟಿ ಕಾರ್ಯದರ್ಶಿ,ಕಾರ್ಯದರ್ಶಿ,ವಿಶೇಷ ಕರ್ತವ್ಯಾಧಿಕಾರಿ ಸೇರಿದಂತೆ ಕೇವಲ ಏಳು ಹಿರಿಯ ಅಧಿಕಾರಿಗಳು ಮಾತ್ರ ನೇಮಕಗೊಂಡಿದ್ದಾರೆ.ಅದರಲ್ಲಿ ಇಬ್ಬರನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಿವಾಸದಲ್ಲಿ ಕರ್ತವ್ಯದ ಮೇಲೆ ನಿಯೋಜಿಸಲಾಗಿದೆ.

ಹೀಗೆ ನೇಮಕಗೊಂಡವರೆಲ್ಲರೂ ಮುಖ್ಯಮಂತ್ರಿಯವರಿಗೆ ನೇರವಾಗಿ ನಿಷ್ಠರಾದವರೇನಲ್ಲ.ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಬಿಬಿಎಂಪಿ ಆಯುಕ್ತರಾಗಿದ್ದಾಗ ಹಿರಿಯ ಸಚಿವ ಆರ್ ಅಶೋಕ್ ಅವರಿಗೆ ಅನ್ಯೋನ್ಯವಾಗಿದ್ದ ರು.ಹೀಗಾಗಿ ಅವರ ನೇಮಕದಲ್ಲಿ ಅಶೋಕ್ ಅವರ ಪ್ರಭಾವ ಕೆಲಸ ಮಾಡಿದೆ ಎನ್ನಲಾಗಿದೆ.ಮುಖ್ಯ ಮಂತ್ರಿಯವರ ಕಾರ್ಯದರ್ಶಿ ವಿ ಪೊನ್ನುರಾಜ್ ,ಈ ಹಿಂದೆ ಮಂಗಳೂರು  ಜಿಲ್ಲಾಧಿಕಾರಿಯಾಗಿ ಮತ್ತು ಡಿ ವಿ ಸದಾನಂದಗೌಡರು ಕೇಂದ್ರ ಮಂತ್ರಿಯಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿ ಸಂಘಪರಿವಾರದ ಅಗತ್ಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ಅವರ ನೇಮಕದ ಹಿಂದೆ ಆರ್ ಎಸ್ ಎಸ್ ಪ್ರಭಾವ ಇದ್ದರೆ ಆಶ್ಚರ್ಯಪಡಬೇಕಿಲ್ಲ. ಮತ್ತೊಬ್ಬ ಕಾರ್ಯದರ್ಶಿ ಜಗದೀಶ್ ಉಡುಪಿ ಜಿಲ್ಲಾಧಿಕಾರಿಯಾಗಿದ್ದರು. ಬೊಮ್ಮಾಯಿ ಈ ಹಿಂದೆ ಉಡುಪಿ ಉಸ್ತುವಾರಿ‌ ಸಚಿವರಾಗಿದ್ದರು.
ಆಗಿನಿಂದಲೂ ಜಗದೀಶ್ , ಬೊಮ್ಮಾಯಿಯವರ  ವಿಶ್ವಾಸವನ್ನು ಗಳಿಸಿದ್ದಾರೆ. ಜೊತೆಗೆ ಕರಾವಳಿಯಲ್ಲಿ ಹಾಸು ಹೊಕ್ಕಾಗಿರುವ ಸಂಘ ಪರಿವಾರದ ವಿಚಾರಗಳಿಗೂ ಒಗ್ಗಿಕೊಂಡಿದ್ದಾರೆ ಎನ್ನಲಾಗಿದೆ.

ಈ ನಡುವೆ ಬಿಜೆಪಿ ವಕ್ತಾರರೊಬ್ಬರು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾಗಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ದೊಡ್ಡ ಮಟ್ಟದ ವರ್ಗಾವಣೆ ಆಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ಮುಖ್ಯಮಂತ್ರಿಯವರು ಕೇವಲ 8-10 ಅಧಿಕಾರಿಗಳ ವರ್ಗಾವಣೆ ಬಿಟ್ಟರೆ ಇನ್ನೂ ಮೇಜರ್ ಸರ್ಜರಿಗೆ ಕೈ ಹಾಕಿಲ್ಲ. ಅಧಿಕಾರಶಾಹಿಯ ಅಮೂಲಾಗ್ರ ಬದಲಾವಣೆಯಾಗಬೇಕು ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಅವರ ಅವಧಿಯಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಅಧಿಕಾರಿಗಳ ಎತ್ತಂಗಡಿಯಾಗಬೇಕು ಎಂಬ  ಒತ್ತಡ ಪಕ್ಷದ ವಲಯದಿಂದ ಬಂದಿದೆ ಎನ್ನಲಾಗಿದೆ.

ಇದರ ಜೊತೆಗೆ ಕೆಲವು ನೂತನ ಸಚಿವರು ತಮಗೆ ಅನುಕೂಲವಾಗುವ ಅಧಿಕಾರಿಗಳು ಬೇಕೆಂಬ ಬೇಡಿಕೆ ಇಟ್ಟಿದ್ದಾರೆ.ಅಪ್ಪಟ ಪ್ರಾಮಾಣಿಕ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಬಿ ಸಿ ನಾಗೇಶ್ ಪ್ರಾಮಾಣಿಕ ಅಧಿಕಾರಿಗಳಿಗಾಗಿ ಹುಡುಕುತ್ತಿದ್ದಾರೆ. ಸಾವಿರಾರು ಕೋಟಿ ಬಜೆಟ್ಟಿನ ಸಮಾಜ ಕಲ್ಯಾಣ ಇಲಾಖೆಯ ಕೆಲವು ಉನ್ನತ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರದ ಕತೆಗಳನ್ನು ಕೇಳಿ ಪೂಜಾರಿಯವರು ಗಾಬರಿಯಾಗಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಯವರ ಅವಧಿಯಲ್ಲಿ  ಒಪ್ಪಂದ ಅಥವಾ ಕಮಿಟ್ ಮೆಂಟ್ ಆಗಿರುವ ಭಾರೀ ಬೆಲೆ ಬಾಳುವ ಕೆಲವು ಫೈಲುಗಳು ಇನ್ನೂ ಬಾಕಿ ಇವೆ. ಅವುಗಳಿಗೆ ಒಂದು ಮುಕ್ತಿ ದೊರೆಯುವವರೆಗೂ ಯಥಾಸ್ಥಿತಿ ಮುಂದುವರಿಸಬೇಕು. ಈಗಲೇ ದೊಡ್ಡ ಮಟ್ಟದ ವರ್ಗಾವಣೆ ಬೇಡ ಎಂಬ ಒತ್ತಡವೂ ಬಂದಿದೆ.ಆದ್ದರಿಂದ ಮುಖ್ಯಮಂತ್ರಿಯವರು ಸಂಕಟದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.ಈ ಹಿಂದೆ ಅಜ್ಞಾತ ಸ್ಥಳಗಳಿಂದ ಅಥವಾ ಅದೃಶ್ಯ ವ್ಯಕ್ತಿಗಳಿಂದ ಬರುತ್ತಿದ್ದ ಸೂಚನೆ ಅಥವಾ ಸಂಕೇತಗಳಿಗೆ(ಕೋಡ್ ವರ್ಡ್ಸ್) ಅನುಗುಣವಾಗಿ ಮುಖ್ಯ ಮಂತ್ರಿ ಕಾರ್ಯಾಲಯ ಪ್ರಮುಖ ಕಡತಗಳನ್ನು ಸಂಪುಟ ಸಭೆಯ ಕಾರ್ಯ ಕಲಾಪ ಪಟ್ಟಿಗೆ ಸೇರಿಸುವ ಸುಂದರವಾದ ವ್ಯವಸ್ಥೆ ಇತ್ತು. ಆದರೆ ನೂತನ ಮುಖ್ಯ ಮಂತ್ರಿಯವರು ಯಾವುದೇ ಅನೌಪಚಾರಿಕ, ಖಾಸಗಿ ಅಥವಾ ಆಫ್ ದಿ ರೆಕಾರ್ಡ್ ಮಾತುಕತೆಗೆ ಆಸ್ಪದ ನೀಡುತ್ತಿಲ್ಲ. ಎಲ್ಲವೂ ಅಧಿಕೃತವಾಗಿ ಮತ್ತು ನೇರಾ ನೇರ ನಡೆದುಕೊಂಡು ಹೋಗುತ್ತಿದೆ. ಇದರಿಂದಾಗಿ ವಿವಾದಾತ್ಮಕ ಅಥವಾ ಆಕರ್ಷಕ ಫೈಲುಗಳ ಬೆನ್ನು ಹತ್ತಿರುವ ಪುಡಾರಿಗಳು ಮತ್ತು ಪವರ್ broker ಗಳು ಕಂಗಾಲಾಗಿದ್ದಾರೆ. ಇಂತಹ ಫೈಲುಗಳು ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಸಲ್ಲಿಕೆಯಾಗದೆ ಇಲಾಖಾ ಮುಖ್ಯಸ್ಥರ ಮೇಜಿನ ಮೇಲೆಯೇ ಕೊಳೆಯುತ್ತಿವೆ. ಅಧಿಕಾರಿಗಳ ವರ್ಗಾವಣೆ ಬಗ್ಗೆ   ಮುಖ್ಯಮಂತ್ರಿಗಳು ಇಡುವ ಮುಂದಿನ ಹೆಜ್ಜೆಯ ಮೇಲೆ ಎಲ್ಲವೂ ಅವಲಂಭಿಸಿದೆ.

Social Share :